ADVERTISEMENT

ಹೊಸಪೇಟೆ: ಹಂಪಿ ಸ್ಮಾರಕಗಳ ನಡುವೆ ಬೈಸಿಕಲ್ ಜಾಥಾ

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 5:47 IST
Last Updated 3 ಜೂನ್ 2022, 5:47 IST
 ಹಂಪಿ ಸ್ಮಾರಕಗಳ ನಡುವೆ ಬೈಸಿಕಲ್ ಜಾಥಾ
ಹಂಪಿ ಸ್ಮಾರಕಗಳ ನಡುವೆ ಬೈಸಿಕಲ್ ಜಾಥಾ   

ಹೊಸಪೇಟೆ (ವಿಜಯನಗರ): ರಾತ್ರಿ ಸುರಿದ ಮಳೆಯಿಂದಾಗಿ ಬೆಳಿಗ್ಗೆ ಚುಮುಚುಮು ಚಳಿ. ಇದರ ನಡುವೆ ಶ್ವೇತವಸ್ತ್ರಧಾರಿಗಳು ಹಂಪಿಯ ಸ್ಮಾರಕಗಳ ಪರಿಸರದಲ್ಲಿ ಬೈಸಿಕಲ್ ಓಡಿಸಿ ಸಂಭ್ರಮಿಸಿದರು.

ವಿಶ್ವ ಬೈಸಿಕಲ್ ದಿನಾಚರಣೆ ಅಂಗವಾಗಿ ಶುಕ್ರವಾರ ವಿಶ್ವಪ್ರಸಿದ್ಧ ಹಂಪಿಯಲ್ಲಿ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು. ತಾಲ್ಲೂಕಿನ ಕಮಲಾಪುರದಿಂದ 150ಕ್ಕೂ ಹೆಚ್ಚು ಜನ ಉತ್ಸಾಹದಿಂದ ಬೆಳಿಗ್ಗೆ ಬೈಸಿಕಲ್ ತುಳಿದರು.

ರಾಣಿ ಸ್ನಾನಗೃಹ, ಕಮಲಮಹಲ್, ಅಕ್ಕತಂಗಿಯರ ಗುಡ್ಡ, ಉಗ್ರನರಸಿಂಹ, ಬಡವಿಲಿಂಗ, ಕಡಲೆಕಾಳು ಗಣಪ ಸ್ಮಾರಕದ ಮಾರ್ಗವಾಗಿ ಒಟ್ಟು 7.5 ಕಿ.ಮೀ. ಜಾಥಾ ಸಂಚರಿಸಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಸೈಕಲ್ ಸವಾರಿ ಮಾಡಿದರು.

ADVERTISEMENT

ಹಂಪಿಯ ಎದುರು ಬಸವಣ್ಣ ದೇವಸ್ಥಾನದ ಬಳಿ ಜಾಥಾ ಕೊನೆಗೊಂಡಿತು. ಜಾಥಾದಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಇದಕ್ಕೂ ಮುನ್ನ ಕಮಲಾಪುರದ ಅಂಬೇಡ್ಕರ್ ವೃತ್ತದ ಬಳಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ. ಅವರು ಬೈಸಿಕಲ್ ಜಾಥಾಗೆ ಚಾಲನೆ ನೀಡಿ, ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ವಿಶ್ವ ಬೈಸಿಕಲ್ ದಿನಾಚರಣೆ ಅಂಗವಾಗಿ ಹಂಪಿಯಲ್ಲಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.

ಎಲ್ಲಾ ವಯೋಮಾನದವರು ಉತ್ಸಾಹದಿಂದ ಜಾಥಾದಲ್ಲಿ ಪಾಲ್ಗೊಂಡಿದ್ದಾರೆ. ಆರೋಗ್ಯ ವೃದ್ಧಿ ಹಾಗೂ ಪರಿ‌ಸರ ರಕ್ಷಣೆಗೆ ಬೈಸಿಕಲ್ ಸವಾರಿ ಅವಶ್ಯವಿದೆ. ಪ್ರವಾಸಿಗರಿಗೆ ಹಂಪಿಯಲ್ಲಿ ಸೈಕ್ಲಿಂಗ್ ಮೂಲಕ ಸ್ಮಾರಕಗಳ ಭೇಟಿ ಮತ್ತು ವೀಕ್ಷಣೆಗೆ ಈಗಾಗಲೇ ಹಲವು ಬಾರಿ ಸಭೆಗಳಲ್ಲಿ ಚರ್ಚಿಸಲಾಗಿದೆ. ಮುಂದಿನ ವರ್ಷದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ನಾರಾಯಣ ರಾವ್, ರಾಘವೇಂದ್ರ, ಜಿ.ಡಿ ಹಳ್ಳಿಕೇರಿ, ಕೊಟ್ರೇಶ್, ಮಾಂಟು ಪತ್ತಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.