ADVERTISEMENT

ಕರಾವಳಿಯಲ್ಲಿ ರಾಜಕಾರಣಿಗಳ ಮಕ್ಕಳು ಸಾಯುತ್ತಿಲ್ಲ: ಚಂದ್ರಶೇಖರ್‌ ದೊಡ್ಡಮನಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 8:40 IST
Last Updated 28 ಜುಲೈ 2022, 8:40 IST
   

ಹೊಸಪೇಟೆ (ವಿಜಯನಗರ): ಕರಾವಳಿಯಲ್ಲಿ ಕೋಮುದಳ್ಳುರಿಯಿಂದ ಸಾಯುತ್ತಿರುವವರೆಲ್ಲರೂ ಅಮಾಯಕರ ಮಕ್ಕಳು. ಯಾವ ರಾಜಕಾರಣಿಗಳ ಮಕ್ಕಳು ಸಾಯುತ್ತಿಲ್ಲ’ ಎಂದು ಕೆ.ಆರ್.ಎಸ್‌. ಪಕ್ಷದ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ್‌ ದೊಡ್ಡಮನಿ ತಿಳಿಸಿದರು.

ಜನ ಬದಲಾಗಬೇಕು. ಜನ ಬದಲಾಗುವವರೆಗೆ ಅಮಾಯಕರು ಸಾಯುವುದು ನಿಲ್ಲುವುದಿಲ್ಲ. ವ್ಯವಸ್ಥೆಯೂ ಬದಲಾಗುವುದಿಲ್ಲ. ಪ್ರವೀಣ್‌ ನೆಟ್ಟಾರು ಹತ್ಯೆ ರಾಜ್ಯ ಸರ್ಕಾರ, ಗೃಹಸಚಿವರ ಸಂಪೂರ್ಣ ವೈಫಲ್ಯ ಎತ್ತಿ ತೋರಿಸುತ್ತದೆ. ಸಿ.ಎಂ. ಮಧ್ಯರಾತ್ರಿ ಸುದ್ದಿಗೋಷ್ಠಿ ನಡೆಸಿ, ಏನನ್ನೂ ಹೇಳಲು ಹೊರಟಿದ್ದಾರೆ’ ಎಂದು ಪ್ರಶ್ನಿಸಿದರು.

30ರಂದು ವಿಜಯನಗರ ಜಿಲ್ಲೆಗೆ ಕೆ.ಆರ್‌.ಎಸ್‌. ಪಕ್ಷದ ಜನಚೈತನ್ಯ ಯಾತ್ರೆ
‘ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಕೈಗೊಂಡಿರುವ ಎರಡನೇ ಹಂತದ ಜನಚೈತನ್ಯ ಯಾತ್ರೆ ಶನಿವಾರ (ಜು.30) ಜಿಲ್ಲೆ ತಲುಪಲಿದೆ’ ಎಂದು ಪಕ್ಷದ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ್‌ ದೊಡ್ಡಮನಿ ತಿಳಿಸಿದರು.

ADVERTISEMENT

ಮೊದಲ ಹಂತದ ಯಾತ್ರೆ ಇತ್ತೀಚೆಗೆ ತುಮಕೂರಿನಲ್ಲಿ ಸಮಾರೋಪಗೊಂಡಿದೆ. ಎರಡನೇ ಯಾತ್ರೆ ಜು. 15ರಂದು ಚಿತ್ರದುರ್ಗದಿಂದ ಆರಂಭಗೊಂಡಿದ್ದು, ಜು. 30ರಂದು ದಾವಣಗೆರೆ ಗಡಿ ಮೂಲಕ ವಿಜಯನಗರ ಪ್ರವೇಶಿಸಿ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಸಂಚರಿಸಲಿದೆ ಎಂದು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ಬಿಜೆಪಿ, ಕಾಂಗ್ರೆಸ್‌, ಜೆ.ಡಿ.ಎಸ್‌. ಪಕ್ಷಗಳ ದುರಾಡಳಿತದ ಬಗ್ಗೆ ಜನಸಾಮಾನ್ಯರಿಗೆ ತಿಳಿಸಿ, ಸ್ವಚ್ಛ, ಪ್ರಾಮಾಣಿಕ, ಭ್ರಷ್ಟಾಚಾರರಹಿತ ಆಡಳಿತದ ಬಗ್ಗೆ ತಿಳಿಸಲಾಗುತ್ತಿದೆ. ಇದರ ಮೂಲಕ ಪಕ್ಷ ಕೂಡ ಸಂಘಟಿಸಲಾಗುತ್ತಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ, ಉಪಾಧ್ಯಕ್ಷ ಲಿಂಗೇಗೌಡ ಅವರ ನೇತೃತ್ವದಲ್ಲಿ ಯಾತ್ರೆ ಕೈಗೊಳ್ಳಲಾಗಿದೆ. ಯಾತ್ರೆಯು ಹಂಪಿ ಮೂಲಕ ನಗರ ಪ್ರವೇಶಿಸಲಿದ್ದು, ಜು.30ರಂದು ಬೆಳಿಗ್ಗೆ 10ಕ್ಕೆ ನಗರದ ಪುನೀತ್‌ ರಾಜಕುಮಾರ್‌ ವೃತ್ತದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದು ತಿಳಿಸಿದರು.

ಅದೇ ದಿನ ಮಧ್ಯಾಹ್ನ ಹಗರಿಬೊಮ್ಮನಹಳ್ಳಿಯಲ್ಲಿ ಪಕ್ಷದ ಜಿಲ್ಲಾ ಕಚೇರಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಹಗರಿಬೊಮ್ಮನಹಳ್ಳಿ ಎಲ್ಲ ತಾಲ್ಲೂಕುಗಳಿಗೆ ಸಮಾನ ಅಂತರದಲ್ಲಿದೆ. ಪಕ್ಷದ ಕಾರ್ಯಕರ್ತರು, ಸಾರ್ವಜನಿಕರ ಅನುಕೂಲಕ್ಕಾಗಿ ಅಲ್ಲಿ ಕಚೇರಿ ಆರಂಭಿಸಲು ನಿರ್ಧರಿಸಲಾಗಿದೆ. ಈಗಾಗಲೇ ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿ, ದಾಖಲೆಗಳ ಸಮೇತ ಸಂಬಂಧಿಸಿದವರ ವಿರುದ್ಧ ಕ್ರಮಕ್ಕೆ ದೂರು ಕೊಡಲಾಗಿದೆ. ಬರುವ ದಿನಗಳಲ್ಲಿ ಜಿಲ್ಲಾ ಕೇಂದ್ರಕ್ಕೂ ಹೋರಾಟ ವಿಸ್ತರಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ.) ಹಲ್ಲಿಲ್ಲದ ಹಾವಿನಂತಾಗಿವೆ. ಅವುಗಳು ಮಾಡಬೇಕಾದ ಕೆಲಸವನ್ನು ಕೆ.ಆರ್‌.ಎಸ್‌. ಪಕ್ಷದ ಕಾರ್ಯಕರ್ತರು ಮಾಡುತ್ತಿದ್ದಾರೆ. ಕೆಲವೆಡೆ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆಗಳು ನಡೆದಿವೆ. ಆದರೆ, ಎದೆಗುಂದಿಲ್ಲ. ಐ.ಎ.ಎಸ್‌, ಐ.ಪಿ.ಎಸ್‌. ಅಧಿಕಾರಿಗಳು ರಾಜಕಾರಣಿಗಳ ಗುಲಾಮಗಿರಿ ಮಾಡುತ್ತಿದ್ದಾರೆ. ಅವರು ವೃತ್ತಿಧರ್ಮ ಅರಿತುಕೊಂಡು ಕೆಲಸ ಮಾಡಿದರೆ ಉತ್ತಮ ಎಂದರು.

ಗಣೇಶ್‌ ಪಕ್ಷದಲ್ಲಿಲ್ಲ:
ಈ ಹಿಂದೆ ಪಕ್ಷದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಪ.ಯ. ಗಣೇಶ್‌ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದ್ದು, ಅವರೀಗ ಪಕ್ಷದಲ್ಲಿಲ್ಲ. ಅವರು ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ. ಅವರ ದುರ್ವರ್ತನೆಗೆ ಪಕ್ಷದಿಂದ ತೆಗೆದು ಹಾಕಲಾಗಿದೆ. ಬರುವ ವಿಧಾನಸಭೆ ಚುನಾವಣೆಗೆ ವಿಜಯನಗರ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ತಾನೇ ಎಂದು ಅವರು ಘೋಷಿಸಿಕೊಂಡಿದ್ದಾರೆ. ಅದನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರು ನಿರ್ಧರಿಸುತ್ತಾರೆ ಎಂದು ಹೇಳಿದರು.

ಪಕ್ಷದ ರೈತ ಘಟಕದ ಜಿಲ್ಲಾಧ್ಯಕ್ಷ ಈಡಿಗರ ಕರಿಬಸಪ್ಪ, ಕಾನೂನು ಸಲಹೆಗಾರ ಅನಿಲ್‌ ಕುಮಾರ್‌, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಟಿ. ನಜೀರ್‌, ಮುಖಂಡ ಚಲುವಾದಿ ಆನಂದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.