ADVERTISEMENT

ಹಂಪಿ ಉತ್ಸವ’ ಮಾಡದಿದ್ದರೆ ‘ಕರ್ನಾಟಕ ಬಂದ್‌’: ವಾಟಾಳ್‌ ನಾಗರಾಜ್‌

ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2023, 15:35 IST
Last Updated 22 ಏಪ್ರಿಲ್ 2023, 15:35 IST
ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್‌ ಅವರು ಹಂಪಿ ವಿರೂಪಾಕ್ಷೇಶ್ವರ ದೇಗುಲದ ಭಾನುವಾರ ಕನ್ನಡಪರ ಸಂಘಟನೆಗಳ ಕಾರ್ಯಕರ್ತರೊಂದಿಗೆ ತೆಂಗಿನ ಕಾಯಿ ಒಡೆದು ಸಾಂಕೇತಿಕ ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ
ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್‌ ಅವರು ಹಂಪಿ ವಿರೂಪಾಕ್ಷೇಶ್ವರ ದೇಗುಲದ ಭಾನುವಾರ ಕನ್ನಡಪರ ಸಂಘಟನೆಗಳ ಕಾರ್ಯಕರ್ತರೊಂದಿಗೆ ತೆಂಗಿನ ಕಾಯಿ ಒಡೆದು ಸಾಂಕೇತಿಕ ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ‘ಈ ಹಿಂದಿನಂತೆ ಈ ವರ್ಷವೂ ‘ಹಂಪಿ ಉತ್ಸವ’ವನ್ನು ಮೂರು ದಿನ ವಿಜೃಂಭಣೆಯಿಂದ ಆಚರಿಸಬೇಕು. ಇಲ್ಲವಾದಲ್ಲಿ ‘ಕರ್ನಾಟಕ ಬಂದ್‌’ಗೆ ಕರೆ ಕೊಡಲಾಗುವುದು’ ಎಂದು ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್‌ ಎಚ್ಚರಿಕೆ ನೀಡಿದರು.

‘ಹಂಪಿ ಉತ್ಸವ’ಕ್ಕೆ ಒತ್ತಾಯಿಸಿ ಇಲ್ಲಿನ ಹಂಪಿ ವಿರೂಪಾಕ್ಷೇಶ್ವರ ದೇಗುಲದ ಮುಂಭಾಗದಲ್ಲಿ ಭಾನುವಾರ ಕನ್ನಡಪರ ಸಂಘಟನೆಗಳ ಕಾರ್ಯಕರ್ತರೊಂದಿಗೆ ಸಾಂಕೇತಿಕ ಪ್ರತಿಭಟನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಮೈಸೂರು ದಸರಾಕ್ಕೆ ಅಡ್ಡಿಯಾಗದ ಬರ ‘ಹಂಪಿ ಉತ್ಸವ’ಕ್ಕೇಕೆ ಅಡ್ಡಿಯಾಗುತ್ತಿದೆ. ಸತತ ನಾಲ್ಕು ವರ್ಷಗಳಿಂದ ಬಳ್ಳಾರಿ ಜಿಲ್ಲೆಯಲ್ಲಿ ಬರಗಾಲ ಇದೆ. ಆದರೆ, ಈ ವರ್ಷ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಉತ್ತಮ ವಾತಾವರಣ ಇದೆ. ಹೀಗಿರುವಾಗ ಜಿಲ್ಲಾಡಳಿತ ಎರಡು ದಿನ ಸರಳ ಹಂಪಿ ಉತ್ಸವಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿರುವುದು ಸರಿಯಲ್ಲ. ಮೂರು ದಿನಗಳ ಕಾಲ ಅದ್ದೂರಿಯಾಗಿ ಉತ್ಸವ ಆಚರಿಸಬೇಕು. ಜಿಲ್ಲಾ ಆಡಳಿತ ಹಾಗೂ ಸರ್ಕಾರ ತಾಳಿರುವ ಧೋರಣೆ ವಿರುದ್ಧ ಇದೇ 24ರಂದು ಹಂಪಿಯಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು’ ಎಂದು ಹೇಳಿದರು.

ADVERTISEMENT

‘ಸಾಂಸ್ಕೃತಿಕ ಹಾಗೂ ಐತಿಹಾಸಿಕ ಮಹತ್ವ ಹೊಂದಿರುವ ಹಂಪಿಯಲ್ಲಿ ಯಾವುದೇ ಕಾರಣಕ್ಕೂ ಉತ್ಸವ ನಿಲ್ಲಬಾರದು. ವೈಭವದಿಂದ ಮೆರೆದ ವಿಜಯನಗರ ಸಾಮ್ರಾಜ್ಯ ಯಾವುದೇ ಕಾರಣಕ್ಕೂ ಕಳೆಗುಂದಬಾರದು. ಉತ್ಸವದ ವಿಚಾರದಲ್ಲಿ ಮುಖ್ಯಮಂತ್ರಿ, ಜಿಲ್ಲಾ ಮಂತ್ರಿ, ಸಂಸದರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಬರ ಇದೆ ಎಂದು ಯಾರಾದರೂ ಮಸಾಲ ದೋಸೆ ತಿನ್ನುವುದು ಬಿಟ್ಟಿದ್ದಾರೆಯೇ? ಸರ್ಕಾರ ನೆಪ ಹೇಳಿ ತಪ್ಪಿಸಿಕೊಳ್ಳುವಂತಿಲ್ಲ’ ಎಂದರು.

‘ತುಂಗಭದ್ರಾ ಜಲಾಶಯದ ನೀರನ್ನು ಕಳ್ಳತನದಿಂದ ಕಾರ್ಖಾನೆಗಳಿಗೆ ಪೂರೈಕೆಯಾಗುತ್ತಿದೆ. ಹೀಗೆ ಮಾಡುತ್ತಿರುವವರು ಅಪರಾಧಿಗಳು. ಅವರಿಗೆ ಜೈಲು ಶಿಕ್ಷೆಯಾಗಬೇಕು. ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಅಕ್ರಮವಾಗಿ ನೀರು ಎತ್ತುತ್ತಿರುವ ಎಲ್ಲ ಪಂಪ್‌ಸೆಟ್‌ಗಳನ್ನು ಕಿತ್ತು ಹಾಕಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ರಕ್ಷಣಾ ವೇದಿಕೆ ಯುವಶಕ್ತಿ ರಾಜ್ಯ ಅಧ್ಯಕ್ಷ ವಿಜಯಕುಮಾರ, ಮುಖಂಡರಾದ ಸೈಯದ್‌ ಜಿಲಾನ್‌ ಪಾಸಾ, ಸೋಮಶೇಖರ್‌, ಪಾರ್ಥಸಾರಥಿ, ಜಿ.ಎಂ. ರಾಮು, ಈಶ್ವರ್‌, ಮಾಣಿಕ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.