ADVERTISEMENT

ವೈಚಾರಿಕ ವಿಭಜಕ ವೃತ್ತಿ ಅಪಾಯಕಾರಿ: ಪ್ರೊ.ಬರಗೂರು ರಾಮಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 17:58 IST
Last Updated 17 ಫೆಬ್ರುವರಿ 2026, 17:58 IST
ಪ್ರೊ.ಬರಗೂರು ರಾಮಚಂದ್ರಪ್ಪ
ಪ್ರೊ.ಬರಗೂರು ರಾಮಚಂದ್ರಪ್ಪ   

ಹೊಸಪೇಟೆ (ವಿಜಯನಗರ): ‘ಸೈದ್ಧಾಂತಿಕ ಭಿನ್ನಾಭಿಪ್ರಾಯದ ಸಹಜ ಪ್ರವೃತ್ತಿಯು ಇಷ್ಟವಾಗದಿದ್ದರೆ ಅದನ್ನು ಖಂಡಿಸಬಹುದು. ಆದರೆ, ದೇಶದಲ್ಲಿ ಇಂದು ವೈಚಾರಿಕ ವಿಭಜಕ ಪ್ರವೃತ್ತಿಯು ವೃತ್ತಿಯಾಗಿ ಕಾಣಿಸಿಕೊಳ್ಳುತ್ತಿದೆ. ಇದು ಬಹಳ ಅಪಾಯಕಾರಿ’ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗವು ಹೊರತಂದ 42 ಪುಸ್ತಕಗಳನ್ನು ಮಂಗಳವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಭಿನ್ನಾಭಿಪ್ರಾಯ ಪ್ರಜಾಪ್ರಭುತ್ವದ ಲಕ್ಷಣ. ಅದನ್ನು ಮೀರಿ ರಸ್ತೆ ವಿಭಜಕಗಳಂತೆ ಪರಸ್ಪರ ಚರ್ಚಿಸುವುದನ್ನೇ ಹತ್ತಿಕ್ಕುವ ವಾತಾವರಣ ಸೃಷ್ಟಿ ಆಗುತ್ತಿದೆ. ಈ ಬಗ್ಗೆ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ’ ಎಂದರು.

ADVERTISEMENT

ಅನುದಾನ ಕೊಡಿ: ‘ಕನ್ನಡ ವಿಶ್ವವಿದ್ಯಾಲಯ ಸಂಶೋಧನೆಗೆಂದೆ ಸ್ಥಾಪನೆಗೊಂಡ ಜ್ಞಾನ ಕೇಂದ್ರ. ಇದಕ್ಕೆ ಸರ್ಕಾರ ಸೂಕ್ತ ಅನುದಾನ ಕೊಡಲೇಬೇಕು. ವಿವಿಧ ಅಧ್ಯಯನ ಪೀಠಗಳಿಗೆ ಶಕ್ತಿ ತುಂಬಬೇಕು. ಕೆಲ ಪೀಠಗಳಿಗೆ ವರ್ಷಕ್ಕೆ ₹2 ಕೋಟಿ ಅನುದಾನ ನೀಡಲಾಗುತ್ತಿದೆ, ಕನ್ನಡ ವಿಶ್ವವಿದ್ಯಾಲಯಕ್ಕೆ ನೀಡುವ ವಾರ್ಷಿಕ ಅನುದಾನ ₹2 ಕೋಟಿಗಿಂತ ಕಡಿಮೆ ಇದೆ. ಇಂತಹ ತಾರತಮ್ಯ ಧೋರಣೆ ಬಿಡಬೇಕು’ ಎಂದು ಒತ್ತಾಯಿಸಿದರು.