
ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ತಾಲ್ಲೂಕಿನಲ್ಲಿರುವ ರಾಮ್‍ಸಾರ್ ತಾಣ ಖ್ಯಾತಿಯ ಅಂಕಸಮುದ್ರ ಪಕ್ಷಿಧಾಮಕ್ಕೆ ಹಳ್ಳದ ನೀರು ಹೆಚ್ಚು ಹರಿದು ಬರುತ್ತಿದೆ. ಇದರಿಂದ ವಲಸೆ ಬರುವ ಕೆಲವು ಪ್ರಭೇದದ ಬಾನಾಡಿಗಳ ಸಂಖ್ಯೆ ಕ್ಷೀಣಿಸಿದೆ.
ಚಿಲವಾರು ಬಂಡಿ ಏತನೀರಾವರಿ ಯೋಜನೆಯಿಂದ ಕಳೆದ 20 ದಿನಗಳಿಂದ ನೀರು ಹರಿದು ಬರುತ್ತಿದೆ. ಅಂಕಸಮುದ್ರದಿಂದ ಪಿಂಜಾರ್ ಹೆಗ್ಡಾಳ್ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಹಳ್ಳದ ಮೂಲಕ ನೀರು ಅಂಕಸಮುದ್ರ ಪಕ್ಷಿಧಾಮ ಸೇರುತ್ತಿದೆ. ಇದರಿಂದಾಗಿ ವೀಕ್ಷಣಾ ಗೋಪುರಕ್ಕೆ ತೆರಳುವುದಕ್ಕೆ ಮರಳು ಚೀಲದ ಸಹಾಯ ಅಗತ್ಯವಾಗಿದೆ. ದಾರಿಯುದ್ದಕ್ಕೂ ನೀರು ಸಂಗ್ರಹವಾಗಿದೆ. ಪಕ್ಷಿಧಾಮದ ಪಶ್ಚಿಮ ದಿಕ್ಕಿನಲ್ಲಿ ರಸ್ತೆಯು ನೀರಿನಿಂದ ಆವೃತವಾಗಿದೆ. ಇದರಿಂದ ವಲಸೆ ಹಕ್ಕಿಗಳು ಇತ್ತ ಸುಳಿಯುವುದು ಕಡಿಮೆಯಾಗಿದೆ.
ಅಪರೂಪದ ಬ್ಲ್ಯಾಕ್ ಟೇಲ್ಡ್ ಗಾಡ್ವಿಟ್ (ಕಪ್ಪು ಬಾಲದ ಗಾಡ್ವಿಟ್), ಫೆಸಿಫಿಕ್ ಗೋಲ್ಡನ್ ಪ್ಲೋವರ್, ಸ್ಪಾಟೆಡ್ ರೆಡ್ ಶಾಂಕ್ (ಮಚ್ಚೆಯುಳ್ಳ ರೆಡ್ ಶಾಂಕ್), ಕಾಮನ್ ರೆಡ್ ಶಾಂಕ್ (ಸಾಮಾನ್ಯ ರೆಡ್‍ಶಾಂಕ್), ಮಾರ್ಷ್ ಸ್ಯಾಂಡ್ ಪೈಪರ್ (ಬೆಳು ಗದ್ದೆಗೊರವ), ಕಾಮನ್ ಗ್ರೀನ್‍ಶಾಂಕ್, ವುಡ್ ಸ್ಯಾಂಡ್ ಪೈಪರ್ (ಚುಕ್ಕೆ ಗದ್ದೆಗೊರವ), ಕಾಮನ್ ಸ್ಯಾಂಡ್ ಪೈಪರ್ (ಗದ್ದೆ ಗೊರವ) ಇವು ತಿಂಗಳ ಆರಂಭದಲ್ಲಿ ಕಾಣಿಸಿಕೊಂಡಿವೆ. ನೀರು ಹೆಚ್ಚುತ್ತಿದ್ದಂತೆ ಆಹಾರ ಅರಸಿ ಬೇರೆಡೆಗೆ ತೆರಳಿರಬಹುದು ಎಂದು ಪಕ್ಷಿ ತಜ್ಞರು ಹೇಳುತ್ತಾರೆ.
ಪಕ್ಷಿಧಾಮದ ಕೆರೆಯ ತಟದಲ್ಲಿ ತೇವಾಂಶ ಕೆಸರು ಹುಲ್ಲುಗಾವಲು, ಮಣ್ಣಿನ ಪ್ರದೇಶ ಬೇಕು. ಪಕ್ಷಿಗಳಿಗೆ ಅಗತ್ಯವಾಗಿ ಆಹಾರ ಮತ್ತು ವಾಸಸ್ಥಾನ ಇರುವುದು ಇಲ್ಲೇ. ಇವುಗಳಿಗೆ ಸಣ್ಣ ನೀರಿನ ಹರಿವು ಸಾಕು. ಹೆಚ್ಚು ನೀರು ಬೇಕಾಗಿಲ್ಲ. ನೀರಿನಲ್ಲಿ ದೊರೆಯುವ ಕೀಟ, ಮೀನು ಮರಿಗಳು ಇವುಗಳಿಗೆ ಅಚ್ಚುಮೆಚ್ಚು. ಕೆರೆಯ ದಂಡೆಯಲ್ಲಿ ಸಿಗುವ ಆಹಾರ ಇವುಗಳಿಗೆ ಮೃಷ್ಟಾನ್ನ. ಇದೀಗ ತಟದ ತುಂಬೆಲ್ಲಾ ನೀರು ಆವರಿಸಿರುವುದರಿಂದ ಇವುಗಳ ಆವಾಸಕ್ಕೆ ತೊಂದರೆಯಾಗಿದೆ. ಹೆಚ್ಚಿನ ನೀರು ಹರಿಯುವುದನ್ನು ತಡೆಯಬೇಕು ಎನ್ನುವುದು ಪಕ್ಷಿಪ್ರೇಮಿಗಳ ಆಗ್ರಹ.
ಅಂಕಸಮುದ್ರ ಪಕ್ಷಿಧಾಮಕ್ಕೆ ಹಳ್ಳದ ಮೂಲಕ ಹರಿಯುತ್ತಿರುವ ನೀರನ್ನು ತಡೆಯಲು ಅರಣ್ಯ ಇಲಾಖೆಯಿಂದ ಪ್ರಸ್ತಾವ ಬಂದರೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆಧರ್ಮರಾಜ್, ಎಇಇ, ನೀರಾವರಿ ಇಲಾಖೆ
ಚಳಿಗಾಲದಲ್ಲಿ ನೀರು ಕಡಿಮೆ ಆಗಬೇಕು. ಕೆರೆ ತಟದಲ್ಲಿ ಕೆಸರಿನಲ್ಲಿ ಆವಾಸ ಮಾಡಿಕೊಳ್ಳುವ ಅನೇಕ ಪಕ್ಷಿಗಳಿಗೆ ತೊಂದರೆಯಾಗಿದೆ. ಇಲ್ಲಿಗೆ ಬರಬೇಕಿದ್ದ ಬಾನಾಡಿಗಳು ತುಂಗಭದ್ರಾ ಹಿನ್ನೀರು ಪ್ರದೇಶಲ್ಲಿ ಬೀಡು ಬಿಟ್ಟಿವೆಎಚ್.ರಮೇಶ್, ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (ಬಿಎನ್‍ಎಚ್‍ಎಸ್) ಸಂಶೋಧಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.