ಹೊಸಪೇಟೆ (ವಿಜಯನಗರ): ಇಲ್ಲಿನ ಅನಂತಶಯನ ಗುಡಿ ಪ್ರದೇಶದ ನೀರಿನ ಹೊಂಡಕ್ಕೆ ಬಿದ್ದ ನಾಲ್ಕು ವರ್ಷದ ಬಾಲಕ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಸ್ಥಳೀಯ ನಿವಾಸಿ ಮಚೇಂದ್ರನಾಥ್ ಅವರ ಪುತ್ರ ವಿರಾಟ್ ಮೃತ ಬಾಲಕ.
ಮಧ್ಯಾಹ್ನ 3 ಗಂಟೆ ಸುಮಾರಿಗೆ ಆಟವಾಡಲು ಮನೆಯಿಂದ ಹೊರ ಹೋಗಿದ್ದ ಬಾಲಕ ಎಷ್ಟು ಹೊತ್ತಾದರೂ ಮನೆಗೆ ವಾಪಸಾಗಿರಲಿಲ್ಲ. ಗಾಬರಿಗೊಂಡ ಪಾಲಕರು ಹಲವೆಡೆ ಹುಡುಕಾಡಿದ್ದರು. ಕೊನೆಗೆ ರಾತ್ರಿ ಮನೆ ಸಮೀಪದ ನೀರು ತುಂಬಿದ್ದ ಹೊಂಡದಲ್ಲೇ ಆತನ ಶವ ಇರುವುದು ಗೊತ್ತಾಯಿತು.
ಬಾಲಕನ ಜನ್ಮದಿನಾಚರಣೆಯ ಸಂಭ್ರಮ ಗುರುವಾರವಷ್ಟೇ ನಡೆದಿತ್ತು. ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
‘ಬಾಲಕನ ಸಾವಿನ ಬಗ್ಗೆ ಸಂಶಯ ಇದೆ. ನೀರಿನ ಹೊಂಡದ ಬಗ್ಗೆ ಅವನಿಗೆ ಜಾಗ್ರತೆ ಇತ್ತು. ಇತರರು ಸಹ ಹೊಂಡದ ಹತ್ತಿರ ಹೋಗದಂತೆ ಆತ ಆಗಾಗ ತನ್ನದೇ ಆದ ರೀತಿಯಲ್ಲಿ ಹೇಳುತ್ತಲೇ ಇದ್ದ. ಆದರೆ ಆತನೇ ಹೊಂಡದಲ್ಲಿ ಬಿದ್ದಿರುವ ಬಗ್ಗೆ ಬಹಳ ಅಚ್ಚರಿ ಮೂಡಿದೆ. ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ’ ಎಂದು ಪೋಷಕರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.