ADVERTISEMENT

ಹೊಸಪೇಟೆ: ತೈಲ ದರ ಹೆಚ್ಚಳ ವಿರೋಧಿಸಿ ಕಾಂಗ್ರೆಸ್ ಬೈಸಿಕಲ್ ಜಾಥಾ

ಪ್ರತಿಭಟನೆಯಲ್ಲಿ ಶಾಸಕರು ಭಾಗಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 7:22 IST
Last Updated 7 ಜುಲೈ 2021, 7:22 IST
ಬೈಸಿಕಲ್ ಜಾಥಾದಲ್ಲಿ ಭಾಗಿಯಾದ ಬಾಲಕರು
ಬೈಸಿಕಲ್ ಜಾಥಾದಲ್ಲಿ ಭಾಗಿಯಾದ ಬಾಲಕರು   

ಹೊಸಪೇಟೆ (ವಿಜಯನಗರ): ಕೇಂದ್ರ ಸರ್ಕಾರವು ಸತತವಾಗಿ ತೈಲ ದರ ಹೆಚ್ಚಳ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕರ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಬುಧವಾರ ನಗರದಲ್ಲಿ ಬೈಸಿಕಲ್ ಜಾಥಾ ನಡೆಸಿದರು.

ನಗರದ ಸಾಯಿಬಾಬಾ ವೃತ್ತದಿಂದ ಆರಂಭಗೊಂಡ ಜಾಥಾ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು. ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದಾರೆ. ಜಾಥಾದುದ್ದಕ್ಕೂ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು.

ಇದಕ್ಕೂ ಮುನ್ನ ಶಾಸಕರಾದ ಯು.ಟಿ. ಖಾದರ್, ಈ. ತುಕಾರಾಂ, ಪರಮೇಶ್ವರ ನಾಯ್ಕ ಜಾಥಾಕ್ಕೆ ಚಾಲನೆ ನೀಡಿದರು. ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ.ಶಿವಯೋಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೊಹಮ್ಮದ್ ಇಮಾಮ್ ನಿಯಾಜಿ, ವಿ. ಸೋಮಪ್ಪ, ಮುಖಂಡರಾದ ವೆಂಕಟರಾವ ಘೋರ್ಪಡೆ, ಗುಜ್ಜಲ್ ನಾಗರಾಜ, ರಾಮಚಂದ್ರ ಮೊದಲಾದವರು ಇದ್ದಾರೆ.

ADVERTISEMENT

ಕೋವಿಡ್ ಲಾಕ್ ಡೌನ್ ನಿಂದ ಜನಸಾಮಾನ್ಯರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದರೆ, ಕೇಂದ್ರ ಸರ್ಕಾರ ಸತತವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡುತ್ತಿದೆ. ಇದರಿಂದಾಗಿ ಅಡುಗೆ ಎಣ್ಣೆ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗುತ್ತಿದೆ. ಇದು ಜನವಿರೋಧಿ ಸರ್ಕಾರ. ಇದು ಬೇಗ ತೊಲಗಿದರಷ್ಟೇ ಎಲ್ಲರಿಗೂ ಮುಕ್ತಿ ಎಂದು ಮುಖಂಡರು ಟೀಕಿಸಿದರು.

ಕಾಂಗ್ರೆಸ್ ಪ್ರತಿಭಟನೆಯಲ್ಲಿ ಅನೇಕ ಬಾಲಕರು ಪಾಲ್ಗೊಂಡಿದ್ದಾರೆ. ಪ್ರತಿಭಟನೆಯಲ್ಲಿ ಜನ ಹೆಚ್ಚುತ್ತಿದ್ದಂತೆ ಪರಸ್ಪರ ಅಂತರ ಇಲ್ಲವಾಗಿದೆ.

ಮುಖಂಡರಾದ ದೀಪಕ್ ಸಿಂಗ್, ಮುನ್ನಿ ಕಾಸಿಂ, ಹುಲುಗಪ್ಪ, ಬಡಾವಲಿ, ಮೊಹಮ್ಮದ್ ಗೌಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.