ADVERTISEMENT

ಅಹನಾ ಸೌಹಾರ್ದ ಬ್ಯಾಂಕ್‌; ಅಧ್ಯಕ್ಷ ಸೇರಿ 23 ಮಂದಿನಿರ್ದೇಶಕರ ವಿರುದ್ಧ ಪ್ರಕರಣ

ಠೇವಣಿದಾರರ ಹಣ ದುರ್ಬಳಕೆ ಆರೋಪ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 17:02 IST
Last Updated 21 ಏಪ್ರಿಲ್ 2021, 17:02 IST

ಹೊಸಪೇಟೆ (ವಿಜಯನಗರ): ಠೇವಣಿದಾರರಿಗೆ ಅವರ ಠೇವಣಿ ಮರುಪಾವತಿ ಮಾಡದೆ ವಂಚಿಸಲಾಗಿದೆ ಎಂಬ ದೂರಿನ ಮೇರೆಗೆ ನಗರದ ಅಹನಾ ಸೌಹಾರ್ದ ಕ್ರೆಡಿಟ್‌ ಕೋ ಆಪರೇಟಿವ್‌ ಲಿಮಿಟೆಡ್‌ನ ಅಧ್ಯಕ್ಷರಾದ ಕೆ. ವೀರಭದ್ರಪ್ಪ, ನಿರ್ದೇಶಕರಾದ ಕೆ. ಉಮೇಶಪ್ಪ, ಕೆ. ಮಲ್ಲಿಕಾರ್ಜುನ, ಚಂದ್ರಪ್ಪ ಸೇರಿದಂತೆ ಒಟ್ಟು 23 ನಿರ್ದೇಶಕರ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಅಹನಾ ಸೌಹಾರ್ದ ಬ್ಯಾಂಕಿನಲ್ಲಿ 400ಕ್ಕೂ ಅಧಿಕ ಜನ ಹಣ ಠೇವಣಿದಾರರಿದ್ದಾರೆ. ಅಧ್ಯಕ್ಷ ಹಾಗೂ 23 ಜನ ನಿರ್ದೇಶಕರು ಅಧಿಕಾರ ದುರುಪಯೋಗ ಪಡಿಸಿಕೊಂಡು ಯಾವುದೇ ಅಗತ್ಯ ಭದ್ರತೆಯ ದಾಖಲಾತಿಗಳಿಲ್ಲದೆ ₹7.50 ಕೋಟಿ ಸಾಲ ನೀಡಿದ್ದಾರೆ. ಕಾಲ್ಪನಿಕ ಜಮೆ, ಖರ್ಚು ತೋರಿಸಿ ₹9.32 ಕೋಟಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಸಹಕಾರಿ ಅಧಿನಿಯಮದ ನಿಯಮ ಪಾಲಿಸಿಲ್ಲ ಎಂದು ಠೇವಣಿದಾರರು ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ನಿಯಮಿತದ ವ್ಯವಸ್ಥಾಪಕ ಶಂಕರಗೌಡ ಜಿ. ಪಾಟೀಲ್‌ ಅವರಿಗೆ ಪತ್ರ ಬರೆದಿದ್ದರು. ಅವರ ಸೂಚನೆ ಮೇರೆಗೆ ಸೌಹಾರ್ದ ಸಹಕಾರಿಯ ಅಧಿಕಾರಿ ಕೆ.ಆರ್. ರವಿಕುಮಾರ ಕೊಟ್ಟಿರುವ ದೂರಿನ ಮೇರೆಗೆ 23 ಜನರ ವಿರುದ್ಧ ಏ. 4ರಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಗ್ರಾಮೀಣ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಶ್ರೀನಿವಾಸ ಮೇಟಿ ತಿಳಿಸಿದ್ದಾರೆ.

‘ಈ ಪ್ರಕರಣದಲ್ಲಿ ಅಧ್ಯಕ್ಷರು, ನಿರ್ದೇಶಕರು, ಹಾಲಿ ಮತ್ತು ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳಿವೆ. ಕಂದಾಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ತನಿಖೆ ಪ್ರಗತಿಯಲ್ಲಿದೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಸಿಬಿಐ ತನಿಖೆಗೆ ಆಗ್ರಹ:

‘ಠೇವಣಿದಾರರ ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪದ ಮೇರೆಗೆ 23 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಹಲವು ದಿನಗಳಾಗಿವೆ. ಆದರೆ, ಇದುವರೆಗೆ ಯಾರೊಬ್ಬರನ್ನೂ ಬಂಧಿಸಿಲ್ಲ. ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಅಥವಾ ಸಿಬಿಐ ತನಿಖೆಗೆ ವಹಿಸಬೇಕು’ ಎಂದು ಠೇವಣಿದಾರರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.