ADVERTISEMENT

ಸಚಿವರಿಂದ ಜೀವ ಬೆದರಿಕೆ ಆರೋಪ; ಆತ್ಮಹತ್ಯೆಗೆ ಯತ್ನಿಸಿದವರ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2022, 6:58 IST
Last Updated 31 ಆಗಸ್ಟ್ 2022, 6:58 IST
   

ಹೊಸಪೇಟೆ: ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಸೇರಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಆರು ಜನರ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಮಂಗಳವಾರ ಮಧ್ಯಾಹ್ನ 20-25 ಜನರೊಂದಿಗೆ ನನ್ನ ಮನೆಗೆ ಬಂದು 'ನಿಮ್ಮ ಮೇಲೆ ಪೆಟ್ರೋಲ್ ಹಾಕಿ ಸುಡುತ್ತೇನೆ' ಎಂದು ಜೀವ ಬೆದರಿಕೆ ಒಡ್ಡಿದ್ದರು. ಅದರಿಂದ ಎಸ್ಪಿ ಕಚೇರಿಗೆ ದೂರು ಕೊಡಲು ಹೋಗಿದ್ದೆ.

ಎಸ್ಪಿಯವರು ಕಚೇರಿಯಲ್ಲಿ ಇಲ್ಲದ ಕಾರಣ ಪೆಟ್ರೋಲ್ ಹಾಕಿಕೊಂಡು ಜೀವ ಕೊಡಲು ಮುಂದಾಗಿದ್ದೆ ಎಂದು ಡಿ. ಪೋಲಪ್ಪ ಅವರು ಠಾಣೆಗೆ ಲಿಖಿತ ರೂಪದ ದೂರು ಕೊಟ್ಟಿದ್ದರು. ಅನಂತರ ಆನಂದ್ ಸಿಂಗ್ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಎಸ್ಪಿ ಕಚೇರಿಯ ಧ್ವಜ ಕಟ್ಟೆ ಎದುರು ಏಕಾಏಕಿ ಬಂದು ಪೆಟ್ರೋಲ್ ಮೈಮೇಲೆ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರಿಂದ ಪೋಲಪ್ಪ ಹಾಗೂ ಅವರ ಕುಟುಂಬದ ಆರು ಜನ ಸದಸ್ಯರ ವಿರುದ್ಧ ಈಗ ಪ್ರಕರಣ ದಾಖಲಾಗಿದೆ.

ADVERTISEMENT

ಆನಂದ್ ಸಿಂಗ್ ಅವರು ಕಾಲುವೆ ಜಾಗ ಒತ್ತುವರಿ ಮಾಡಿಕೊಂಡು ಅದರ ಮೇಲೆ ಮನೆ ಕಟ್ಟಿಸಿಕೊಂಡಿದ್ದಾರೆ ಎಂದು ಆರೋಪಿಸಿದ ಪೋಲಪ್ಪ ಅದನ್ನು ತೆರವುಗೊಳಿಸುವಂತೆ ಒತ್ತಾಯಿಸಿದ್ದರು.

ಪೋಲಪ್ಪ ಹೇಳುವ ಪ್ರಕಾರ, ಆನಂದ್ ಸಿಂಗ್ ಹಾಗೂ ಅವರೊಂದಿಗೆ 20ರಿಂದ 25 ಜನ ಮಂಗಳವಾರ ಮಧ್ಯಾಹ್ನ ಮನೆಗೆ ಬಂದು ಜೀವ ಬೆದರಿಕೆ ಹಾಕಿದ್ದಾರೆ. ಸಚಿವರು ನಗರಸಭೆಯವರನ್ನು ಸ್ಥಳಕ್ಕೆ ಕರೆಸಿ ಇವರನ್ನು ಇಲ್ಲಿಂದ ತೆರವುಗೊಳಿಸುವಂತೆ ಸೂಚಿಸಿದರು ಎಂದೂ ಪೋಲಪ್ಪ ಆರೋಪಿಸಿದ್ದರು.

ಪೋಲಪ್ಪ ಅವರ ಆರೋಪವನ್ನು ಸಚಿವ ಆನಂದ್ ಸಿಂಗ್ ಈಗಾಗಲೇ ಅಲ್ಲಗಳೆದಿದ್ದಾರೆ. 'ನನ್ನ ವಿರುದ್ಧದ ಆರೋಪಗಳೆಲ್ಲ ಶುದ್ಧ ಸುಳ್ಳು. ನಾನು ಯಾರಿಗೂ ಜೀವ ಬೆದರಿಕೆ ಹಾಕಿಲ್ಲ. ಜಾತಿ ನಿಂದನೆ ಮಾಡಿಲ್ಲ. ಸಾಕ್ಷ್ಯಗಳಿದ್ದರೆ ಒದಗಿಸಲಿ. ಕಾನೂನು ಎಲ್ಲರಿಗೂ ಸಮನಾದುದು' ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.