ಹೊಸಪೇಟೆ (ವಿಜಯನಗರ): ವಿಮಾ ಹಣಕ್ಕಾಗಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಇನ್ನಷ್ಟು ಕೊಲೆ ನಡೆದಿರುವ ಸಾಧ್ಯತೆ ಕಂಡುಬಂದಿದೆ. ನೀಡುವ ದೂರು ಆಧರಿಸಿ ತನಿಖೆ ಆಳಕ್ಕೆ ಇಳಿಯುವ ಮುನ್ಸೂಚನೆ ಲಭಿಸಿದೆ.
‘ಸದ್ಯಕ್ಕೆ ತನಿಖೆಯ ವಿವರ ನೀಡಲಾಗದು. ಆರೋಪಿಗಳು ಕೆಲವು ಸಂಗತಿಗಳನ್ನು ಬಾಯ್ಬಿಟ್ಟಿದ್ದು ನಿಜ. ಆದರೆ ಅದನ್ನು ಹಾಗೆಯೇ ನಂಬಲು ಸಾಧ್ಯವಿಲ್ಲ. ಸೂಕ್ತ ಸಾಕ್ಷ್ಯಗಳು ಬೇಕಾಗುತ್ತವೆ. ತಮ್ಮ ಬಂಧುಗಳ ಸಾವಿನ ಕುರಿತಾಗಿ ಯಾರಿಗಾದರೂ ಸಂಶಯ ಇದ್ದರೆ, ಅವರು ದೂರು ನೀಡಲು ಮುಂದೆ ಬಂದರೆ ತನಿಖೆ ನಡೆಸಲು ಅನುಕೂಲವಾಗುತ್ತದೆ, ಬಹುಶಃ ಕೆಲವೇ ದಿನಗಳಲ್ಲಿ ಹೊಸ ಮಾಹಿತಿ ಲಭಿಸಬಹುದು’ ಎಂದು ಎಸ್‌ಪಿ ಎಸ್.ಜಾಹ್ನವಿ ‘ಪ್ರಜಾವಾಣಿ’ಗೆ ತಿಳಿಸಿದರು.
ವ್ಯವಸ್ಥಿತ ತಂತ್ರ: ಕಂಪ್ಲಿ ಮೂಲದ ಜೀರಿಗನೂರು ಮೂಲದ ಗಂಗಾಧರ (35) ಅವರು ಅನಾರೋಗ್ಯಪೀಡಿತರು ಎಂಬುದು ಖಾಸಗಿ ಬ್ಯಾಂಕೊಂದರ ಹಿರಿಯ ವ್ಯವಹಾರ ವ್ಯವಸ್ಥಾಪಕ ಆರ್.ವೈ.ಯೋಗರಾಜ್ ಸಿಂಗ್‌ಗೆ ತಿಳಿದಿತ್ತು. ಗಂಗಾವತಿಯ ಸರ್ಕಾರಿ ಪದವಿಪೂರ್ವ ಕಾಲೇಜ್‌ನ ಉಪಪ್ರಾಂಶುಪಾಲ ಕೃಷ್ಣಪ್ಪನಿಗೆ ಗಂಗಾಧರ ಅವರನ್ನು ಪರಿಚಯ ಮಾಡಿಸಿದ್ದೇ ಯೋಗರಾಜ್ ಸಿಂಗ್. ಅಮಾಯಕರ ದೌರ್ಬಲ್ಯವನ್ನೇ ತಮ್ಮ ಅಸ್ತ್ರವನ್ನಾಗಿ ಮಾಡಿಕೊಂಡ ಆರೋಪಿಗಳು ಕೊಲೆ ಮಾಡುವ ಸಂಚು ರೂಪಿಸಿ ಅದನ್ನು ಸಾಧಿಸಿ ಬೇರೆಯದೇ ಚಿತ್ರಣ ಸೃಷ್ಟಿಸುವ ಕೆಲಸ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅನುಮಾನಾಸ್ಪದ ಸಾವುಗಳಿಗೆ ಮರುಜೀವ?: ನಗರ, ಸುತ್ತಮುತ್ತ ಹಾಗೂ ಗಡಿ ಜಿಲ್ಲೆಯ ಭಾಗಗಳಲ್ಲಿ ಈಚಿನ ದಿನಗಳಲ್ಲಿ ನಡೆದಿರಬಹುದಾದ ಅನುಮಾನಾಸ್ಪದ ಸಾವು ಪ್ರಕರಣಗಳನ್ನು ಮರು ತನಿಖೆಗೆ ಒಳಪಡಿಸುವ ಸಾಧ್ಯತೆ ಇದ್ದು, ಕುಟುಂಬದ ಸದಸ್ಯರು ನೀಡುವ ದೂರಿಗೂ, ಆರೋಪಿಗಳು ತಪ್ಪೊಪ್ಪಿಕೊಳ್ಳುವ ವೇಳೆ ನೀಡುವ ಹೇಳಿಕೆಗಳಿಗೂ ತಾಳೆ ಆದರೆ ತನಿಖೆ ಆಳಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.