ADVERTISEMENT

ಇಂಟರ್‌ಸಿಟಿ ರೈಲು ಆರಂಭಕ್ಕೆ ಸಂತಸ

ಹಾಲಿ ಸಂಚಾರದ ವೇಳಾಪಟ್ಟಿ ಬದಲಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 12:04 IST
Last Updated 12 ಮಾರ್ಚ್ 2021, 12:04 IST
ಹೊಸಪೇಟೆಯಿಂದ ಬೆಂಗಳೂರಿಗೆ ಶುಕ್ರವಾರ ಪಯಣ ಬೆಳೆಸಿದ ಇಂಟರ್‌ಸಿಟಿ ರೈಲಿನ ಎದುರು ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಮುಖಂಡರು ಸೇರಿಕೊಂಡು ಸಂಭ್ರಮಿಸಿದರು
ಹೊಸಪೇಟೆಯಿಂದ ಬೆಂಗಳೂರಿಗೆ ಶುಕ್ರವಾರ ಪಯಣ ಬೆಳೆಸಿದ ಇಂಟರ್‌ಸಿಟಿ ರೈಲಿನ ಎದುರು ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಮುಖಂಡರು ಸೇರಿಕೊಂಡು ಸಂಭ್ರಮಿಸಿದರು   

ವಿಜಯನಗರ (ಹೊಸಪೇಟೆ): ನಗರದಿಂದ ಬೆಂಗಳೂರಿಗೆ ಶುಕ್ರವಾರ ನೂತನ ಇಂಟರ್‌ಸಿಟಿ ರೈಲು ಓಡಾಟ ಆರಂಭಗೊಂಡಿರುವುದಕ್ಕೆ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ.

ನಗರದ ನಿಲ್ದಾಣದಿಂದ ಶುಕ್ರವಾರ ರೈಲು ಹೊರಡುವುದಕ್ಕೂ ಮುನ್ನ ಸಿಹಿ ವಿನಿಮಯ ಮಾಡಿಕೊಂಡು ಘೋಷಣೆ ಕೂಗಿದರು. ನಂತರ ಮಾತನಾಡಿದ ಸಮಿತಿಯ ಅಧ್ಯಕ್ಷ ವೈ. ಯಮುನೇಶ್‌, ‘ಒಂದು ದಶಕದ ನಿರಂತರ ಹೋರಾಟದಿಂದ ಇಂಟರ್‌ಸಿಟಿ ರೈಲು ಆರಂಭಗೊಂಡಿದೆ. ಹೆಚ್ಚಿನ ಜನರಿಗೆ ಈ ರೈಲಿನ ಪ್ರಯೋಜನ ಆಗಬೇಕೆಂದರೆ ಈಗಿರುವ ಸಂಚಾರದ ವೇಳಾಪಟ್ಟಿ ಬದಲಿಸುವ ಅಗತ್ಯವಿದೆ’ ಎಂದರು.

‘ಸದ್ಯ ರೈಲು ಮಧ್ಯಾಹ್ನ 12.15ಕ್ಕೆ ನಗರದಿಂದ ಬಳ್ಳಾರಿ–ರಾಯದುರ್ಗ–ತುಮಕೂರು ಮಾರ್ಗವಾಗಿ ರಾತ್ರಿ 10.45ಕ್ಕೆ ಬೆಂಗಳೂರು ನಗರ ತಲುಪುತ್ತದೆ. ಅದೇ ರೀತಿ ಮರುದಿನ ಬೆಳಿಗ್ಗೆ 5ಕ್ಕೆ ಬೆಂಗಳೂರಿನಿಂದ ನಿರ್ಗಮಿಸಿ ದೇ ದಿನ ಮಧ್ಯಾಹ್ನ 3.30ಕ್ಕೆ ನಗರ ತಲುಪುತ್ತದೆ. ಈ ರೈಲು ನಿತ್ಯ ಬೆಳಿಗ್ಗೆ 10.30ಕ್ಕೆ ನಗರದಿಂದ ಹೊರಟು ರಾತ್ರಿ 9.30ಕ್ಕೆ ಬೆಂಗಳೂರು ತಲುಪಬೇಕು. ಬೆಂಗಳೂರಿನಿಂದ ಬೆಳಿಗ್ಗೆ 5ರ ಬದಲು ಆರು ಗಂಟೆಗೆ ನಿರ್ಗಮಿಸಿ ಎಲ್ಲರಿಗೂ ಅನುಕೂಲವಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಯಶವಂತಪುರ–ಹೊಸಪೇಟೆ (ಗಾಡಿ ಸಂಖ್ಯೆ 06207/06208) ರೈಲು ಬೆಳಿಗ್ಗೆ 7.30ಕ್ಕೆ ನಗರಕ್ಕೆ ಬಂದು ಸಂಜೆ 5ಕ್ಕೆ ಯಶವಂತಪುರಕ್ಕೆ ನಿರ್ಗಮಿಸುತ್ತದೆ. 9 ತಾಸು ನಗರ ನಿಲ್ದಾಣದಲ್ಲಿ ನಿಲುತ್ತದೆ. ಅದರ ಬದಲು ಬೆಳಿಗ್ಗೆ 8ಕ್ಕೆ ಹೊಸಪೇಟೆ–ದಾವಣಗೆರೆ–ಹೊಸಪೇಟೆ ಪ್ಯಾಸೆಂಜರ್‌ ರೈಲಾಗಿ ವಿಸ್ತರಿಸಬೇಕು. ಹೀಗೆ ಮಾಡಿದರೆ ಹರಪನಹಳ್ಳಿ, ಹೂವಿನಹಡಗಲಿ, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ಜನತೆಗೆ ಪ್ರಯೋಜನವಾಗುತ್ತದೆ. ಇಲಾಖೆಗೂ ಆದಾಯ ಬರುತ್ತದೆ’ ಎಂದು ತಿಳಿಸಿದರು. ಬಳಿಕ ಮನವಿ ಪತ್ರವನ್ನು ರೈಲು ನಿಲ್ದಾಣದ ಸೂಪರಿಟೆಂಡೆಂಟ್‌ ಉಮೇಶ್‌ ಅವರಿಗೆ ಸಲ್ಲಿಸಿದರು.

ಸಮಿತಿಯ ಮುಖಂಡರಾದ ಕೆ.ಮಹೇಶ್, ಟಿ.ಆರ್.ತಿಪ್ಪೇಸ್ವಾಮಿ, ರಾಮಕೃಷ್ಣ, ವಿಶ್ವನಾಥ ಕೌತಾಳ್, ದೇವರೆಡ್ಡಿ, ಉಮಾ ಮಹೇಶ್ವರ, ಶೇಖರ್ ಮುದ್ಲಾಪುರ, ಕಲ್ಲೇಶ್‌ ಜೀರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.