ADVERTISEMENT

ವಿಜಯನಗರ | ನಗರಸಭೆ ಚುನಾವಣೆ: ಬಿಜೆಪಿಗೆ ಸಚಿವರ ಬಲ

ಸುಳಿಯದ ಕಾಂಗ್ರೆಸ್‌ ಶಾಸಕರು; ಪ್ರಚಾರಕ್ಕೆ ಸ್ಥಳೀಯ ನಾಯಕರೇ ಆಸರೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 24 ಡಿಸೆಂಬರ್ 2021, 19:30 IST
Last Updated 24 ಡಿಸೆಂಬರ್ 2021, 19:30 IST
ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್‌ ಅವರು ಗುರುವಾರ ಹೊಸಪೇಟೆಯ ಕಾರಿಗನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಗಂಗಮ್ಮ ಪರ ಚುನಾವಣಾ ಪ್ರಚಾರ ನಡೆಸಿದರು
ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್‌ ಅವರು ಗುರುವಾರ ಹೊಸಪೇಟೆಯ ಕಾರಿಗನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಗಂಗಮ್ಮ ಪರ ಚುನಾವಣಾ ಪ್ರಚಾರ ನಡೆಸಿದರು   

ಹೊಸಪೇಟೆ (ವಿಜಯನಗರ): ನಗರಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರ ಬಲವಿದ್ದು, ಅವರ ಹೆಸರಿನಲ್ಲಿ ಆ ಪಕ್ಷ ಪ್ರಚಾರ ಕೈಗೊಂಡು ಬೀಗುತ್ತಿದೆ. ಉತ್ತಮ ಸಾಧನೆ ತೋರುವ ಭರವಸೆ ವ್ಯಕ್ತಪಡಿಸಿದೆ.

ಆದರೆ, ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇನ್ನೆರಡೇ ದಿನಗಳು ಬಾಕಿ ಉಳಿದಿವೆ. ಜಿಲ್ಲೆಯ ಯಾವೊಬ್ಬ ಕಾಂಗ್ರೆಸ್‌ ಶಾಸಕರು ಈ ಕಡೆ ಮುಖ ಮಾಡಿಲ್ಲ. ಅಭ್ಯರ್ಥಿಗಳ ಪರ ಸ್ಥಳೀಯ ಮುಖಂಡರೇ ಪ್ರಚಾರ ಕೈಗೊಂಡಿದ್ದಾರೆ. ಮುಖಂಡ ವೆಂಕಟರಾವ ಘೋರ್ಪಡೆ, ವೀಕ್ಷಕ ಆರ್‌. ಮಂಜುನಾಥ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿನಾಯಕ ಶೆಟ್ಟರ್‌ ಅವರು ಅಭ್ಯರ್ಥಿಗಳಿಗೆ ಹೆಗಲು ಕೊಟ್ಟು ಆರಂಭದಿಂದಲೂ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಆ ಪಕ್ಷದ ಶಾಸಕರು ನಗರಕ್ಕೆ ಬಂದು ಅಭ್ಯರ್ಥಿಗಳ ಪರ ಮತಯಾಚಿಸಿ ಹುರುಪು ತುಂಬುವ ಕೆಲಸ ಮಾಡಿಲ್ಲ.

ಈ ಹಿಂದೆ ನಗರಸಭೆಗೆ ನಡೆದ ಚುನಾವಣೆಗಳಿಂದ ಆನಂದ್‌ ಸಿಂಗ್‌ ಅಂತರ ಕಾಯ್ದುಕೊಂಡಿದ್ದರು. ಈ ಸಲದ ಚುನಾವಣೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ, ಪ್ರಚಾರ ಪ್ರತಿಯೊಂದರಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಎಲ್ಲೆಡೆ ಓಡಾಡುತ್ತಿದ್ದಾರೆ. ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ದಿನಕ್ಕೆ 10ರಿಂದ 12 ವಾರ್ಡ್‌ಗಳಿಗೆ ತೆರಳಿ ಮತ ಯಾಚಿಸುತ್ತಿದ್ದಾರೆ. ಇದು ಸಹಜವಾಗಿಯೇ ಬಿಜೆಪಿ ಅಭ್ಯರ್ಥಿಗಳಲ್ಲಿ ಹುರುಪು ಮೂಡಿಸಿದೆ.

ADVERTISEMENT

ಕಾಂಗ್ರೆಸ್‌ ಪರಿಸ್ಥಿತಿ ಹಾಗಿಲ್ಲ. ನಾಯಕರ ಆಂತರಿಕ ಜಗಳದಿಂದ ಇನ್ನೂ ಪಕ್ಷ ಹೊರಬಂದಿಲ್ಲ. ಮತ್ತೊಂದೆಡೆ ಹಲವು ವಾರ್ಡ್‌ಗಳಲ್ಲಿ ಪಕ್ಷದಿಂದ ಬಂಡಾಯವೆದ್ದು ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್‌ ‘ಬಿ’ ಫಾರಂ ಮಾರಾಟ ಮಾಡಿಕೊಂಡಿದೆ ಎಂದು ಕೆಲವರು ಬಹಿರಂಗವಾಗಿಯೇ ಆರೋಪಿಸಿದ್ದಾರೆ. 16ನೇ ವಾರ್ಡಿನಲ್ಲಿ ಕಾಂಗ್ರೆಸ್‌ ಪಕ್ಷವು ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಘೋಷಿಸಿದೆ. ಹೀಗೆ ಕೊನೆಯ ಕ್ಷಣದ ಬದಲಾವಣೆಗಳು ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಿದೆ.

ಟಿಕೆಟ್‌ ಹಂಚಿಕೆಗೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಸಭೆಯಲ್ಲಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶಿವಯೋಗಿ ಹಾಗೂ ಕೆಪಿಸಿಸಿ ವಕ್ತಾರ ಸಿರಾಜ್‌ ಶೇಕ್‌ ನಡುವೆ ನಡೆದ ವಾಕ್ಸಮರ, ನಿಂದನೆ ಪ್ರಕರಣ ಕೆಪಿಸಿಸಿ ಅಂಗಳಕ್ಕೆ ತಲುಪಿದೆ. ಚುನಾವಣೆಯ ಹೊಸ್ತಿಲಲ್ಲೇ ನಾಯಕರ ನಡುವೆ ಇಂತಹದ್ದೊಂದು ಘಟನೆ ನಡೆದಿರುವುದರಿಂದ ಕಾರ್ಯಕರ್ತರು ಬೇಸರಗೊಂಡಿದ್ದಾರೆ.

ಇಷ್ಟೆಲ್ಲ ಬೆಳವಣಿಗೆಗಳ ನಡುವೆ ವೆಂಕಟರಾವ ಘೋರ್ಪಡೆ, ಆರ್‌. ಮಂಜುನಾಥ, ದೀಪಕ್‌ ಸಿಂಗ್‌, ಮೊಹಮ್ಮದ್‌ ಇಮಾಮ್‌ ನಿಯಾಜಿ, ವಿನಾಯಕ ಶೆಟ್ಟರ್‌ ಅವರು ಕಾರ್ಯಕರ್ತರ ಮನವೊಲಿಸಿ, ಪಕ್ಷದ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಎಲ್ಲ ವಾರ್ಡ್‌ಗಳಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

ಇನ್ನು ಜೆಡಿಎಸ್‌, ಕರ್ನಾಟಕ ರಾಷ್ಟ್ರ ಸಮಿತಿ, ಸಿಪಿಎಂ, ಎಸ್‌ಡಿಪಿಐ, ಆಮ್‌ ಆದ್ಮಿ ಪಕ್ಷ ಕೂಡ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಕೆಆರ್‌ಎಸ್‌ ಪರ ರವಿಕೃಷ್ಣ ರೆಡ್ಡಿ ಅವರು ನಗರಕ್ಕೆ ಬಂದು ಪ್ರಚಾರ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.