ADVERTISEMENT

ತೆರಿಗೆ ಹೆಚ್ಚಳ; ಆದೇಶ ಹಿಂಪಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 9:24 IST
Last Updated 1 ಜೂನ್ 2021, 9:24 IST
ತೆರಿಗೆ ಹೆಚ್ಚಳ ನಿರ್ಧಾರ ಹಿಂಪಡೆಯಬೇಕೆಂದು ಆಗ್ರಹಿಸಿ ವಿಜಯನಗರ ನಾಗರಿಕ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಮಂಗಳವಾರ ಹೊಸಪೇಟೆಯಲ್ಲಿ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರಿಗೆ ಮನವಿ ಪತ್ರ ಸಲ್ಲಿಸಿದರು
ತೆರಿಗೆ ಹೆಚ್ಚಳ ನಿರ್ಧಾರ ಹಿಂಪಡೆಯಬೇಕೆಂದು ಆಗ್ರಹಿಸಿ ವಿಜಯನಗರ ನಾಗರಿಕ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಮಂಗಳವಾರ ಹೊಸಪೇಟೆಯಲ್ಲಿ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ (ವಿಜಯನಗರ): ಕೋವಿಡ್‌ ಸಂಕಷ್ಟದ ಸಮಯದಲ್ಲಿ ನಗರಸಭೆ ಆಸ್ತಿ ತೆರಿಗೆ ಹೆಚ್ಚಿಸಿರುವ ಕ್ರಮ ಸರಿಯಲ್ಲ. ಕೂಡಲೇ ಆದೇಶ ಹಿಂಪಡೆಯಬೇಕೆಂದು ವಿಜಯನಗರ ನಾಗರಿಕ ವೇದಿಕೆ, ವಿನಾಯಕ ನಗರ ಕ್ಷೇಮಾಭಿವೃದ್ದಿ ಸಂಘ ಹಾಗೂ ಹಿಂದುಳಿದ ವರ್ಗಗಳ ಸಂಘಟನೆಗಳು ಆಗ್ರಹಿಸಿವೆ.

ಈ ಸಂಬಂಧ ಸಂಘಟನೆಗಳ ಮುಖಂಡರು ಮಂಗಳವಾರ ನಗರದಲ್ಲಿ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

‘ಸರ್ಕಾರವು ಯಾವುದೇ ವಿವೇಚನೆ ಇಲ್ಲದೆ ತೆರಿಗೆ ಏರಿಕೆ ಮಾಡಿರುವುದು ಖಂಡನಾರ್ಹ. ಒಂದುವರೆ ವರ್ಷದಿಂದ ಕೋವಿಡ್‌ನಿಂದ ಜನ ಸಂಕಷ್ಟದಲ್ಲಿದ್ದಾರೆ. ದೈನಂದಿನ ಬದುಕು ನಡೆಸುವುದೇ ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತೆರಿಗೆ ಹೆಚ್ಚಿಸಿ, ಜನಸಾಮಾನ್ಯರ ಮೇಲೆ ಬರೆ ಎಳೆದಿರುವುದು ಸರಿಯಲ್ಲ’ ಎಂದು ಟೀಕಿಸಿದ್ದಾರೆ.

ADVERTISEMENT

‘ಸಾರ್ವಜನಿಕರಿಂದ ಅಭಿಪ್ರಾಯ ಪಡೆದುಕೊಳ್ಳದೆ, ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ನೀಡದೆ ಏಕಪಕ್ಷೀಯವಾಗಿ ತೆರಿಗೆ ಹೆಚ್ಚಿಸಿರುವ ಕ್ರಮ ನ್ಯಾಯೋಚಿತವಲ್ಲ. ನಗರಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಇಲ್ಲದೇ ಇರುವಾಗ ತೆರಿಗೆ ಹೆಚ್ಚಿಸುವಂತಿಲ್ಲ. ಆಡಳಿತಾಧಿಕಾರಿಗಳ ನಿಯಂತ್ರಣದಲ್ಲಿದ್ದಾಗ ತೆರಿಗೆ ಹೆಚ್ಚಿಸುವುದು ಜನತಂತ್ರಕ್ಕೆ ವಿರುದ್ಧವಾದ ಕೆಲಸ’ ಎಂದು ಆರೋಪಿಸಿದ್ದಾರೆ.

‘ಲಾಕ್‍ಡೌನ್‌ನಿಂದ ಸಾವಿರಾರು ಜನ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ವ್ಯಾಪಾರ ವಹಿವಾಟು ಇಲ್ಲದಂತಾಗಿದೆ. ಜನಸಂಖ್ಯೆಯ ಶೇಕಡ 70ರಷ್ಟು ಮಧ್ಯಮ ವರ್ಗ ಹಾಗೂ ಅಸಂಘಟಿತ ವಲಯದ ಕಾರ್ಮಿಕರು ನಿರ್ದಿಷ್ಟ ಆದಾಯವಿಲ್ಲದೇ ಅತಂತ್ರರಾಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ತೆರಿಗೆ ಹೆಚ್ಚಿಸಿದ್ದು ಸರಿಯಲ್ಲ. ಕೂಡಲೇ ತನ್ನ ನಿರ್ಧಾರ ಹಿಂಪಡೆಯಬೇಕು’ ಎಂದು ಆಗ್ರಹಿಸಿದ್ದಾರೆ.

ಮುಖಂಡರಾದ ವೈ. ಯಮುನೇಶ, ಯು.ಆಂಜಿನೇಯಲು, ಗೌಳಿ ರುದ್ರಪ್ಪ, ಎಚ್.ತಿಪ್ಪೇಸ್ವಾಮಿ, ಗೌಳಿ ಕುಮಾರ್, ಕಂಪ್ಲಿ ನಾಗರಾಜ, ಸುರೇಶ್, ಬಿ.ವಿರುಪಾಕ್ಷಪ್ಪ, ಕೊಟ್ರಪ್ಪ, ಐ.ಸಿದ್ದಣ್ಣ, ಚಾಂದ್ ಬಾಷಾ, ಕೆ.ವೀರಣ್ಣ, ಶೇಕ್ ಮೆಹಬೂಬ್ ಚಾಂದ್ ಬಾಷಾ, ರಮೇಶ್ ಗೌಡ, ಗೌಳಿ ಯಲ್ಲಪ್ಪ, ಬಸವರಾಜ, ಈಶಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.