
ಹಗರಿಬೊಮ್ಮನಹಳ್ಳಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳಲ್ಲಿ ಅಡುಗೆ ಕೆಲಸಗಾರರೇ ವಾರ್ಡನ್‍ಗಳಾಗಿದ್ದಾರೆ. ತಾಲ್ಲೂಕಿನ ಆರು ಹಾಸ್ಟೆಲ್‌ಗಳಲ್ಲಿ ಈ ಪರಿಸ್ಥಿತಿ ಇದೆ.
ಇಲಾಖೆಯಿಂದ ಸಿಬ್ಬಂದಿ ನೇಮಕವಾಗದೆ ವಾರ್ಡನ್ ಹುದ್ದೆ ಅನಾಯಾಸವಾಗಿ ಅಡುಗೆಯವರ ಮುಡಿಗೇರಿದೆ, ಈ ಮೂಲಕ ಸರ್ಕಾರದ ನಿಯಮಾವಳಿಗಳನ್ನು ಸಂಪೂರ್ಣ ಉಲ್ಲಂಘಿಸಲಾಗಿದೆ ಎಂಬ ದೂರು ಕೇಳಿಬಂದಿದೆ.
ಯಾವುದೇ ಇಲಾಖೆಯಲ್ಲಿ ಕೆಳದರ್ಜೆಯ ಅಧಿಕಾರಿಗಳನ್ನು ಮೇಲ್ದರ್ಜೆಯ ಹುದ್ದೆಗೆ ಸ್ವಂತ ವೇತನ ಶ್ರೇಣಿಯ ಆಧಾರದ ಮೇಲೆ ನೇಮಕ ಮಾಡುವುದನ್ನು, ನಿಯೋಜಿಸುವುದನ್ನು ನಿರ್ಬಂಧಿಸಿದೆ ಎಂದು ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಸೇವಾ ನಿಯಮಗಳು-1 ಸ್ಪಷ್ಟವಾಗಿ ಹೇಳಿದೆ. ಈ ಸೂಚನೆಗಳನ್ನು ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆಯ ಆದೇಶ ಇದ್ದರೂ ಇಲ್ಲಿ ಮಾತ್ರ ಪಾಲನೆಯಾಗಿಲ್ಲ.
ತಾಲ್ಲೂಕಿನಲ್ಲಿ ಇಲಾಖೆಯ 11 ಮೆಟ್ರಿಕ್ ಪೂರ್ವ (7 ಬಾಲಕರ, 4 ಬಾಲಕಿಯರ) ಹಾಗೂ 4 ಮೆಟ್ರಿಕ್ ನಂತರದ (ಒಂದು ಬಾಲಕರು, ಮೂರು ಬಾಲಕಿಯರದು) ಸೇರಿ ಒಟ್ಟು 15 ವಿದ್ಯಾರ್ಥಿನಿಲಯಗಳಿವೆ. ಮೆಟ್ರಿಕ್ ನಂತರದ ಎಲ್ಲ ನಾಲ್ಕು ವಿದ್ಯಾರ್ಥಿ ನಿಲಯಗಳಿಗೆ ಸರ್ಕಾರದಿಂದ ನೇಮಕಗೊಂಡಿರುವ ಕಾಯಂ ವಾರ್ಡನ್‍ಗಳಿದ್ದಾರೆ. ಆದರೆ ಮೆಟ್ರಿಕ್ ಪೂರ್ವ ಬಾಲಕರ ತೆಲಿಗೋಳಿ, ಬನ್ನಿಕಲ್ಲು, ಬಾಚಿಗೊಂಡನಹಳ್ಳಿ ಮತ್ತು ಮೆಟ್ರಿಕ್ ಪೂರ್ವ ಬಾಲಕಿಯರ ಪಟ್ಟಣದ ಕೂಡ್ಲಿಗಿ ರಸ್ತೆಯಲ್ಲಿರುವ ಬಾಡಿಗೆ ಕಟ್ಟಡದಲ್ಲಿರುವ ಹಾಸ್ಟೆಲ್ ಮತ್ತು ತಾಲ್ಲೂಕಿನ ಸೊನ್ನ, ಹನಸಿ ಗ್ರಾಮಗಳಲ್ಲಿರುವ ಹಾಸ್ಟೆಲ್‍ಗಳಲ್ಲಿ ಬಿ.ಇಡಿ ವಿದ್ಯಾರ್ಹತೆ ಪೂರೈಸಿರುವ ಅಡುಗೆಯವರೇ ವಾರ್ಡನ್‍ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಇದರಿಂದಾಗಿ ಹಾಸ್ಟೆಲ್‍ಗಳಲ್ಲಿ ಗುಣಮಟ್ಟದ ಕರ್ತವ್ಯ ನಿರ್ವಹಣೆ ಹಾಗೂ ಜವಾಬ್ದಾರಿಗಳನ್ನು ನಿಭಾಯಿಸುವ ಮೂಲ ಉದ್ದೇಶಕ್ಕೆ ತೊಡಕಾಗಿದೆ.
ವಾರ್ಡನ್ ಹುದ್ದೆಯ ಕನಿಷ್ಠ ತರಬೇತಿಯೂ ಇಲ್ಲದೆ ಮಕ್ಕಳನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂದು ಹಾಸ್ಟೆಲ್ ವಿದ್ಯಾರ್ಥಿನಿಯೊಬ್ಬರ ಪಾಲಕರು ಅಳಲು ತೋಡಿಕೊಂಡರು.
‘ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಯಂ ಅಡುಗೆಯವರು ಬಿ.ಇಡಿ ಶೈಕ್ಷಣಿಕ ವಿದ್ಯಾರ್ಹತೆ ಪಡೆದಿದ್ದರೆ ಮಾತ್ರ ವಾರ್ಡನ್ ಹುದ್ದೆಗೆ ನಿಯೋಜನೆ ಮಾಡಬೇಕೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಫರ್ಮಾನು ಹೊರಡಿಸಿದ್ದಾರೆ. ಆದರೆ ಇಲ್ಲಿ ಮೆಟ್ರಿಕ್ ಪೂರ್ವ ಒಂದು ವಿದ್ಯಾರ್ಥಿ ನಿಲಯಕ್ಕೆ ಅಧಿಕಾರಿಯ ಆದೇಶ ಗಾಳಿಗೆ ತೂರಿ ನಿಯೋಜನೆ ಮಾಡಲಾಗಿದೆ. ಈ ಕುರಿತು ತಾಲ್ಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ, ಮೇಲಧಿಕಾರಿಗಳ ಆದೇಶವನ್ನು ಪಾಲಿಸಲಾಗಿದೆ, ಅಡುಗೆಯವರ ಶೈಕ್ಷಣಿಕ ದಾಖಲೆಗಳನ್ನು ಪರಿಶೀಲಿಸಿಲ್ಲ’ ಎಂದು ತಿಳಿಸಿದರು.
ಈ ಎಲ್ಲ ಆದೇಶಗಳನ್ನು ನಾನು ಮಾಡಿಲ್ಲ ಕೇಂದ್ರ ಕಚೇರಿಯಿಂದ ನಿರ್ದೇಶನ ಇರುತ್ತದೆ. ಹಿಂದೆ ಇದ್ದ ಬಿಸಿಎಂ ಜಿಲ್ಲಾಧಿಕಾರಿಗಳು ಅಡುಗೆಯವರನ್ನು ನಿಯೋಜನೆಯ ಆದೇಶ ಮಾಡಿ ಕಳುಹಿಸಿದ್ದಾರೆಕೊಟ್ರೇಶ್ ನಾಯ್ಕ ವಿಸ್ತರಣಾಧಿಕಾರಿ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.