ADVERTISEMENT

ಮುಂಡಗೋಡ | ಯುಟ್ಯೂಬರ್‌ ಮುಕಳೆಪ್ಪ ವಿವಾಹ ಪ್ರಕರಣ: ಆರೋಪಿಗಳ ಬಂಧನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 2:36 IST
Last Updated 26 ಸೆಪ್ಟೆಂಬರ್ 2025, 2:36 IST
ಮುಂಡಗೋಡದಲ್ಲಿ ಶ್ರೀರಾಮಸೇನೆ ರಾಜ್ಯ ಘಟಕದ ಅಧ್ಯಕ್ಷ ಪ್ರಮೋದ ಮುತಾಲಿಕ್‌ ನೇತೃತ್ವದಲ್ಲಿ ವಿವಿಧ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು
ಮುಂಡಗೋಡದಲ್ಲಿ ಶ್ರೀರಾಮಸೇನೆ ರಾಜ್ಯ ಘಟಕದ ಅಧ್ಯಕ್ಷ ಪ್ರಮೋದ ಮುತಾಲಿಕ್‌ ನೇತೃತ್ವದಲ್ಲಿ ವಿವಿಧ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು   

ಮುಂಡಗೋಡ: ಯೂಟ್ಯೂಬರ್ ಖ್ವಾಜಾಬಂದೆ ನವಾಜ (ಮುಕಳೆಪ್ಪ) ನಕಲಿ ದಾಖಲೆ ನೀಡಿ ಮದುವೆ ಆಗಿರುವ ಪ್ರಕರಣದಲ್ಲಿ ಆರೋಪಿತರಾಗಿರುವ ಇಲ್ಲಿನ ಉಪನೋಂದಣಿ ಕಚೇರಿಯ ಅಧಿಕಾರಿ, ಸಿಬ್ಬಂದಿಯನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ, ಶ್ರೀರಾಮಸೇನೆ ರಾಜ್ಯ ಘಟಕದ ಅಧ್ಯಕ್ಷ ಪ್ರಮೋದ ಮುತಾಲಿಕ್‌ ನೇತೃತ್ವದಲ್ಲಿ ಪಟ್ಟಣದಲ್ಲಿ ಗುರುವಾರ ಪ್ರತಿಭಟಿಸಲಾಯಿತು.

ಇಲ್ಲಿನ ಪ್ರವಾಸಿ ಮಂದಿರದಿಂದ ಶಿವಾಜಿ ವೃತ್ತದ ವರೆಗೆ ನಡೆದ ಮೆರವಣಿಗೆಯಲ್ಲಿ ಪ್ರಮೋದ ಮುತಾಲಿಕ್ ಮಾತನಾಡಿ, ‘ಹಿಂದೂ ಹೆಣ್ಣುಮಕ್ಕಳನ್ನು ಮೋಸದಿಂದ ಮುಸ್ಲಿಮರು ಮದುವೆಯಾಗುತ್ತಿದ್ದಾರೆ. ಯೂಟ್ಯೂಬರ್ ಮುಕಳೆಪ್ಪ ಮಾಡುವ‌ ವಿಡಿಯೊವನ್ನು ಇನ್ಮುಂದೆ ಹಿಂದುಗಳು ನೋಡುವುದು, ಶೇರ್‌ ಮಾಡುವುದನ್ನು ಬಂದ್‌ ಮಾಡಬೇಕು. ಹಿಂದು ಹೆಣ್ಣುಮಕ್ಕಳ ಬಗ್ಗೆ ಕೀಳಾಗಿ ಮಾತನಾಡುವ ಮುಕಳೆಪ್ಪನ ಸೊಕ್ಕನ್ನು ಅಡಗಿಸಬೇಕು‘ ಎಂದರು. 

‘ಇಲ್ಲಿನ ಉಪನೋಂದಣಿ ಕಚೇರಿಯಲ್ಲಿ ಕಾನೂನು ಗಾಳಿಗೆ ತೂರಿ ಯೂಟ್ಯೂಬರ್‌ನ ಮದುವೆ ಮಾಡಲಾಗಿದೆ. ವಿವಾಹ ನೋಂದಣಿ  ಅಧಿಕಾರಿಯನ್ನು ಕೂಡಲೇ ಅಮಾನತ್ತುಗೊಳಿಸಿ, ಇತರ ಸಿಬ್ಬಂದಿಯ ಮೇಲೂ ಕ್ರಮ ತೆಗೆದುಕೊಳ್ಳಬೇಕು’ ಎಂದರು.

ADVERTISEMENT

‘ಯುವತಿಯ ತಾಯಿ ದೂರು ನೀಡಿ ಮೂರು ದಿನಗಳಾದರೂ, ಆರೋಪಿಗಳನ್ನು ಬಂಧಿಸಿಲ್ಲ. ಇಲ್ಲಿನ ಉಪನೋಂದಣಿ ಕಚೇರಿಯಲ್ಲಿ ಅವ್ಯವಹಾರ ನಡೆಯುತ್ತಿದ್ದು, ಈ ಕುರಿತು 22 ಮಹಿಳೆಯರು ದೂರು ಕೊಡಲು ಮುಂದೆ ಬಂದಿದ್ದಾರೆ’ ಎಂದು ತಿಳಿಸಿದರು.

‘ಸುಳ್ಳು ಮನೆ ಬಾಡಿಗೆ ಕರಾರು ಪತ್ರ ಕೊಟ್ಟವರು ಹಾಗೂ ವಾಸ ಇಲ್ಲದಿದ್ದರೂ ಬಾಡಿಗೆ ಇದ್ದಾರೆಂದು ಒಪ್ಪಿಗೆ ಕೊಟ್ಟ ಮನೆ ಮಾಲಿಕನ ಮೇಲೆ ಕ್ರಮವಾಗಬೇಕು. ಸಾಕ್ಷಿದಾರರನ್ನು ಬಂಧಿಸಬೇಕು. ಸರ್ಕಾರಿ ರಜೆ ಇಲ್ಲದಿದ್ದರೂ ಬುಧವಾರ ಉಪ ನೋಂದಣಿ ಕಚೇರಿಗೆ ಬೀಗ ಹಾಕಿ ಅಪರಾದ ಎಸಗಿದ್ದಾರೆ. ಈ ಕುರಿತು ಕ್ರಮವಹಿಸಬೇಕು‘ ಎಂದು ತಹಶೀಲ್ದಾರ್‌ ಶಂಕರ ಗೌಡಿ ಅವರಿಗೆ ನೀಡಿದ ಮನವಿಯಲ್ಲಿ ಆಗ್ರಹಿದ್ದಾರೆ.

ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಮಂಜುನಾಥ ಹರಿಜನ, ವಿಶ್ವನಾಥ ನಾಯರ, ಪ್ರಕಾಶ ಬಡಿಗೇರ, ಮಂಜುನಾಥ ಹರಮಲಕರ್, ಶಂಕರ ಲಮಾಣಿ, ಬಸವರಾಜ ತನಿಖೆದಾರ, ಸುರೇಶ ಕಲ್ಲೋಳ್ಳಿ, ಮಂಜುನಾಥ ಶೇಟ್, ರವಿ ತಳವಾರ, ಮಲ್ಲಿಕಾರ್ಜುನ ಗೌಳಿ, ಬಸವರಾಜ ಗೌಡ್ರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.