ವಿಮುಕ್ತ ದೇವದಾಸಿ ಮಹಿಳಾ ಮತ್ತು ಮಕ್ಕಳ ವೇದಿಕೆ- ಕರ್ನಾಟಕ, ಸಖಿ ಸಂಸ್ಥೆ ಹೊಸಪೇಟೆ ಇವರ ಸಹಯೋಗದಲ್ಲಿ ಸಭೆ ನಡೆಸಲಾಯಿತು
ಹೊಸಪೇಟೆ (ವಿಜಯನಗರ): ಮಾಜಿ ದೇವದಾಸಿ ತಾಯಂದಿರ ಮರುಸಮೀಕ್ಷೆ ರಾಜ್ಯದಲ್ಲಿ ನಡೆಯುತ್ತಿದ್ದು, ಅ.24ರಂದು ಮುಗಿಸುವ ಗಡುವ ನೀಡಲಾಗಿದೆ. ಆದರೆ, ಕೆಲವು ಜಿಲ್ಲೆಗಳಲ್ಲಿ ಜಿಲ್ಲಾ ಸಮಿತಿಗಳನ್ನೇ ರಚಿಸಿಲ್ಲ, ದಾಖಲಾತಿಗಳೂ ಸರಿಯಾಗಿ ಸಿಗುತ್ತಿಲ್ಲ. ಹೀಗಾಗಿ ಸಮೀಕ್ಷೆ ಅವಧಿಯನ್ನು ಡಿಸೆಂಬರ್‌ವರೆಗೆ ವಿಸ್ತರಿಸಬೇಕು ಎಂದು ಭಾನುವಾರ ಇಲ್ಲಿ ನಡೆದ ರಾಜ್ಯಮಟ್ಟದ ಸಮಾಲೋಚನಾ ಸಭೆಯಲ್ಲಿ ಒತ್ತಾಯಿಸಲಾಗಿದೆ.
ವಿಮುಕ್ತ ದೇವದಾಸಿ ಮಹಿಳಾ ಮತ್ತು ಮಕ್ಕಳ ವೇದಿಕೆ- ಕರ್ನಾಟಕ, ಸಖಿ ಸಂಸ್ಥೆ ಹೊಸಪೇಟೆ ಇವರ ಸಹಯೋಗದಲ್ಲಿ ಭಾನುವಾರ ಇಲ್ಲಿನ ಭಾವೈಕ್ಯತಾ ವೇದಿಕೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ 15 ಜಿಲ್ಲೆಗಳ ದೇವದಾಸಿ ತಾಯಂದಿರು, ಅವರ ಮಕ್ಕಳು ಹಾಗೂ ಸಮುದಾಯದೊಂದಿಗೆ ಕೆಲಸ ಮಾಡುತ್ತಿರುವ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ತಮ್ಮ ಜಿಲ್ಲೆಗಳಲ್ಲಿ ಎದುರಾಗಿರುವ ಸಮಸ್ಯೆಗಳನ್ನು ವಿವರಿಸಿದ ಪ್ರತಿನಿಧಿಗಳು ಕೊನೆಯಲ್ಲಿ ಒಮ್ಮತದ ನಿರ್ಣಯ ಕೈಗೊಂಡರು.
ಸಮೀಕ್ಷೆ ವೇಳೆ ಕೇಳುತ್ತಿರುವ ದಾಖಲೆಗಳ ವಿಚಾರದಲ್ಲಿ ಏಕರೂಪತೆ ಇಲ್ಲ, ನೆಟ್ವರ್ಕ್ ಸಮಸ್ಯೆಯಿಂದ ಸಮೀಕ್ಷೆ ವಿಳಂಬವಾಗಿದೆ. ಕೆಲವು ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಸಮಿತಿಗೆ ಈ ಸಮೀಕ್ಷೆಯ ಬಗ್ಗೆ ಯಾವುದೇ ಮಾಹಿತಿ ತಲುಪಿಲ್ಲ ಮತ್ತು ಸಮೀಕ್ಷೆಯ ಬಗ್ಗೆ ಸಭೆಯನ್ನು ಕೂಡಾ ಮಾಡಿಲ್ಲ. ಸಮೀಕ್ಷೆ ನಡೆಸುವವರಿಗೆ ಸಮಗ್ರ ತರಬೇತಿ ನೀಡಿ ಸಮೀಕ್ಷೆಯನ್ನು ಮುರಿದುವರಿಸಬೇಕಾದ ಅಗತ್ಯ ಇದೆ. ಹೀಗಾಗಿ ಗಡುವನ್ನು ವಿಸ್ತರಿಸಿ ಎಲ್ಲ ದೇವದಾಸಿ ಕುಟುಂಬಗಳ ಸಮೀಕ್ಷೆ ಸಮಗ್ರವಾಗಿ ಆಗುವಂತೆ ನೋಡಿಕೊಳ್ಳಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಗಿದೆ.
ಮರುಸಮೀಕ್ಷೆಯಲ್ಲಿ 45 ವರ್ಷ ಪೂರೈಸಿದವರನ್ನು ಮಾತ್ರ ಪರಿಗಣಿಸುತ್ತೇವೆ ಎನ್ನುವ ನಿರ್ಧಾರ ಕೈಬಿಟ್ಟು ವಯಸ್ಸಿನ ಮಿತಿಯನ್ನು ನಿಗದಿಗೊಳಿಸದೆ ಎಲ್ಲ ದೇವದಾಸಿ ಮಹಿಳೆಯರನ್ನೂ ಸಮೀಕ್ಷೆಯಲ್ಲಿ ಪರಿಗಣಿಸಬೇಕು ಎಂದು ಸಹ ಒತ್ತಾಯಿಸಲಾಯಿತು.
ಸಭೆಯಲ್ಲಿ ಬೆಂಗಳೂರು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಪ್ರೊ.ಆರ್.ವಿ.ಚಂದ್ರಶೇಖರ, ಸಖಿ ಟ್ರಸ್ಟ್‌ನ ಸಂಸ್ಥಾಪಕಿ ಭಾಗ್ಯಲಕ್ಷ್ಮಿ, ಕೊಪ್ಪಳದ ರಾಜ್ಯ ಸಂಚಾಲಕ ಯಮನೂರಪ್ಪ, ವಿಮುಕ್ತ ದೇವದಾಸಿ ಮಹಿಳೆಯರ ಮತ್ತು ಮಕ್ಕಳ ವೇದಿಕೆ ಕರ್ನಾಟಕದ ಸಂಚಾಲಕರಾದ ಶರೀಫ ಬಿಳೆಯಲಿ, ಮಂಜುಳಾ ಮಾಳ್ಗಿ, ದೇವದಾಸಿ ಮಹಿಳೆಯರ ಕ್ಷೇಮಾಭಿವೃದ್ಧಿ ಸಂಘದ ರೇಣುಕಾ ಕೊಟ್ಟೂರು, ಸ್ನೇಹ ಸಂಸ್ಥೆಯ ಚಿನ್ನಪುರದಮ್ಮ, ಬಾಗಲಕೋಟೆಯ ಪ್ರಕಾಶ, ಹಾವೇರಿಯ ನಾಗರಾಜ, ವಿಜಯಪುರದ ಸಿದ್ದು, ಕಲಬುರ್ಗಿಯರ ಪರಶುರಾಮ, ಕೊಪ್ಪಳದ ರೇಣುಕಾ, ರಾಯಚೂರಿನ ಬಸವರಾಜ ರಾಯಚೂರು ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.