ADVERTISEMENT

ಬಸ್ ಓಡಾಟ ಸಹಜ; ಕಾಣದ ಅಂತರ

ಹೊಸಪೇಟೆ ವಿಭಾಗಕ್ಕೆ 15 ದಿನಗಳಲ್ಲಿ ₹4.8 ಕೋಟಿ ನಷ್ಟ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 15:03 IST
Last Updated 22 ಏಪ್ರಿಲ್ 2021, 15:03 IST
ಹೊಸಪೇಟೆ ಕೇಂದ್ರ ಬಸ್‌ ನಿಲ್ದಾಣದಿಂದ ಗುರುವಾರ ಸಾರಿಗೆ ಸಂಸ್ಥೆ ಬಸ್‌ಗಳು ಸಂಚರಿಸಿದವು. ಅಂತರ ಕಾಯ್ದುಕೊಳ್ಳದೆ ಪ್ರಯಾಣಿಕರು ಬಸ್‌ ಸುತ್ತಮುತ್ತ ನಿಂತಿದ್ದರು
ಹೊಸಪೇಟೆ ಕೇಂದ್ರ ಬಸ್‌ ನಿಲ್ದಾಣದಿಂದ ಗುರುವಾರ ಸಾರಿಗೆ ಸಂಸ್ಥೆ ಬಸ್‌ಗಳು ಸಂಚರಿಸಿದವು. ಅಂತರ ಕಾಯ್ದುಕೊಳ್ಳದೆ ಪ್ರಯಾಣಿಕರು ಬಸ್‌ ಸುತ್ತಮುತ್ತ ನಿಂತಿದ್ದರು   

ಹೊಸಪೇಟೆ (ವಿಜಯನಗರ): ಸತತ ಹದಿನೈದು ದಿನಗಳ ಮುಷ್ಕರ ಕೊನೆಗೊಂಡ ನಂತರ ಗುರುವಾರ ಸಾರಿಗೆ ಸಂಸ್ಥೆ ಬಸ್‌ಗಳ ಓಡಾಟ ಮೊದಲಿನಂತೆ ಸಹಜ ಸ್ಥಿತಿಗೆ ಮರಳಿದೆ.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸಪೇಟೆ ವಿಭಾಗ ವ್ಯಾಪ್ತಿಯ ಸಂಡೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೊಟ್ಟೂರು ಹಾಗೂ ಹರಪನಹಳ್ಳಿ ನಿಲ್ದಾಣಗಳ ಮೂಲಕ ವಿವಿಧ ಕಡೆಗಳಿಗೆ ಬಸ್‌ಗಳು ಸಂಚರಿಸಿದವು.

ಬೆಳಿಗ್ಗೆ ಕಚೇರಿ ಸಮಯ ಹಾಗೂ ಸಂಜೆ ವೇಳೆ ಬಸ್‌ಗಳಲ್ಲಿ ಪ್ರಯಾಣಿಕರು ಕಂಡು ಬಂದರು. ಮಧ್ಯಾಹ್ನ ಬಸ್‌ಗಳಲ್ಲಿ ಪ್ರಯಾಣಿಕರೇ ಇರಲಿಲ್ಲ. ಶೇ 50ರಷ್ಟು ಪ್ರಯಾಣಿಕರೊಂದಿಗೆ ಬಸ್‌ಗಳು ಸಂಚರಿಸಬೇಕೆಂದು ಸರ್ಕಾರ ನಿಯಮ ಜಾರಿಗೆ ತಂದಿದೆ. ಆದರೆ, ಅದು ಕಂಡು ಬರಲಿಲ್ಲ. ಬಹುತೇಕ ಬಸ್‌ಗಳಲ್ಲಿ ಎಲ್ಲ ಸೀಟುಗಳು ತುಂಬಿದ್ದವು.

ADVERTISEMENT

ಈ ಹಿಂದೆ ಪ್ರತಿಯೊಬ್ಬ ಪ್ರಯಾಣಿಕರಿಗೂ ಥರ್ಮಲ್‌ ಸ್ಕ್ರೀನಿಂಗ್‌ ನಡೆಸಿ ನಿಲ್ದಾಣದೊಳಗೆ ಬಿಡಲಾಗುತ್ತಿತ್ತು. ಅಂತರ ಕಾಯ್ದುಕೊಳ್ಳುವಿಕೆಗೆ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಬ್ಯಾರಿಕೇಡ್‌ ಅಳವಡಿಸಿ, ಬಣ್ಣದಿಂದ ಗುರುತು ಮಾಡಲಾಗಿತ್ತು. ಸ್ಯಾನಿಟೈಸರ್ಗೂ ವ್ಯವಸ್ಥೆ ಮಾಡಲಾಗಿತ್ತು. ಈಗ ಅದ್ಯಾವುದೂ ಇಲ್ಲ. ಪ್ರಯಾಣಿಕರು ನಿಲ್ದಾಣದಲ್ಲಿ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಇಷ್ಟು ದಿನ ಖಾಸಗಿ ಬಸ್‌ಗಳಿಂದ ತುಂಬಿರುತ್ತಿದ್ದ ಕೇಂದ್ರ ಬಸ್‌ ನಿಲ್ದಾಣದೊಳಗೆ ಗುರುವಾರ ಅವುಗಳ ಓಡಾಟಕ್ಕೆ ಅವಕಾಶ ನೀಡಿರಲಿಲ್ಲ.

‘ಸರ್ಕಾರದ ನಿಯಮ ಪಾಲಿಸಿ, ಬಸ್‌ಗಳನ್ನು ಓಡಿಸಲಾಗುತ್ತಿದೆ. ಎಲ್ಲವೂ ಹಿಂದಿನಂತೆ ಸಹಜ ಸ್ಥಿತಿಗೆ ಮರಳುತ್ತಿದೆ. ಹದಿನೈದು ದಿನಗಳ ಅವಧಿಯಲ್ಲಿ ವಿಭಾಗಕ್ಕೆ ₹4.8 ಕೋಟಿ ನಷ್ಟ ಉಂಟಾಗಿದೆ’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಆರನೇ ವೇತನದ ಆಯೋಗದ ಶಿಫಾರಸು ಜಾರಿಗೆ ತರಬೇಕೆಂದು ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿದ್ದ ಮುಷ್ಕರ ಬುಧವಾರ ಕೊನೆಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.