ಹೊಸಪೇಟೆ (ವಿಜಯನಗರ): 'ನಾನೂ ರೈತನೇ, ತಾಲ್ಲೂಕಿನ ರೈತರ ಕಷ್ಟದ ಸಂಪೂರ್ಣ ಅರಿವಿದೆ. ಸಕ್ಕರೆ ಕಾರ್ಖಾನೆ ಸ್ಥಾಪನೆ ಖಂಡಿತ ಮಾಡಲಿದ್ದೇನೆ, ಇದನ್ನು ಇದೇ 20ರಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಘೋಷಿಸಲಿದ್ದಾರೆ’ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.
ಇಲ್ಲಿನ ಎಪಿಎಂಸಿ ಆವರಣದಲ್ಲಿ ಮಂಗಳವಾರ ವಿವಿಧ ಕೃಷಿ ಯೋಜನೆಗಳಲ್ಲಿ ತಮ್ಮ ಕ್ಷೇತ್ರದ ರೈತರಿಗೆ ಕೃಷಿ ಪರಿಕರಗಳನ್ನು ವಿತರಿಸಿ ಮಾತನಾಡಿದ ಅವರು, ‘ಸಕ್ಕರೆ ಕಾರ್ಖಾನೆ ನೀನು ಸ್ಥಾಪಿಸು ಎಂದು ಸಿಎಂ ಅವರು ನನಗೆ ಕಳೆದ ವರ್ಷವೇ ಅಪ್ಪಣೆ ಕೊಡಿಸಿದ್ದರು. ಆದರೆ ದುಡ್ಡು ಹೊಂದಿಸುವುದು, ಸ್ಥಳ ಗುರುತಿಸುವುದು ಸಹಿತ ಹಲವು ಕಾರಣಗಳಿಂದ ಅದು ವಿಳಂಬವಾಯಿತು. ಈ ಬಾರಿ ಹಾಗೆ ಆಗುವುದಿಲ್ಲ, ಎಲ್ಲವೂ ನಿರ್ಧಾರ ಆಗಿದೆ, ಮುಖ್ಯಮಂತ್ರಿ ಅವರೇ ಘೋಷಣೆ ಮಾಡಲಿದ್ದಾರೆ’ ಎಂದರು.
‘ಕೃಷಿಯ ಸಂಗ ಬಿಡಬೇಡ ಎಂದು ನನ್ನ ಅಪ್ಪ ನನಗೆ ಆಗಾಗ ಹೇಳುತ್ತಲೇ ಇರುತ್ತಾರೆ. ಸಕ್ಕರೆ ಕಾರ್ಖಾನೆ ಆರಂಭಿಸಿದರೆ ಅವರೂ ಬಹಳ ಖುಷಿಪಡುತ್ತಾರೆ. ರೈತರ ಬಗ್ಗೆ ಸಿಎಂಗೆ ಇರುವಷ್ಟು ಕಾಳಜಿ ಬೇರೆ ಯಾವ ಸಚಿವರಿಗೂ ಇಲ್ಲ. ಹೀಗಾಗಿ ಸಕ್ಕರೆ ಕಾರ್ಖಾನೆ ಕಾರ್ಯಗತಗೊಳ್ಳುವುದು ನಿಶ್ಚಿತ’ ಎಂದು ಗವಿಯಪ್ಪ ಹೇಳಿದರು.
ನೀರು–ಡಿಕೆಶಿಗೆ ಮನವಿ: ಹಲವು ಕೆರೆಗಳಿಗೆ ನೀರು ಹರಿಸಲು ಮಾಡಿದಂತಹ ತಳವಾರಘಟ್ಟ ಪಂಪಿಂಗ್ ಯೋಜನೆ ನೀರಿನ ಕೊರತೆಯಿಂದ ವಿಫಲವಾಗುತ್ತಿದೆ. ಅದಕ್ಕಾಗಿ ತುಂಗಭದ್ರಾ ಜಲಾಶಯದ ಪಾವಗಡ ಪಂಪಿಂಗ್ ಸ್ಟೇಷನ್ ಬಳಿ ಮತ್ತೊಂದು ಪಂಪಿಂಗ್ ಸ್ಟೇಷನ್ ಸ್ಥಾಪಿಸಿ ಹೊಸಪೇಟೆ ಸುತ್ತಮುತ್ತಲಿನ ಕೆರೆಗಳ ನೀರು ತುಂಬಿಸುವ ಯೋಜನೆಗೆ ಮರುಜೀವ ನೀಡಬೇಕೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಲ್ಲಿ ಮನವಿ ಮಾಡಿದ್ದೇನೆ’ ಎಂದು ಗವಿಯಪ್ಪ ಹೇಳಿದರು.
ಈ ಭಾಗದ ಮಣ್ಣಿನಲ್ಲಿ ಕಬ್ಬಿಣದ ಅಂಶ ಅಧಿಕ ಇರುವ ಕಾರಣ ಮಾವು ತುಂಬ ರುಚಿಕರವಾಗಿರುತ್ತದೆ, ಕೃಷಿಕರು ಮಾವು ಸಹ ಬೆಳೆಯಬೇಕು ಎಂದು ಸಲಹೆ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದ್ಗಲ್, ಉಪನಿರ್ದೇಶಕ ನಯೀಂ ಪಾಷಾ, ಸಹಾಯಕ ನಿರ್ದೇಶಕ ಮನೋಹರ್, ಕೃಷಿ ವಿಜ್ಞಾನಿ ಪ್ರೊ.ಬದರಿಪ್ರಸಾದ್ ಇತರರು ಇದ್ದರು.
₹2.75 ಕೋಟಿಯ ಕೃಷಿ ಪರಿಕರ ವಿವಿಧ ಕೃಷಿ ಯೋಜನೆಗಳಲ್ಲಿ ₹2.75 ಕೋಟಿ ಮೊತ್ತದ ಕೃಷಿ ಸಾಮಗ್ರಿ ಪರಿಕರ ಅನುದಾನಗಳನ್ನು ವಿತರಿಸಲಾಯಿತು. 21802 ರೈತರಿಗೆ ₹31.60 ಲಕ್ಷದ ಬೀಜ 303 ರೈತರಿಗೆ ₹93.88 ಲಕ್ಷದ ಕೃಷಿ ಯಂತ್ರಗಳು 227 ರೈತರಿಗೆ ₹40.36 ಲಕ್ಷದ ಸೂಕ್ಷ್ಮ ನೀರಾವರಿ ಪರಿಕರಗಳು 56 ರೈತರಿಗೆ ₹39.22 ಲಕ್ಷದ ಪಿವಿಸಿ ಪೈಪ್‌ಗಳು 2227 ರೈತರ ಮಣ್ಣು ಆರೋಗ್ಯ ಚೀಟಿ ವಿತರಣೆ ಹಾಗೂ ಕೃಷಿ ಭಾಗ್ಯ ಯೋಜನೆಯಡಿಯಲ್ಲಿ 36 ಕೃಷಿ ಹೊಂಡಗಳಿಗೆ ₹68.89 ಲಕ್ಷ ಅನುದಾನ ಒದಗಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದ್ಗಲ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.