ADVERTISEMENT

ಮಾಧ್ಯಮಕ್ಕೆ ಹೇಳಿದ್ದನ್ನೇ ಸಿಎಂಗೆ ಹೇಳುವೆ: ಬಿ.ಆರ್.ಪಾಟೀಲ್‌

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 16:28 IST
Last Updated 24 ಜೂನ್ 2025, 16:28 IST
ಬಿ.ಆರ್‌.ಪಾಟೀಲ್‌
ಬಿ.ಆರ್‌.ಪಾಟೀಲ್‌   

ಹೊಸಪೇಟೆ (ವಿಜಯನಗರ): ‘ನಾನು ಏನು ಹೇಳಬೇಕೆಂದುಕೊಂಡಿದ್ದೆನೊ ಅದನ್ನು ಈಗಾಗಲೇ ಕಲಬುರ್ಗಿಯಲ್ಲಿ ಹೇಳಿದ್ದೇನೆ. ಪೇಪರ್‌ನಲ್ಲಿ ಏನು ಪ್ರಕಟವಾಗಿದೆಯೋ ಅದನ್ನೇ ನಾನು ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅವರಿಗೆ ತಿಳಿಸುವೆ’ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ  ಶಾಸಕ ಬಿ.ಆರ್.ಪಾಟೀಲ್‌ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಪಾಲ್ಗೊಳ್ಳಲು ಮಂಗಳವಾರ ಕ್ಯಾಂಪಸ್‌ಗೆ ಬಂದಿದ್ದ ಅವರು ಮಾಧ್ಯಮದವರಿಗೆ ಹೀಗೆ ಪ್ರತಿಕ್ರಿಯಿಸಿದರು. 

ಹಲವು ಶಾಸಕರಲ್ಲಿ ಹಾಗೂ ದೇಶಪಾಂಡೆ, ರಾಯರೆಡ್ಡಿ ಅವರಂತಹ ಹಿರಿಯ ಮುಖಂಡರಲ್ಲಿ ಸರ್ಕಾರದ ವಿರುದ್ಧ ಅಸಮಾಧಾನ ಹೊಗೆಯಾಡುತ್ತಿರುವ ಕುರಿತ ಪ್ರಶ್ನೆಗೆ  ‘ಸಂಸಾರ ಎಂದ ಮೇಲೆ ಗಂಡ ಹೆಂಡತಿ ಜಗಳ ಇದ್ದೇ ಇರುತ್ತದೆ, ಅದೇ ರೀತಿಯಲ್ಲಿ ಪಕ್ಷದಲ್ಲೂ ಇದೆ ಅಷ್ಟೇ’ ಎಂದರು.

ADVERTISEMENT

ಪಾಟೀಲರಿಗೆ ಪದೇ ಪದೇ ಫೋನ್‌:

ರಾಜ್ಯದ ಹಲವೆಡೆಗಳಿಂದ ವಸತಿ ಯೋಜನೆಗೆ ಲಂಚ ಕೇಳಿದ ಕುರಿತಂತೆ ಪಾಟೀಲರಿಗೆ ಫೋನ್‌ ಕರೆಗಳು ಬರುತ್ತಿದ್ದು, ಮಂಗಳವಾರವೂ ಮಾಧ್ಯಮಗಳ ಜತೆಗೆ ಮಾತನಾಡುತ್ತಿದ್ದಾಗಲೇ ಕರೆಗಳು ಬಂದವು. ‘ದೇವರಹಿಪ್ಪರಗಿ ಕ್ಷೇತ್ರದ ತುರಗಾನೂರು ಗ್ರಾಮದಿಂದ ಬಸನಗೌಡ ಪಾಟೀಲ್‌ ಎಂಬುವವರು ಕರೆ ಮಾಡಿದ್ದರು. ಅಂಬೇಡ್ಕರ್ ವಸತಿ ನಿಗಮದ‌ ಮನೆಗೆ ₹20 ಸಾವಿರ ಕೇಳುತ್ತಿದ್ದಾರೆ, ಬಸವ ವಸತಿ ಯೋಜನೆಯ ಮನೆಗೆ ₹15 ಸಾವಿರ ಕೇಳುತ್ತಿದ್ದಾರೆ ಎಂದು ನನ್ನಲ್ಲಿ ದೂರಿಕೊಂಡಿದ್ದಾರೆ’ ಎಂದು ಅವರು ಮಾಧ್ಯಮದವರಿಗೆ ತಿಳಿಸಿದರು.

‘ಮನೆ ಪಡೆಯಲು ಲಂಚ ಕೇಳ್ತಾರೆ ಎಂದು ದೂರಿ ಬಹಳಷ್ಟು ಜನ ಫೋನ್ ಮಾಡ್ತಾರೆ, ಇಂತಹ ಫೋನ್‌ ಕರೆ ಸ್ವೀಕರಿಸಿ ನನಗೆ ಸಾಕಾಗಿದೆ’ ಎಂದು ಹೇಳಿದರು. 

11 ತಿಂಗಳಿಂದ ವೇತನ ಇಲ್ಲ: ವಿಶ್ವವಿದ್ಯಾಲಯದ 47 ಮಂದಿ ಗುತ್ತಿಗೆ ಕಾರ್ಮಿಕರ ಪೈಕಿ ಕೆಲವರು ಪಾಟೀಲ್‌ ಅವರನ್ನು ಭೇಟಿ ಮಾಡಿ, ತಮಗೆ 11 ತಿಂಗಳಿಂದ ಸಂಬಳ ನೀಡಿಲ್ಲ ಎಂದು ದೂರಿದರು. ವಿಶ್ವವಿದ್ಯಾಲಯದ ಆರ್ಥಿಕ ಸಂಕಷ್ಟದ ಕುರಿತಂತೆ ಮುಖ್ಯಮಂತ್ರಿ ಅವರ ಗಮನಕ್ಕೆ ತರುವುದಾಗಿ ಅವರು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.