ADVERTISEMENT

ವಿಶ್ವವಿದ್ಯಾಲಯ ಶ್ವೇತ ಪತ್ರ ಹೊರಡಿಸಲಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 11:00 IST
Last Updated 6 ಡಿಸೆಂಬರ್ 2021, 11:00 IST
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸೋಮವಾರ ಬೋಧಕ ಹಾಗೂ ಬೋಧಕೇತರ ನೌಕರರ ಸಂಘದವರು ಸಿಂಡಿಕೇಟ್‌ ಸದಸ್ಯರಿಗೆ ಮನವಿ ಪತ್ರ ಸಲ್ಲಿಸಿದರು
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸೋಮವಾರ ಬೋಧಕ ಹಾಗೂ ಬೋಧಕೇತರ ನೌಕರರ ಸಂಘದವರು ಸಿಂಡಿಕೇಟ್‌ ಸದಸ್ಯರಿಗೆ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ (ವಿಜಯನಗರ): ಆರ್ಥಿಕ ಸ್ಥಿತಿಗತಿ ಕುರಿತು ಶ್ವೇತ ಪತ್ರ ಹೊರಡಿಸುವುದು ಸೇರಿದಂತೆ 12 ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಹಂಪಿ ಕನ್ನಡ ವಿಶ್ವವಿದ್ಯಾಲಯದ ಆಡಳಿತವನ್ನು ಒತ್ತಾಯಿಸುವಂತೆ ಕೋರಿ ಅಧ್ಯಾಪಕರ ಸಂಘ ಹಾಗೂ ಬೋಧಕೇತರ ನೌಕರರ ಸಂಘ ಆಗ್ರಹಿಸಿದೆ.

ಇಲ್ಲಿನ ಕನ್ನಡ ವಿಶ್ವವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಸಿಂಡಿಕೇಟ್‌ ಸಭೆಗೂ ಮುನ್ನ ಎಲ್ಲ ಸದಸ್ಯರನ್ನು ಭೇಟಿ ಮಾಡಿದ ಸಂಘದ ಪ್ರಮುಖರು ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.

ವಿಶ್ವವಿದ್ಯಾಲಯದ ಸಿಬ್ಬಂದಿಗೆ ವಿನಾಕಾರಣ ನೋಟಿಸ್‌ ಕೊಡುವುದು, ಪೊಲೀಸ್‌ ಠಾಣೆಗೆ ದೂರು ಕೊಟ್ಟು ಕಿರುಕುಳ ಕೊಡುವುದನ್ನು ತಡೆಯಬೇಕು. ನೌಕರರಿಂದ ತಪ್ಪಾಗಿದ್ದರೆ ಸಿಂಡಿಕೇಟ್‌ ಸಭೆಯಲ್ಲಿ ಚರ್ಚಿಸಿ, ನಿರ್ಣಯಿಸಬೇಕು. ಸರಿಯಾಗಿ ಕೆಲಸ ನಿರ್ವಹಿಸದ ಕಾನೂನು ಘಟಕ ರದ್ದುಪಡಿಸಬೇಕು. ಸಂಶೋಧನಾ ವಿದ್ಯಾರ್ಥಿಗಳ ಶಿಷ್ಯ ವೇತನ ಬಿಡುಗಡೆಗೊಳಿಸಬೇಕು. ಅವರ ಶುಲ್ಕ ಮರುಪಾವತಿಗೊಳಿಸಬೇಕು. ಅಕಾಲಿಕ ನಿಧನ ಹೊಂದಿದ ನೌಕರರ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಕೊಡಬೇಕು ಎಂದು ಆಗ್ರಹಿಸಿದರು.

ADVERTISEMENT

ಸಹ ಪ್ರಾಧ್ಯಾಪಕ ಎಂ. ಮಲ್ಲಿಕಾರ್ಜುನಗೌಡ ಅವರ ವರ್ಗಾವಣೆ ರದ್ದುಗೊಳಿಸಬೇಕು. ಅವರ ವಿರುದ್ಧದ ಪ್ರಕರಣ ವಾಪಸ್‌ ಪಡೆಯಬೇಕು. 2018ರಲ್ಲಿ ನೇಮಕಗೊಂಡ 13 ಸಿಬ್ಬಂದಿಯ ಪ್ರೊಬೇಷನರಿ ಅವಧಿ ಪೂರ್ಣಗೊಂಡಿದ್ದು, ಅದನ್ನು ಘೋಷಿಸಬೇಕು. ಅರ್ಹರಿಗೆ ಮುಂಬಡ್ತಿ ಕೊಡಬೇಕು. ತಾತ್ಕಾಲಿಕ ಸಿಬ್ಬಂದಿಯ ವೇತನ ಪಾವತಿಸಬೇಕು. ನಿವೃತ್ತ ನೌಕರರ ಉಪಧನ, ಪಿಂಚಣಿ ನೀಡಬೇಕು. ಸಿಬ್ಬಂದಿಗೆ ಸಕಾಲಕ್ಕೆ ವೇತನ ಕೊಡಬೇಕು. ಬೋಧಕ ಹುದ್ದೆಗಳ ನೇಮಕಾತಿ ಅಧಿಸೂಚನೆ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಅಧ್ಯಾಪಕರ ಸಂಘದ ಅಧ್ಯಕ್ಷ ವಾಸುದೇವ ಬಡಿಗೇರ್‌, ಬೋಧಕೇತರ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್‌ ಮಲಪನಗುಡಿ, ಶಿವಾನಂದ, ಡಿ. ಪಾಂಡುರಂಗಬಾಬು, ಅಶೋಕಕುಮಾರ ರಂಜೇರೆ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.