ADVERTISEMENT

ರೋಹಿತ್‌ ಚಕ್ರತೀರ್ಥ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 9:41 IST
Last Updated 1 ಜುಲೈ 2022, 9:41 IST
   

ಹೊಸಪೇಟೆ (ವಿಜಯನಗರ): ಪಠ್ಯ ಪುಸ್ತಕ ಪರಿಷ್ಕರಣೆಯ ಹೆಸರಿನಲ್ಲಿ ಈ ದೇಶದ ಮಹಾನ್‌ ವ್ಯಕ್ತಿಗಳಿಗೆ ರೋಹಿತ್‌ ಚಕ್ರತೀರ್ಥ ಅಪಮಾನ ಎಸಗಿದ್ದು, ಅವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಸಿಪಿಎಂ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಶ್ರಮಿಕ ಭವನದಿಂದ ತಾಲ್ಲೂಕು ಕಚೇರಿ ವರೆಗೆ ರ್‍ಯಾಲಿ ನಡೆಸಿದರು. ಅನಂತರ ರಾಜ್ಯಪಾಲರ ಹೆಸರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್‌ಗೆ ಸಲ್ಲಿಸಿ, ಒತ್ತಾಯಿಸಿದರು.

ರಾಜ್ಯದಲ್ಲಿ ಶಾಲಾ ಪಠ್ಯಕ್ರಮಕ್ಕೆ ಸಂಬಂಧಿಸಿ ತಲೆದೋರಿರುವ ಗೊಂದಲ ಇದುವರೆಗೆ ಬಗೆಹರಿದಿಲ್ಲ. ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿ ರದ್ದುಗೊಳಿಸಿದೆ ಎಂದು ಸರ್ಕಾರ ಹೇಳಿದರೂ ಆ ಸಮಿತಿ ಪರಿಷ್ಕರಿಸಿದ ಪಠ್ಯಪುಸ್ತಕಗಳನ್ನೇ ಶಾಲೆಗೆ ವಿತರಿಸುತ್ತಿದೆ. ಇದು ತೀವ್ರ ಖಂಡನಾರ್ಹವಾದುದು. ಈಗಾಗಲೇ ಶಾಲೆಗಳಿಗೆ ಪೂರೈಸಿರುವ ಪಠ್ಯ ಪುಸ್ತಕಗಳನ್ನು ಹಿಂಪಡೆಯಬೇಕು. ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಸಿದ್ಧಪಡಿಸಿದ ಪಠ್ಯಪುಸ್ತಕಗಳನ್ನು ಪೂರೈಸಬೇಕು. ರೋಹಿತ್‌ ಚಕ್ರತೀರ್ಥ ಅವರನ್ನು ಕೂಡಲೇ ಬಂಧಿಸಬೇಕು. ಹೊಣೆಗೇಡಿತನ ಪ್ರದರ್ಶಿಸಿರುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಆಗ್ರಹಿಸಿದರು.

ADVERTISEMENT

ನಾಲ್ಕು ವರ್ಷಗಳಲ್ಲಿ ಯುದ್ಧ ಕೌಶಲ, ನೈಪುಣ್ಯತೆಗಳನ್ನು ಕಲಿಯಲು ಸಾಧ್ಯವಿಲ್ಲ. ‘ಅಗ್ನಿಪಥ್‌’ ಯೋಜನೆ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸೇನೆಯಲ್ಲಿ ಗುತ್ತಿಗೆ ಆಧಾರಿತ ನೇಮಕಾತಿ ಇಡೀ ದೇಶಕ್ಕೆ ಅಪಾಯ ತಂದೊಡ್ಡಬಲ್ಲದು. ಕೇಂದ್ರ ಸರ್ಕಾರ ತಕ್ಷಣವೇ ಯೋಜನೆ ರದ್ದುಗೊಳಿಸಬೇಕು. ಕೋಮು ಸೌಹಾರ್ದತೆ ಕಾಪಾಡಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಸಿಪಿಎಂ ಮುಖಂಡರಾದ ಮರಡಿ ಜಂಬಯ್ಯ, ಕರುಣಾನಿಧಿ, ಉಮಾಮಹೇಶ್ವರ, ಬಿಸಾಟಿ ಮಹೇಶ್‌, ಗೋಪಾಲ್‌ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.