ADVERTISEMENT

ಕನ್ನಡ ವಿ.ವಿ. ಸರ್ವಾಧಿಕಾರ ಧೋರಣೆಗೆ ಖಂಡನೆ

ಪರಿಶಿಷ್ಟರನ್ನು ಉನ್ನತ ಶಿಕ್ಷಣದಿಂದ ದೂರ ಮಾಡುವ ಹುನ್ನಾರ–ಆರೋಪ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2022, 6:40 IST
Last Updated 20 ಏಪ್ರಿಲ್ 2022, 6:40 IST

ಹೊಸಪೇಟೆ (ವಿಜಯನಗರ): ತನ್ನ ಹಕ್ಕು ಕೇಳಿದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗೆ ನೋಟಿಸ್‌ ನೀಡಿ, ಉನ್ನತ ಶಿಕ್ಷಣದಿಂದ ವಂಚಿತಗೊಳಿಸಲು ಮುಂದಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯ ಆಡಳಿತದ ಸರ್ವಾಧಿಕಾರ ಧೋರಣೆ ಖಂಡನಾರ್ಹವಾದುದು ಎಂದು ಭಾರತ ವಿದ್ಯಾರ್ಥಿ ಫೆಡರೇಶನ್‌ (ಎಸ್‌ಎಫ್‌ಐ) ರಾಜ್ಯ ಸಮಿತಿ ಅಧ್ಯಕ್ಷ ಅಮರೇಶ ಕಡಗದ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳು ವಿಶ್ವವಿದ್ಯಾಲಯಕ್ಕೆ ಭೇಟಿ ಕೊಟ್ಟಾಗ ವಿದ್ಯಾರ್ಥಿಗಳ ಪರವಾಗಿ ದೊಡ್ಡಬಸಪ್ಪ ಅವರು ಫೆಲೋಶಿಪ್ ಹಣ ಬಿಡುಗಡೆಗೆ ಮನವಿ ಮಾಡಿದ್ದರು. ಅದು ತಪ್ಪಾ? ಮುಖ್ಯಮಂತ್ರಿಯವರಿಗೆ ಜಡ್‌ ಪ್ಲಸ್‌ ಭದ್ರತೆ ಇರುತ್ತದೆ. ಒಂದುವೇಳೆ ಅವರು ಸಿ.ಎಂ. ಜತೆಗೆ ದುರ್ವರ್ತನೆ ತೋರಿದ್ದರೆ ಅವರ ಭದ್ರತೆಗಿದ್ದ ಸಿಬ್ಬಂದಿ ಸುಮ್ಮನೆ ಇರುತ್ತಿದ್ದರೆ? ಕುಂಟು ನೆಪ ಹೇಳಿಕೊಂಡು ವಿದ್ಯಾರ್ಥಿಯ ಭವಿಷ್ಯ ಹಾಳುಗೆಡವಲು ಮುಂದಾಗಿರುವ ಕ್ರಮ ಸರಿಯಲ್ಲ. ಕೂಡಲೇ ನೋಟಿಸ್‌ ಹಿಂಪಡೆಯಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.

ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ 40 ತಿಂಗಳಿಂದ ಫೆಲೋಶಿಪ್‌ ಕೊಟ್ಟಿಲ್ಲ. ಸಾಲ ಮಾಡಿ ಓದುತ್ತಿದ್ದಾರೆ. ಹಲವರು ಸಂಶೋಧನೆ ಮೊಟಕುಗೊಳಿಸುವ ಹಂತಕ್ಕೆ ಬಂದಿದ್ದಾರೆ. ಇದನ್ನೆಲ್ಲ ನೋಡಿಯೇ ದೊಡ್ಡಬಸಪ್ಪ ನೇತೃತ್ವದಲ್ಲಿ ವಿದ್ಯಾರ್ಥಿಗಳು ಅವರ ಸಮಸ್ಯೆಯನ್ನು ರಾಜ್ಯಪಾಲರು, ಮುಖ್ಯಮಂತ್ರಿಯವರಿಗೆ ತಿಳಿಸಿದ್ದಾರೆ. ಇದನ್ನೇ ದೊಡ್ಡ ವಿಷಯ ಮಾಡಿ, ದುರ್ವರ್ತನೆ ಎಂದು ಆರೋಪಿಸಿ ಅವರ ಪಿಎಚ್‌.ಡಿ. ನೋಂದಣಿ ರದ್ದುಪಡಿಸಬಾರದೇಕೆ ಎಂದು ನೋಟಿಸ್‌ ಕೊಟ್ಟಿರುವುದು ಖಂಡನೀಯ ಎಂದಿದ್ದಾರೆ.

ADVERTISEMENT

ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನ ನೀಡಿರುವ ಹೋರಾಟದ ಹಕ್ಕಿನ ಕಗ್ಗೊಲೆ. ತಳ ಸಮುದಾಯಕ್ಕೆ ಸೇರಿದವರ ಉನ್ನತ ಶಿಕ್ಷಣವನ್ನು ಕಿತ್ತುಕೊಳ್ಳುವ ಷಡ್ಯಂತ್ರ ಇದರಲ್ಲಿದೆ. ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಬೇಕಾದ ವಿ.ವಿ. ಸೇಡು ತೀರಿಸಿಕೊಳ್ಳುವ ಕ್ರಮ ಶೋಭೆ ತರುವಂತಹದ್ದಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.