ADVERTISEMENT

ಅಂಕಸಮುದ್ರ: ವಲಸೆ ಹಕ್ಕಿಗಳ ಪಾರುಪತ್ಯ

ವಿಜಯನಗರ ಜಿಲ್ಲೆಯ ಪಕ್ಷಿಧಾಮ | ವಿವಿಧೆಡೆಯಿಂದ ಬಂದ ಬಾನಾಡಿಗಳ ಕಲರವ

ಸಿ.ಶಿವಾನಂದ
Published 4 ಅಕ್ಟೋಬರ್ 2025, 22:30 IST
Last Updated 4 ಅಕ್ಟೋಬರ್ 2025, 22:30 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಪಕ್ಷಿಧಾಮ
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಪಕ್ಷಿಧಾಮ   

ಹಗರಿಬೊಮ್ಮನಹಳ್ಳಿ (ವಿಜಯನಗರ): ಇಲ್ಲಿನ ಅಂಕಸಮುದ್ರ ಪಕ್ಷಿಧಾಮದಲ್ಲಿ ಈ ಬಾರಿ ನಿಗದಿತ ಅವಧಿಗಿಂತಲೂ ಮೊದಲೇ ವಿದೇಶಿ ಹಕ್ಕಿಗಳ ಕಲರವ ಅನುರಣಿಸುತ್ತಿದೆ. ಜಾಲಿಮರಗಳ ಮೇಲೆ ದೇಶಿ ಹಕ್ಕಿಗಳ ಗೂಡು ಕಟ್ಟಿದ್ದು, ಪಾರುಪತ್ಯ ನಡೆಸಿವೆ.   

ಬಹುಸಂಖ್ಯೆಯ ಇಂಡಿಯನ್ ಕಾರ್ಮೋರೆಂಟ್ (ನೀರು ಕಾಗೆ), ಲಿಟಲ್ ಕಾರ್ಮೋರೆಂಟ್ (ಸಣ್ಣ ನೀರು ಕಾಗೆ), ಬ್ಲ್ಯಾಕ್‌ ಹೆಡೆಡ್ ಐಬೀಸ್(ಕರಿತಲೆ ಕೆಂಬರಲು), ಗ್ಲೋಸಿ ಐಬೀಸ್(ಮಿಂಚು ಕೆಂಬರಲು), ವರಟೆ ಬಾತು (ಸ್ಪಾಟ್ ಬಿಲ್ ಡಕ್) ಸಂತಾನನೋತ್ಪತ್ತಿ ಕಾರ್ಯದಲ್ಲಿ ನಿರತವಾಗಿವೆ. ಇವುಗಳ ಸಂಖ್ಯೆ ಸಾವಿರ ದಾಟಿದೆ. ಪಕ್ಷಿಧಾಮದ ಮರಗಳಲ್ಲಿ ಮರಿಗಳಿಗೆ ಬಾಯಿತುತ್ತು ನೀಡುವ ದೃಶ್ಯ, ಗೂಡುಗಳಿಂದ ಹೊರಬಂದ ಚಿಣ್ಣರ ಚಿನ್ನಾಟದ ಚಿಲಿಪಿಲಿ ಸಂಗೀತದ ನಿನಾದವಂತೂ ಪಕ್ಷಿ ಪ್ರೇಮಿಗಳನ್ನು ಧ್ಯಾನಸ್ಥರನ್ನಾಗಿ ಮಾಡುತ್ತಿವೆ.

ಯುರೋಪ್‌ ಮೂಲದ ಹಕ್ಕಿಗಳಾದ ಬಿಳಿ ಹುಬ್ಬಿನ ಬಾತು (ಗಾರ್ಗೆನಿ), ಜೌಗು ಸೆಳೆವ (ಮಾರ್ಷ್ ಹ್ಯಾರಿಯರ್), ಬಿಳಿಕತ್ತಿನ ಉಲಿಯಕ್ಕಿ (ಲೆಸರ್ ವೈಟ್‍ತ್ರೋಟ್), ಇಡುನಾ ರಾಮ (ಸೈಕ್ಸ್ ನ ವಾರ್ಬ್ಲರ್‌), ಬೂದು ಉಲಿಯಕ್ಕಿ (ಬ್ಲಿಥ್ಸ್ರೀಡ್ ವಾರ್ಬ್ಲರ್‌), ಹಳದಿ ಸಿಪಿಲೆ (ಯಲ್ಲೊ ವಾಗ್‍ಟೆಲ್) ಹಕ್ಕಿಗಳೂ ಇಲ್ಲಿಗೆ ಈಗಾಗಲೇ ಬಂದಿವೆ.

ADVERTISEMENT

ಯುರೋಪ್‌ನಿಂದ ಹಕ್ಕಿಗಳು ಈ ಬಾರಿ ತಿಂಗಳ ಮುಂಚೆಯೇ ಬಂದಿವೆ. ಒಂದು ವಾರದಿಂದ ಈ ವಿದೇಶಿ ಬಾನಾಡಿ ಅತಿಥಿಗಳಿಗೆ ಸ್ಥಳೀಯ ಹಕ್ಕಿಗಳು ಆತಿಥ್ಯ ನೀಡಿವೆ. ಮುಂದಿನ ಏಪ್ರಿಲ್‌ವರೆಗೆ ಅವು ಇಲ್ಲಿಯೇ ನೆಲೆಯೂರಲಿವೆ.  

ಶಿಳ್ಳೆಬಾತು ಆಕರ್ಷಣೆ: ಪಕ್ಷಿಧಾಮಕ್ಕೆ ಮೊದಲ ಬಾರಿಗೆ ಉತ್ತರ ಭಾರತದಿಂದ ವಲಸೆ ಬಂದಿರುವ ಅಪರೂಪದ ದೊಡ್ಡ ಗಾತ್ರದ ಶಿಳ್ಳೆಬಾತು (ಫುಲ್ವೆಸ್ ವಿಸಿಲಿಂಗ್ ಡಕ್) ತನ್ನ ಸಂಖ್ಯೆಯನ್ನು 20ಕ್ಕೆ ಏರಿಸಿಕೊಂಡಿದೆ. ಈ ಪಕ್ಷಿ ಸದಾ ಸಂಗಾತಿಯೊಂದಿಗೆ ಇರುತ್ತದೆ.

ತುಂಗಭದ್ರಾ ಹಿನ್ನೀರಿನ ಏತ ನೀರಾವರಿ ಮೂಲಕ ನೀರು ಹರಿದ ಪರಿಣಾಮ ಅಂಕಸಮುದ್ರ ಪಕ್ಷಿಧಾಮದ ಒಡಲು ಸಂಪೂರ್ಣ ಭರ್ತಿ ಆಗಿದೆ. ಪಕ್ಷಿಗಳ ಕಲರವ ಹೆಚ್ಚಾಗಿದೆ. ರಾಜ್ಯದ ವಿವಿಧೆಡೆಯಿಂದ ಬರುವ ಪ್ರವಾಸಿಗರು, ವಿದೇಶಿಯರ ಸಂಖ್ಯೆಯೂ ಹೆಚ್ಚಾಗಿದೆ.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಪಕ್ಷಿಧಾಮ
ಬಿಳಿ ಹುಬ್ಬಿನ ಬಾತು(ಗಾರ್ಗೆನಿ)
ಚಿಕ್ಕ ಶಿಳ್ಳೆಬಾತು (ಲೆಸರ್ ವಿಸಿಲಿಂಗ್ ಡಕ್) ಮರಿಗಳು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಪಕ್ಷಿಧಾಮದಲ್ಲಿ ಬೆಂಗಳೂರಿನ ಪಕ್ಷಿ ವೀಕ್ಷಕರು
ಮರಿಗೆ ತುತ್ತು ನೀಡುತ್ತಿರುವ ಕರಿತಲೆ ಕೆಂಬರಲು

ತುಂಗಭದ್ರಾ ನದಿಯಿಂದ ಹರಿದ ನೀರು ಪಕ್ಷಿಧಾಮದ ತುಂಬ ನೀರು ಸಂಗ್ರಹ ಸಂತಾನೋತ್ಪತ್ತಿಗೆ ಹೇಳಿ ಮಾಡಿಸಿದ ಸನ್ನಿವೇಶ

ಪಕ್ಷಿಗಳನ್ನು ವೀಕ್ಷಿಸಲು ಕಳೆದ ವರ್ಷದಿಂದ ಬೆಂಗಳೂರಿನಿಂದ ಕುಟುಂಬ ಸಮೇತ ಬರುತ್ತಿದ್ದೇನೆ. ಇಲ್ಲಿನ ಹಕ್ಕಿಗಳ ಸೌಂದರ್ಯ ಅದ್ಭುತ
ಬದ್ರೀಶ್ ಪಕ್ಷಿ ವೀಕ್ಷಕ ಬೆಂಗಳೂರು.
ಪ್ರವಾಸಿಗರ ಅನುಕೂಲಕ್ಕಾಗಿ ಪಕ್ಷಿಧಾಮಕ್ಕೆ ರಸ್ತೆ ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ
ಉಮೇಶ್ ನಾಯ್ಕ ವಲಯ ಅರಣ್ಯಾಧಿಕಾರಿ ಹೂವಿನಹಡಗಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.