ADVERTISEMENT

ವಿಜಯನಗರ ಜಿಲ್ಲೆಯಲ್ಲಿ 825 ತೀವ್ರ ಅಪೌಷ್ಟಿಕತೆ ಮಕ್ಕಳು!

ಹೊಸಪೇಟೆಯ ಸಾರ್ವಜನಿಕ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಆಯೋಗ ಭೇಟಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 15:42 IST
Last Updated 17 ಜೂನ್ 2025, 15:42 IST
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಮಂಗಳವಾರ ಹೊಸಪೇಟೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ವಿಶೇಷ ನವಜಾತ ಶಿಶುಗಳ ಆರೈಕೆ ಘಟಕದ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು  –ಪ್ರಜಾವಾಣಿ ಚಿತ್ರ
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಮಂಗಳವಾರ ಹೊಸಪೇಟೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ವಿಶೇಷ ನವಜಾತ ಶಿಶುಗಳ ಆರೈಕೆ ಘಟಕದ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು  –ಪ್ರಜಾವಾಣಿ ಚಿತ್ರ    

ಹೊಸಪೇಟೆ (ವಿಜಯನಗರ): ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆಯ 825 ಮಕ್ಕಳು ಇರುವುದು ಕಳವಳಕಾರಿ ಸಂಗತಿ, ಅಧಿಕಾರಿಗಳು ಇದನ್ನು ಗಂಭೀರವಾಗಿ ತೆಗೆದುಕೊಳ್ಳಲೇಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹೇಳಿದೆ.

ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ, ಡಾ.ತಿಪ್ಪೇಸ್ವಾಮಿ ಕೆ.ಟಿ. ಮತ್ತು ಶೇಖರ ಗೌಡ ರಾಮತ್ನಾಳ ನೇತೃತ್ವದ ತಂಡ ಮಂಗಳವಾರ ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ ಮತ್ರು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಮಕ್ಕಳ ಅಪೌಷ್ಟಿಕ ಪುನಃಶ್ಚೇತನ ಘಟಕಕ್ಕೆ ಭೇಟಿ ನೀಡಿದ ತಂಡ, ದಾಖಲಾದ ಆರು ಮಕ್ಕಳ ಸ್ಥಿತಿಗತಿ ಪರಿಶೀಲಿಸಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಕಾರ ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆ ಯಿಂದ ಬಳಲುತ್ತಿರುವ 825 ಮಕ್ಕಳು ಮತ್ತು ಸಾಧಾರಣ ಅಪೌಷ್ಟಿಕತೆಯ 1,250ಕ್ಕೂ ಹೆಚ್ಚು ಮಕ್ಕಳು ಇದ್ದಾರೆ. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ತಂಡದ ಮಾಹಿತಿ ಪ್ರಕಾರ 451 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇಷ್ಟೊಂದು ತೀವ್ರ ಅಪೌಷ್ಟಿಕತೆಯಿಂದ ಮಕ್ಕಳು ಬಳಲುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ತಮಗೆ ಸಂಬಂಧವೇ ಇಲ್ಲ ಎಂಬಂತೆ ವರ್ತನೆ ಮಾಡುತ್ತಿರುವುದು ಸರಿಯಲ್ಲ ಎಂದು ಆಯೋಗದ ಸದಸ್ಯರು ಹೇಳಿದರು.

ADVERTISEMENT

ಸೆಖೆ ಇದ್ದರೂ ಎ.ಸಿ ಇಲ್ಲ: ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವಿಶೇಷ ನವಜಾತ ಶಿಶುಗಳ ಆರೈಕೆ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆಯೋಗ, ಇಷ್ಟೊಂದು ಸೆಖೆಯಿದೆ, ಇಲ್ಲಿ ಅಳವಡಿಸಿದ ಎ.ಸಿಗಳನ್ನು ಎಕೆ ಬಂದ್ ಮಾಡಲಾಗಿದೆ ಎಂದು ಪ್ರಶ್ನಿಸಿತು. ದಾಖಲಾದ ಮಕ್ಕಳ ಆರೋಗ್ಯದ ಸ್ಥಿತಿಗತಿಯ ಕುರಿತು ಮಾಹಿತಿ ಪಡೆದುಕೊಂಡಿತು. ಮಕ್ಕಳ ಮಾದರಿ ಚುಚ್ಚು ಮದ್ದು ಕೇಂದ್ರ, ಮಕ್ಕಳ ವಾರ್ಡ್ ಹಾಗೂ ಸ್ಕ್ಯಾನಿಂಗ್ ಸೆಂಟರ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ವಿವಿಧ ಇಲಾಖೆಗಳು ಸಮನ್ವಯತೆಯ ತುರ್ತು ಸಭೆ ನಡೆಸಿ ತೀವ್ರ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಸಕಾಲದಲ್ಲಿ ದಾಖಲು ಮಾಡುವ ಮೂಲಕ ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಮುಂದಾಗಬೇಕು.
- ಶಶಿಧರ ಕೋಸಂಬೆ ಸದಸ್ಯರು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಲ್.ಆರ್.ಶಂಕರ್ ನಾಯ್ಕ್,, ಆರ್‌ಸಿಎಚ್‌ ಅಧಿಕಾರಿ ಡಾ.ಜಂಬಯ್ಯ,‌ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಸುದೀಪ್ ಕುಮಾರ್ ಊಂಕಿ ಇತರರು ಇದ್ದರು.

ಹಾಸ್ಟೆಲ್‌ನಲ್ಲಿ ಬಲ್ಬ್‌ಗೆ ತತ್ವಾರ!

ಹೊಸಪೇಟೆ ತಾಲ್ಲೂಕಿನ ಬುಕ್ಕಸಾಗರ ಬಳಿಯ ಮೂರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಮಕ್ಕಳ ವಸತಿ ಕೊಠಡಿಗಳನ್ನು ಪರಿಶೀಲಿಸಿತು. ಒಂದು ಕೊಠಡಿಯಲ್ಲಿ 25 ಮಕ್ಕಳು ವಾಸಿಸುವ ಜತೆಗೆ ವಿದ್ಯಾಭ್ಯಾಸ ಮಾಡುತ್ತಾರೆ ಆದರೆ ಒಂದು ಹೆಚ್ಚುವರಿ ಬಲ್ಬ್‌ ಅಳವಡಿಸಲು ಏನು ತೊಂದರೆ? ಎಂದು ಸದಸ್ಯರು ಪ್ರಶ್ನಿಸಿದರು. ಶೌಚಾಲಯ ಹಾಗೂ ಸ್ನಾನದ ಅವ್ಯವಸ್ಥೆ ಕಂಡು ಪ್ರಾಚಾರ್ಯರನ್ನು ತರಾಟೆಗೆ ತೆಗೆದುಕೊಂಡರು. ಕೊಂಡನಾಯಕನಹಳ್ಳಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಕ್ಷಯ ಪಾತ್ರೆ ವತಿಯಿಂದ ತಯಾರಿಸಲಾದ ಪಲಾವ್ ಅನ್ನು ಸದಸ್ಯರು ಸೇವಿಸಿದರು. ಪಲಾವಗೆ ತಾಳೆ ಎಣ್ಣೆ ಜಾಸ್ತಿ ಬಳಿಸಿದ್ದು ಕಂಡು ಬಂದಿದೆ ಸಂಬಂಧಪಟ್ಟವರು ಗಮನಿಸಿ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.