ಸಾಂದರ್ಭಿಕ ಚಿತ್ರ
ಹೊಸಪೇಟೆ (ವಿಜಯನಗರ): ಬಳ್ಳಾರಿಯಿಂದ ಪ್ರತ್ಯೇಕಗೊಂಡು ವಿಜಯನಗರ ಜಿಲ್ಲೆ ರಚನೆಯಾಗಿ ಮೂರು ವರ್ಷ ಕಳೆದಿದ್ದು, ಜಿಲ್ಲಾ ರಂಗಮಂದಿರ ಇನ್ನೂ ನಿರ್ಮಾಣವಾಗಿಲ್ಲ. ಅದಕ್ಕಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ (ಕೆಕೆಆರ್‌ಡಿಬಿ) ಬಂದ ₹2 ಲೋಕೋಪಯೋಗಿ ಇಲಾಖೆಯಲ್ಲೇ ಉಳಿದಿದ್ದು, ಹೆಚ್ಚುವರಿ ಅನುದಾನದ ಬೇಡಿಕೆ ಈಡೇರಿಕೆಗಾಗಿ ಜಿಲ್ಲೆ ಕಾಯುತ್ತಿದೆ.
ಹಿಂದಿನ ಪ್ರಸ್ತಾಪದಂತೆ ಕೇವಲ 400 ಆಸನ ಸಾಮರ್ಥ್ಯದ ರಂಗಮಂದಿರ ನಿರ್ಮಿಸುವುದು, ಅದಕ್ಕೆ ₹2 ಕೋಟಿ ವೆಚ್ಚ ತಗುಲುತ್ತದೆ ಎಂದು ತಿಳಿಸಲಾಗಿತ್ತು. ಜಿಲ್ಲಾ ಕೇಂದ್ರ ಎಂದ ಮೇಲೆ ಕನಿಷ್ಠ 1,000 ಆಸನಗಳ ರಂಗಮಂದಿರ ಬೇಕೇ ಬೇಕು ಎಂದು ಶಾಸಕ ಎಚ್.ಆರ್.ಗವಿಯಪ್ಪ ಅವರು ಪಟ್ಟು ಹಿಡಿದು, ಇನ್ನೂ ₹6 ಕೋಟಿ ಅನುದಾನ ಕೊಡಿಸಬೇಕು ಎಂದು ಕೆಕೆಆರ್‌ಡಿಬಿಗೆ ಪತ್ರ ಬರೆದಿದ್ದಾರೆ. ಆ ಪತ್ರಕ್ಕೆ ಇದುವರೆಗೆ ಉತ್ತರ ಬಂದಿಲ್ಲ. ಹೀಗಾಗಿ ಇಡೀ ಯೋಜನೆಯೇ ಬಾಕಿ ಉಳಿಯುವಂತಾಗಿದೆ.
ನಗರದಲ್ಲಿ ಸದ್ಯ ರಂಗ ಚಟುವಟಿಕೆಗಳಿಗೆ ವೇದಿಕೆಯೇ ಇಲ್ಲದ ಸ್ಥಿತಿ ಇದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರಸಭೆಯ ಆವರಣದಲ್ಲಿ ಸುಮಾರು ₹2 ಕೋಟಿ ವೆಚ್ಚದಲ್ಲಿ ನಿರ್ಮಿಸಿಕೊಟ್ಟಿದ್ದ ಎಂ.ಪಿ.ಪ್ರಕಾಶ್ ರಂಗಮಂದಿರ ಉಪಯೋಗಕ್ಕೇ ಬಂದಿಲ್ಲ. ಮಳೆಗಾಲ ಅದರ ಸ್ಟೇಜ್‌ತನಕವೂ ನೀರು ನಿಲ್ಲುವ ಪರಿಸ್ಥಿತಿ ಇದ್ದು, ಇಡೀ ರಂಗಮಂದಿರದ ಉದ್ದೇಶವೇ ವ್ಯರ್ಥವಾಗಿದೆ. ಹೀಗಾಗಿ ಸದ್ಯ ಪ್ರಮುಖ ಕಾರ್ಯಕ್ರಮಗಳನ್ನು ಜಿಲ್ಲಾ ಕ್ರೀಡಾಂಗಣ ಸಮೀಪದ ಒಳಾಂಗಣ ಕ್ರೀಡಾಂಗಣ ಸಭಾಭವನದದಲ್ಲೇ ನಡೆಸುವ ಸ್ಥಿತಿ ಇದೆ. ಇದೆಲ್ಲ ಕಾರಣಕ್ಕೆ ಜಿಲ್ಲಾ ರಂಗಮಂದಿರ ತುರ್ತಾಗಿ ನಿರ್ಮಾಣವಾಗಬೇಕು ಎಂಬ ಜನರು, ಕಲಾವಿದರು, ರಂಗಾಸಕ್ತರ ಬೇಡಿಕೆಗೆ ಬೇಗ ಸ್ಪಂದನೆ ಸಿಕ್ಕುವ ದಾರಿ ಕಾಣುತ್ತಿಲ್ಲ.
ದುಡ್ಡು ಹೋಗಿಲ್ಲ: ‘ಕೆಕೆಆರ್‌ಡಿಬಿಯಿಂದ ಬಂದ ₹2 ಕೋಟಿ ನಮ್ಮ ಇಲಾಖೆಯ ಬಳಿಯಲ್ಲೇ ಇದೆ, ಶಾಸಕರು ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಈಗ 400 ಆಸನದ ಚಿಕ್ಕ ರಂಗಮಂದಿರ ನಿರ್ಮಿಸಿ, ಬಳಿಕ ಅದನ್ನು ಒಡೆದು ದೊಡ್ಡ ರಂಗಮಂದಿರ ನಿರ್ಮಿಸುವುದು ಬೇಡ ಎಂಬುದು ಅವರ ನಿಲುವು. ಈಗಾಗಲೇ ನೂತನ ಪೊಲೀಸ್ ಪರೇಡ್ ಮೈದಾನದ ಬಳಿಯ 1.5 ಎಕರೆ ನಿವೇಶನವನ್ನು ರಂಗಮಂದಿರಕ್ಕಾಗಿ ಗುರುತಿಸಲಾಗಿದೆ. ₹8 ಕೋಟಿಯ ಬೇಡಿಕೆಗೆ ಅನುಮತಿ ದೊರೆತ ತಕ್ಷಣ ಕೆಲಸ ಆರಂಭವಾಗಲಿದೆ’ ಎಂದು ಪಿಡಬ್ಲ್ಯುಡಿ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಡಿ.ಸಿ ಆಶಯ: ‘ನೂತನ ಜಿಲ್ಲೆಗೆ ಸುಸಜ್ಜಿತ ರಂಗಮಂದಿರ ಬೇಕೇ ಬೇಕು. ಅದಕ್ಕಾಗಿ ಜಿಲ್ಲಾಡಳಿತದಿಂದ ನಿರಂತರ ಪ್ರಯತ್ನ ಸಾಗಿದೆ. ಶೀಘ್ರ ಶುಭ ಸುದ್ದಿ ಸಿಗುವ ಆಶಯದಲ್ಲಿದ್ದೇವೆ’ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದರು.
ಕೆಕೆಆರ್‌ಡಿಬಿಗೆ ಶಾಸಕರಿಂದ ಪತ್ರ, ಸಿಕ್ಕಿಲ್ಲ ಸ್ಪಂದನೆ ಪರೇಡ್ ಮೈದಾನ ಬಳಿ 1.5 ಎಕರೆ ಸ್ಥಳ ಗುರುತು ಇನ್ನೂ ವರ್ಷಗಳ ಕಾಲ ಕಾಯುವಿಕೆ ಅನಿವಾರ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.