ADVERTISEMENT

37 ಪಂಚಾಯಿತಿಗಳಿಗೆ ವಿದ್ಯುತ್‌ ಕಡಿತದ ಭೀತಿ

₹24.93 ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಪಂಚಾಯಿತಿಗಳಿಗೆ ಬೆಸ್ಕಾಂ ನೋಟಿಸ್‌

ವಿಶ್ವನಾಥ ಡಿ.
Published 11 ಜೂನ್ 2022, 16:28 IST
Last Updated 11 ಜೂನ್ 2022, 16:28 IST

ಹರಪನಹಳ್ಳಿ: ₹24.93 ಕೋಟಿ ವಿದ್ಯುತ್‌ ಬಿಲ್‌ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ತಾಲ್ಲೂಕಿನ 37 ಗ್ರಾಮ ಪಂಚಾಯಿತಿಗಳಿಗೆ ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಲು ಬೆಸ್ಕಾಂ ಮುಂದಾಗಿದೆ.

ಬಿಲ್‌ ಪಾವತಿಸದ ಪಂಚಾಯಿತಿಗಳಿಗೆ ಹಂತ ಹಂತವಾಗಿ ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸುವ ಎಚ್ಚರಿಕೆಯನ್ನು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ತೆಲಿಗಿ ಮತ್ತು ಹರಪನಹಳ್ಳಿ ಉಪವಿಭಾಗ ಕಚೇರಿಯ ಅಧಿಕಾರಿಗಳು ಕೊಟ್ಟಿದ್ದಾರೆ.

ಸರ್ಕಾರವು 15ನೇ ಹಣಕಾಸು ಯೋಜನೆಯಡಿ ‘ಎಸ್ಕ್ರೋ’ ಖಾತೆ ಮತ್ತು ‘ಪ್ರಯಾ ಸಾಫ್ಟ್’ ಖಾತೆಗಳಿಗೆ ಹಣ ಬಿಡುಗಡೆ ಮಾಡಿದೆ. ಆದರೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಬಿಲ್ ಪಾವತಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕೆಲವು ಪಂಚಾಯಿತಿಗಳು 5 ವರ್ಷ, ಮತ್ತೆ ಕೆಲವು 10ರಿಂದ 12 ವರ್ಷಗಳಿಂದ ವಿದ್ಯುತ್‌ ಬಿಲ್‌ ಭರಿಸಿಯೇ ಇಲ್ಲ. ಈಗ ಅವುಗಳ ವಿರುದ್ಧ ಬೆಸ್ಕಾಂ ಚಾಟಿ ಬೀಸಲು ಮುಂದಾಗಿದೆ.

ADVERTISEMENT

‘ವಿದ್ಯುತ್ ಬಿಲ್ ಬಾಕಿ ಪಾವತಿಸದಿದ್ದರೆ ಗ್ರಾಮ ಪಂಚಾಯಿತಿ ಕಚೇರಿ, ತಾಲ್ಲೂಕು ಪಂಚಾಯಿತಿ ಕಚೇರಿ ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ, ಬೀದಿ ದೀಪ, ಕುಡಿಯುವ ನೀರಿನ ಘಟಕಗಳಿಗೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದು. ಈಗಾಗಲೇ ಅದಕ್ಕಾಗಿ ಸಿದ್ಧತೆ ನಡೆದಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾದರೆ ಬೆಸ್ಕಾಂ ಹೊಣೆಯಲ್ಲ’ ಎಂದು ಬೆಸ್ಕಾಂ ತೆಲಿಗಿ ಉಪವಿಭಾಗದ ಎಇಇ ಜಯಪ್ಪ ತಿಳಿಸಿದ್ದಾರೆ.

ಬಾಕಿ ಉಳಿಸಿಕೊಂಡಿರುವ ಪಂಚಾಯಿತಿಗಳು:

ಬೀದಿ ದೀಪ, ಕುಡಿಯುವ ನೀರಿನ ಘಟಕ ಸೇರಿದಂತೆ ಇತರೆ ಕಾರ್ಯಕ್ಕೆ ವಿದ್ಯುತ್‌ ಬಳಕೆ ಮಾಡಲಾಗುತ್ತಿದ್ದು, ಅದರ ಬಿಲ್‌ ಒಟ್ಟು ₹24.93 ಕೋಟಿ ಇದೆ. ಹರಪನಹಳ್ಳಿ ಉಪವಿಭಾಗದ ಬೆಣ್ಣಿಹಳ್ಳಿ ₹1.52 ಕೋಟಿ, ತೌಡೂರು ₹1.02 ಕೋಟಿ, ಅಡವಿಹಳ್ಳಿ ₹79.80 ಲಕ್ಷ, ಬಾಗಳಿ ₹76.40 ಲಕ್ಷ, ಚಿಗಟೇರಿ ₹30.34 ಲಕ್ಷ, ಹೊಸಕೋಟೆ ₹43 ಲಕ್ಷ, ಕಡಬಗೇರಿ ₹58.89 ಲಕ್ಷ, ಕೂಲಹಳ್ಳಿ ₹1.43 ಲಕ್ಷ, ಮಾಡ್ಲಗೇರಿ ₹20.31 ಲಕ್ಷ, ಮತ್ತಿಹಳ್ಳಿ ₹80.51 ಲಕ್ಷ, ಮೈದೂರು ₹82.30 ಲಕ್ಷ, ನಂದಿಬೇವೂರು ₹95.62 ಲಕ್ಷ, ನಿಚ್ಚವ್ವನಹಳ್ಳಿ ₹39.70 ಲಕ್ಷ, ಸಾಸ್ವಿಹಳ್ಳಿ ₹54.37 ಲಕ್ಷ, ತೊಗರಿಕಟ್ರೆ ₹7 ಸಾವಿರ ಸೇರಿದಂತೆ ಒಟ್ಟು ₹10.05 ಕೋಟಿ ಬಾಕಿ ಉಳಿಸಿಕೊಂಡಿವೆ.

ತೆಲಿಗಿ ಉಪವಿಭಾಗ ವ್ಯಾಪ್ತಿಯ ನೀಲಗುಂದ ₹1.29 ಕೋಟಿ, ಪುಣಬಗಟ್ಟಿ ₹1.11 ಕೋಟಿ, ರಾಗಿಮಸಲವಾಡ ₹1.01 ಕೋಟಿ, ಹಲುವಾಗಲು ₹77.32 ಲಕ್ಷ, ಕೆ.ಕಲ್ಲಹಳ್ಳಿ ₹79.33 ಲಕ್ಷ, ಕುಂಚೂರು ₹50.40 ಲಕ್ಷ, ನಿಟ್ಟೂರು ₹60.85 ಲಕ್ಷ, ಲಕ್ಷ್ಮಿಪುರ ₹75.92 ಲಕ್ಷ, ಶಿಂಗ್ರಿಹಳ್ಳಿ ₹29.39 ಲಕ್ಷ, ಚಿರಸ್ತಹಳ್ಳಿ ₹62.71 ಲಕ್ಷ, ಹಾರಕನಾಳು ₹22.20 ಲಕ್ಷ, ತೊಗರಿಕಟ್ಟೆ ₹49.96 ಲಕ್ಷ, ದುಗ್ಗಾವತಿ ₹16.44 ಲಕ್ಷ, ಗುಂಡಗತ್ತಿ ₹17.94 ಲಕ್ಷ, ಕಡತಿ ₹83.51 ಲಕ್ಷ, ತೆಲಿಗಿ ₹64.79 ಲಕ್ಷ, ಯಡಿಹಳ್ಳಿ ₹45.90 ಲಕ್ಷ, ಅಣಜಿಗೆರೆ ₹54.89 ಲಕ್ಷ, ಚಟ್ನಿಹಳ್ಳಿ ₹82.60 ಲಕ್ಷ, ಹಿರೆಮೇಗಳಗೆರೆ ₹42.33 ಲಕ್ಷ, ಉಚ್ಚಂಗಿದುರ್ಗ ₹95.44 ಲಕ್ಷ ವಿದ್ಯುತ್‌ ಬಿಲ್‌ ಪಾವತಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.