ADVERTISEMENT

ಡಿ.ಜೆ. ಹಳ್ಳಿ ಪ್ರಕರಣ ಸರಿಯಾಗಿ ನಿರ್ವಹಿಸದ ಕಾರಣ ಹುಬ್ಬಳ್ಳಿ ಘಟನೆ: ಯತ್ನಾಳ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 7:27 IST
Last Updated 17 ಏಪ್ರಿಲ್ 2022, 7:27 IST
   

ಹೊಸಪೇಟೆ (ವಿಜಯನಗರ): ‘ಕೆ.ಜೆ.ಹಳ್ಳಿ, ಡಿ.ಜೆ. ಹಳ್ಳಿ ಘಟನೆಯನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಹುಬ್ಬಳ್ಳಿಯಲ್ಲಿ ಈ ಘಟನೆ ನಡೆದಿದೆ. ಆ ಶಕ್ತಿಗಳಿಗೆ ಮತ್ತಷ್ಟು ಶಕ್ತಿ ಬಂದಿದೆ. ರಾಜ್ಯ ಸರ್ಕಾರ, ಗೃಹಸಚಿವರು ಗಟ್ಟಿತನ ತೋರಿಸಿ, ಅವರ ಮನೆ ಹೊಕ್ಕು ಹೊರತರಬೇಕು. ಅವರನ್ನು ಮುಗಿಸಲು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.

ಈ ರೀತಿಯ ಘಟನೆ ಕರ್ನಾಟಕದಲ್ಲಿ ಮರುಕಳಿಸಲುಬಿಡಬಾರದು. ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಯಾರು ಗೂಂಡಾಗಳು, ದೇಶದ್ರೋಹಿಗಳಿದ್ದಾರೆ. ಪೊಲೀಸರು ಹಾಗೂ ಪೊಲೀಸ್‌ ಠಾಣೆ ಮೇಲೆ ದಾಳಿ ನಡೆಸಿದ್ದಾರೆ,ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಕರ್ನಾಟಕದಲ್ಲಿ ಕೆಟ್ಟ ಚಾಳಿ ಪ್ರಾರಂಭವಾಗಿದೆ. ಅವರ ಶಕ್ತಿ ಕುಗ್ಗಿಸಲು ಮುಖ್ಯಮಂತ್ರಿ, ಗೃಹಸಚಿವರು ಕ್ರಮ ಕೈಗೊಳ್ಳಬೇಕು ಎಂದು ಭಾನುವಾರ ಇಲ್ಲಿ ಒತ್ತಾಯಿಸಿದರು.

ಮಸೀದಿಯ ಚಿತ್ರದ‌ ಮೇಲೆ ಭಗವಾಧ್ವಜ ಹಾರಿಸಿದ ಚಿತ್ರ ಎಡಿಟ್‌ ಮಾಡಿ ಯುವಕನೊಬ್ಬ ಸ್ಟೇಟಸ್‌ ಹಾಕಿಕೊಂಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆ ಸಮೀಪದಲ್ಲಿಯೇಕಲ್ಲುತೂರಾಟ ನಡೆದಿದೆ. ಸಮೀಪದ ಆಸ್ಪತ್ರೆ ಮೇಲೂ ದಾಳಿಯಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಅಶ್ರುವಾಯು ಪ್ರಯೋಗಿಸಿದ್ದಾರೆ. ಘಟನೆಯಲ್ಲಿ ಪೊಲೀಸ್‌ ವಾಹನಗಳು ಜಖಂಗೊಂಡಿವೆ. ಶನಿವಾರ ತಡರಾತ್ರಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.