ADVERTISEMENT

ಪುತ್ಥಳಿ ಬದಲು ಗ್ರಂಥಾಲಯ ನಿರ್ಮಿಸಿ : ಕಾಗಿನೆಲೆಯ ನಿರಂಜನಾನಂದ ಪುರಿ ಸ್ವಾಮೀಜಿ ಹೇ

​ಪ್ರಜಾವಾಣಿ ವಾರ್ತೆ
Published 12 ಮೇ 2022, 11:30 IST
Last Updated 12 ಮೇ 2022, 11:30 IST
   

ಹರಪನಹಳ್ಳಿ (ವಿಜಯನಗರ ಜಿಲ್ಲೆ): ದಾರ್ಶನಿಕರ ಪುತ್ಥಳಿ ಪ್ರತಿಷ್ಠಾಪಿಸುವುದನ್ನು ನಿಲ್ಲಿಸಿ, ಗ್ರಂಥಾಲಯ ನಿರ್ಮಿಸಬೇಕು ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಬೀರಲಿಂಗೇಶ್ವರ ನೂತನ ದೇವಸ್ಥಾನ, ಬೀರಲಿಂಗೇಶ್ವರ ಮೂರ್ತಿ ಪ್ರತಿಷ್ಠಾಪನೆ, ಸಂಗೊಳ್ಳಿ ರಾಯಣ್ಣ ಪುತ್ಥಳಿ ಅನಾವರಣ ಕಾರ್ಯಕ್ರಮ ಮತ್ತು ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿ, ಅಂಬೇಡ್ಕರ್, ಬಸವಣ್ಣ, ಕನಕದಾಸ, ಸಂಗೊಳ್ಳಿ ರಾಯಣ್ಣ, ಮಹರ್ಷಿ ವಾಲ್ಮೀಕಿ ಸೇರಿದಂತೆ ಮಹನೀಯರ ವಿಗ್ರಹಗಳು ಸಾಮರಸ್ಯದ ಸಂಕೇತಗಳಾಗಿವೆ. ಆದರೆ ಹಳ್ಳಿಯಲ್ಲಿ ಜಾತಿ ಗಲಭೆ, ಸಾಮರಸ್ಯ ಕದಡಲು ಕಾರಣವಾಗುತ್ತಿವೆ. ಹಾಗಾಗಿ ಪುತ್ಥಳಿ ಬದಲಿಗೆ ಗ್ರಂಥಾಲಯ ನಿರ್ಮಿಸಿ ಎಂದು ಸಲಹೆ ನೀಡಿದರು.

ADVERTISEMENT

ದಾರ್ಶನಿಕರ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಹೋಗದಿರಲು ನಿರ್ಧರಿಸಿದ್ದೆ. ಆದರೆ ಮಾದಾಪುರ ಗ್ರಾಮಸ್ಥರು ಪುತ್ಥಳಿ ಸ್ಥಾಪನೆಯ ವಿಷಯ ನನ್ನ ಗಮನಕ್ಕೆ ತಂದಿರಲಿಲ್ಲ. ನನ್ನ ಸಂಕಲ್ಪವನ್ನು ಮಾದಾಪುರ ಗ್ರಾಮಸ್ಥರು ಮುರಿದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಬಳ್ಳಾರಿ ಜಿಲ್ಲೆ ಸಂಡೂರಿನ ಸಮೀಪದ ಹಳ್ಳಿಯೊಂದರಲ್ಲಿ ಕನಕ ಮೂರ್ತಿ ಪ್ರತಿಷ್ಠಾಪಿಸಲು ಹೊರಟಿದ್ದ ಐದು ಜನರ ಮೇಲೆ ಪೊಲೀಸರು ರೌಡಿ ಶೀಟರ್ ದಾಖಲಿಸಿದ್ದಾರೆ. ಬೆಳಗಾವಿಯಲ್ಲಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿದ ಘಟನೆಯ ಮೇಲೆ ಎರಡು ದಿನ ಅಧಿವೇಶನದಲ್ಲಿ ಚರ್ಚೆ ನಡೆಸಿದ್ದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.

ಜಾತಿ ಗಲಭೆಗಳಿಂದ ನಿತ್ಯವೂ ನಾನು ಪೊಲೀಸ್ ಅಧಿಕಾರಿಗಳೊಟ್ಟಿಗೆ ಮಾತನಾಡುವ ಪರಿಸ್ಥಿತಿ ಎದುರಾಗಿದೆ. ಇದರ ನೋವಿನಿಂದ ಹೊರಬರಲು 6 ತಿಂಗಳಿನಿಂದ ಯಾವುದೇ ಪುತ್ಥಳಿ ಅನಾವರಣಕ್ಕೆ ಹೋಗುತ್ತಿಲ್ಲ. ಒಂದು ವೇಳೆ ದಾರ್ಶನಿಕರ ಪುತ್ಥಳಿ ನಿರ್ಮಿಸುವುದಾದರೆ ಸಂಬಂಧಪಟ್ಟ ಇಲಾಖೆ ಅನುಮತಿ ಪಡೆದು ನಿರ್ಮಿಸಿ, ಅಷ್ಟೇ ಕಾಳಜಿಯಿಂದ ಅದನ್ನು ಸಂರಕ್ಷಿಸಿ, ಆ ಮಹಾನ್ ನಾಯಕರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಿ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.