ADVERTISEMENT

ಅನಾಮಧೇಯ ಜೀವ ಬೆದರಿಕೆ ಪತ್ರ: ರಕ್ಷಣೆಗೆ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಮನವಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 11:21 IST
Last Updated 11 ಏಪ್ರಿಲ್ 2022, 11:21 IST
ಅನಾಮಧೇಯ ಜೀವ ಬೆದರಿಕೆ ಪತ್ರ: ರಕ್ಷಣೆಗೆ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಮನವಿ
ಅನಾಮಧೇಯ ಜೀವ ಬೆದರಿಕೆ ಪತ್ರ: ರಕ್ಷಣೆಗೆ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಮನವಿ   

ಹೊಸಪೇಟೆ (ವಿಜಯನಗರ): ‘ಜೀವ ಬೆದರಿಕೆ ಪತ್ರ ಬಂದಿರುವುದರಿಂದ ನನ್ನ ಜೀವಕ್ಕೆ ಅಪಾಯವಿದ್ದು, ಪೊಲೀಸ್‌ ಇಲಾಖೆ ರಕ್ಷಣೆ ನೀಡಬೇಕು’ ಎಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಮನವಿ ಮಾಡಿದ್ದಾರೆ.

ಈ ಸಂಬಂಧ ಅವರು ವಕೀಲ ಪಂಡಿತಾರಾಧ್ಯ ಅವರೊಂದಿಗೆ ಸೋಮವಾರ ನಗರದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಎಸ್ಪಿ, ‘ಜೀವ ಬೆದರಿಕೆಯ ಪತ್ರವನ್ನು ಪರಿಶೀಲಿಸಿದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಭದ್ರತೆಗೆ ಸಂಬಂಧಿಸಿದಂತೆ ಈಗಾಗಲೇ ಕೊಟ್ಟೂರು ಠಾಣೆ ಪೊಲೀಸರಿಗೆ ಸೂಚನೆ ಕೊಡಲಾಗಿದೆ’ ಎಂದು ತಿಳಿಸಿದರು.

‘ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ನಾನು ಹಿಂದೂ ಅಲ್ಲ, ಲಿಂಗಾಯತ ಭಾರತೀಯ ಎಂದು ಹೇಳಿದ್ದೆ. ವಿಚಾರಗಳನ್ನು ವ್ಯಕ್ತಪಡಿಸುವುದು ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ. ಆದರೆ, ಕೆಲವರು ನನಗೆ ದೂರವಾಣಿ ಕರೆ ಮಾಡಿ ಬೆದರಿಕೆಯ ರೂಪದಲ್ಲಿ ಕಟುವಾಗಿ ಮಾತನಾಡಿದ್ದರು. ಏ. 7ರಂದು ಭದ್ರಾವತಿಯಿಂದ ಜೀವ ಬೆದರಿಕೆಯ ಪತ್ರ ಬಂದಿದೆ. ನಾನು ಸೇರಿದಂತೆ 61 ಜನರನ್ನು ಕೊಲ್ಲುವ ಬೆದರಿಕೆ ಒಡ್ಡಿದ್ದಾರೆ. ರಕ್ಷಣೆ ಕೋರಿ ಎಸ್ಪಿಯವರಿಗೆ ಮನವಿ ಪತ್ರ ಸಲ್ಲಿಸಿರುವೆ’ ಎಂದು ಕುಂ. ವೀರಭದ್ರಪ್ಪ ಹೇಳಿದರು.

ADVERTISEMENT

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಸಾಹಿತಿ ಕುಂ. ವೀರಭದ್ರಪ್ಪ ಸೇರಿದಂತೆ 61 ಜನರಿಗೆ ಜೀವ ಬೆದರಿಕೆ ಇರುವ ಅನಾಮಧೇಯ ಪತ್ರ ಏ.7ರಂದು ವೀರಭದ್ರಪ್ಪನವರ ಕೊಟ್ಟೂರಿನಲ್ಲಿರುವ ಮನೆಗೆ ಬಂದಿತ್ತು. ಭದ್ರಾವತಿಯಿಂದ ಪತ್ರ ಪೋಸ್ಟ್‌ ಮಾಡಲಾಗಿತ್ತು. ಆದರೆ, ಪತ್ರ ಬರೆದವರ ವಿವರ ಇರಲಿಲ್ಲ. ‘ಸಹಿಷ್ಣು ಹಿಂದೂ’ ಎಂದಷ್ಟೇ ಪತ್ರದೊಳಗೆ ಉಲ್ಲೇಖಿಸಲಾಗಿತ್ತು.

‘ಕುಂ. ವೀರಭದ್ರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ಹಾಗೂ 61 ಜನ ಎಡಬಿಡಂಗಿ ಬುದ್ಧಿಜೀವಿ ಸಾಹಿತಿಗಳಿಗೇ.. ನೀವು ನಮ್ಮ ದೇಶದ ಅನ್ನ ಉಂಡು, ದೇಶದ ಗಾಳಿ ತೆಗೆದುಕೊಂಡು ದೇಶಕ್ಕೆ ದ್ರೋಹ ಬಗೆಯುತ್ತಿದ್ದೀರಿ. ನಿಮ್ಮ ಸರ್ವನಾಶ ನಿಶ್ಚಿತ. ನಿಮ್ಮೆಲ್ಲರ ಸಾವು ಹತ್ತಿರವಿದೆ. ಅದು ಯಾವ ರೂಪದಲ್ಲಾದರೂ ಬರಬಹುದು. ಅದಕ್ಕೆ ಸಿದ್ಧರಾಗಿ. ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಿ’ ‘ಸಹಿಷ್ಣು ಹಿಂದೂ’ ಎಂದು ಬೆದರಿಕೆ ಒಡ್ಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.