ADVERTISEMENT

ವಿಜಯನಗರಕ್ಕೆ ಅನಿರುದ್ಧ ಶ್ರವಣ್‌ ಜಿಲ್ಲಾಧಿಕಾರಿ?

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 17:05 IST
Last Updated 26 ಫೆಬ್ರುವರಿ 2021, 17:05 IST
ಅನಿರುದ್ಧ ಶ್ರವಣ್‌
ಅನಿರುದ್ಧ ಶ್ರವಣ್‌   

ವಿಜಯನಗರ (ಹೊಸಪೇಟೆ): ವಿಜಯನಗರ ಜಿಲ್ಲೆಯ ಮೊದಲ ಜಿಲ್ಲಾಧಿಕಾರಿಯಾಗಿ ಅನಿರುದ್ಧ ಶ್ರವಣ್‌ ಅವರು ನೇಮಕಗೊಳ್ಳುವುದು ಬಹುತೇಕ ಖಚಿತವಾಗಿದೆ.

ಮೂಲಸೌಕರ್ಯ ಅಭಿವೃದ್ಧಿ, ಹಜ್‌ ಮತ್ತು ವಕ್ಫ್‌ ಖಾತೆ ಸಚಿವ ಆನಂದ್‌ ಸಿಂಗ್‌ ಅವರು ವಿಶೇಷ ಮುತುವರ್ಜಿ ವಹಿಸಿ, ಅನಿರುದ್ಧ ಅವರನ್ನು ವಿಜಯನಗರ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದರು. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಮೌಖಿಕ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಗೊತ್ತಾಗಿದೆ. ಈ ವಿಷಯವನ್ನು ಸ್ವತಃ ಆನಂದ್ ಸಿಂಗ್‌ ಅವರು ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.

‘ಅನಿರುದ್ಧ ಶ್ರವಣ್‌ ಅವರು ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಇಷ್ಟರಲ್ಲೇ ಸರ್ಕಾರದಿಂದ ಅಧಿಕೃತ ಆದೇಶ ಹೊರಬೀಳಲಿದೆ’ ಎಂದು ಆನಂದ್‌ ಸಿಂಗ್‌ ಶುಕ್ರವಾರ ತಿಳಿಸಿದ್ದಾರೆ.

ADVERTISEMENT

2011ರ ಬ್ಯಾಚಿನ ಐಎಎಸ್‌ ಅಧಿಕಾರಿಯಾಗಿರುವ ಅನಿರುದ್ಧ ಅವರು, ಈ ಹಿಂದೆ ಬಳ್ಳಾರಿಯಲ್ಲಿ ಉಪವಿಭಾಗಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಬಳಿಕ ಕಲಬುರ್ಗಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ನಂತರ ಬೀದರ್‌, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಅಸ್ತಿತ್ವ ಕಳೆದುಕೊಂಡಿದ್ದ ಪುಷ್ಕರಣಿಗಳನ್ನು ಪುನರುಜ್ಜೀವನಗೊಳಿಸಿ, ಜಲಮೂಲಗಳಿಗೆ ಜೀವ ತಂದುಕೊಡುವ ಕೆಲಸ ಮಾಡಿದ್ದರು. ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಹೆಚ್ಚಿನ ಒತ್ತು ಕೊಟ್ಟು ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶದಲ್ಲಿ ಸುಧಾರಣೆ ತಂದಿದ್ದರು.

ಸದ್ಯ ಪಂಚಾಯಿತ್‌ರಾಜ್‌ ಇಲಾಖೆಯಲ್ಲಿ ಆಯುಕ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆಂಧ್ರ ಪ್ರದೇಶ ಮೂಲದ ಅನಿರುದ್ಧ ಅವರ ಪತ್ನಿ ಇಶಾ ಪಂತ್‌ ಐಪಿಎಸ್‌ ಅಧಿಕಾರಿ. ಅವರು ಮೂಲತಃ ಉತ್ತರಾಖಂಡದವರು.

ಇವರ ಆಯ್ಕೆ ಏಕೆ?:

ನೂತನ ವಿಜಯನಗರ ಜಿಲ್ಲೆಯನ್ನು ಅಚ್ಚುಕಟ್ಟಾಗಿ ಕಟ್ಟಬೇಕು ಎಂಬ ಕನಸು ಹೊಂದಿರುವ ಆನಂದ್‌ ಸಿಂಗ್‌ ಅವರು, ಉತ್ಸಾಹಿ, ದಕ್ಷ ಅಧಿಕಾರಿಯ ಹುಡುಕಾಟದಲ್ಲಿದ್ದರು. ಅಂತಿಮವಾಗಿ ಅವರು ಅನಿರುದ್ಧ ಅವರನ್ನು ಆಯ್ಕೆ ಮಾಡಿ, ಅವರನ್ನು ಜಿಲ್ಲೆಗೆ ನೇಮಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.