ADVERTISEMENT

ದೀಪಾವಳಿ | ‘ಮೇರಾ’: ಅಂಧಕಾರ ದೂರ

ರಾಮಚಂದ್ರ ನಾಗತಿಕಟ್ಟೆ
Published 31 ಅಕ್ಟೋಬರ್ 2024, 7:59 IST
Last Updated 31 ಅಕ್ಟೋಬರ್ 2024, 7:59 IST
ಅರಸೀಕೆರೆ ಹೋಬಳಿಯ ಬೇವಿನಹಳ್ಳಿ ಸಣ್ಣ ತಾಂಡದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಸಾಂಪ್ರದಾಯಿಕ ಉಡುಗೆ ತೊಟ್ಟು ಹೂ ತರಲು ಸಜ್ಜಾಗಿರುವ ಯುವತಿಯರು (ಸಂಗ್ರಹ ಚಿತ್ರ)
ಅರಸೀಕೆರೆ ಹೋಬಳಿಯ ಬೇವಿನಹಳ್ಳಿ ಸಣ್ಣ ತಾಂಡದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಸಾಂಪ್ರದಾಯಿಕ ಉಡುಗೆ ತೊಟ್ಟು ಹೂ ತರಲು ಸಜ್ಜಾಗಿರುವ ಯುವತಿಯರು (ಸಂಗ್ರಹ ಚಿತ್ರ)   

ಅರಸೀಕೆರೆ: ಬುಡಕಟ್ಟು ಜನಾಂಗವಾದ ಲಂಬಾಣಿ ಸಮುದಾಯಕ್ಕೆ ದೀಪಾವಳಿ ಕೇವಲ ಪಟಾಕಿ, ಬಾಣ, ಬಿರುಸುಗಳ ಸದ್ದಷ್ಟೇ ಅಲ್ಲ, ಅದರಾಚೆಗಿನ ಅವರ ಸಾಂಪ್ರದಾಯಿಕ ಆಚರಣೆಯಿಂದ ವಿಶೇಷ ಮಹತ್ವ ಪಡೆದುಕೊಂಡಿದೆ.

ಪಂಚಭೂತಗಳನ್ನು ಆರಾಧಿಸುವ, ಪ್ರಕೃತಿಗೆ ಪೂಜೆ ಸಲ್ಲಿಸುವ ಹಬ್ಬ ದೀಪಾವಳಿಯಾಗಿದ್ದು, ಬಂಜಾರರು ‘ಮೇರಾ’ ಮಾಡುವ ಹಿರಿಯರಿಗೆ ಪೂಜಿಸುವ, ವಾರ್ಷಿಕ ಲೆಕ್ಕ ಒಪ್ಪಿಸುವ, ಮದುವೆಗಳ ನಿಶ್ಚಯ ಮಾಡುವ ಆಚರಣೆ ನಡೆಸಿಕೊಂಡುಬಂದಿದ್ದಾರೆ.

ಬಂಜಾರ ಸಮಾಜದ ಬೆಡಗಿಯರು ತಾಂಡಾದ ಪ್ರತಿ ಮನೆಗೆ ತೆರಳಿ ದೀಪ ಬೆಳಗಿ, ಕಷ್ಟದ ಕತ್ತಲು ದೂರವಾಗಿ, ಸುಖ, ಶಾಂತಿ, ನೆಮ್ಮದಿಯಿಂದ ಬಾಳುವಂತಾಗಲಿ ಎಂದು ಪ್ರಾರ್ಥಿಸುವ ಮಹತ್ವವನ್ನು ಲಂಬಾಣಿಗರ ದೀಪಾವಳಿ ಹೊಂದಿದೆ.

ADVERTISEMENT

ದೀಪಾವಳಿಯನ್ನು ತಾಂಡಾಗಳಲ್ಲಿ ‘ಯುವತಿಯರ ಹಬ್ಬ’ ಎಂದೇ ಕರೆಯುತ್ತಾರೆ. ಅಮಾವಾಸ್ಯೆಯಂದು ಕಾಳಿಮಾಸ್, ನಂತರದ ದಿನದಂದು ಧಪ್ಕಾರ್ ಆಗಿ ಎರಡು ದಿನ ಹಬ್ಬವನ್ನು ಧಾರ್ಮಿಕ ಕಟ್ಟುಪಾಡುಗಳೊಂದಿಗೆ ಆಚರಿಸಲಾಗುತ್ತದೆ.

ಯುವತಿಯರು ಹಟ್ಟಿ ನಾಯಕರ ಮನೆ ಬಳಿ ಸೇರಿ ಲಂಬಾಣಿ ಭಾಷೆಯಲ್ಲಿ ಹಾಡು ಹೇಳುತ್ತಾ ಕುಣಿದು ಸಂಭ್ರಮಿಸುತ್ತಾರೆ. ಸಂಜೆ ವೇಳೆ ಹಟ್ಟಿ ಗೌಡರ ಪತ್ನಿ ಹಾಗೂ ತಾಂಡಾದ ಹಿರಿಯ ಮಹಿಳೆಯರು ಸೇರಿ ಹೂವುಗಳನ್ನು ತರಲು ಕಾಡಿಗೆ ತೆರಳುವ ಯುವತಿಯರನ್ನು ಬೀಳ್ಕೊಡುತ್ತಾರೆ.

ಕಾಡಿನಲ್ಲಿ ಸಿಗುವ ಕಣಗಲು (ವಲ್ಯಾಣ) ಹೂಗಳನ್ನು ಪುಟ್ಟಿಯಲ್ಲಿಟ್ಟುಕೊಂಡು (ಬುಟ್ಟಿ) ಯುವತಿಯರು ಸಾಂಪ್ರದಾಯಿಕ ನೃತ್ಯ ಮಾಡುತ್ತಾರೆ. ಮನೆಯಿಂದ ತೆಗೆದುಕೊಂಡು ಹೋಗಿರುವ ಹಣ್ಣು, ಸಿಹಿ ತಿನಿಸುಗಳನ್ನು ಪರಸ್ಪರ ಹಂಚಿ ತಿನ್ನುತ್ತಾರೆ. ಶಾಲು (ಛಾಟ್ಯಾ) ಹೊದ್ದು ಹಿಂತಿರುಗಿ ಬರುವ ಯುವತಿಯರಿಗೆ, ಹಟ್ಟಿ ಗೌಡರು ತಾಂಡಾದ ಗಡಿ ಬಳಿ ಸ್ವಾಗತಿಸುತ್ತಾರೆ.

ಹೂವಿನ ಪುಟ್ಟಿಗಳನ್ನು ಹೊತ್ತ ಯುವತಿಯರ ಗುಂಪು ತಾಂಡಾದ ಪ್ರತಿ ಮನೆಗೂ ತೆರಳಿಸೆಗಣಿಯ ಗುರ್ಚಿಯಲ್ಲಿ ಹೂಗಳನ್ನು ಇಟ್ಟು ಬರುತ್ತದೆ.

ಹೆಣ್ಣಿಗೆ ಪೂಜ್ಯ ಸ್ಥಾನ

ಬಂಜಾರ ಜನಾಂಗದ ದೀಪಾವಳಿಯಲ್ಲಿ ಮೇರಾ ಮಾಡುವುದು (ದೀಪ ಬೆಳಗುವುದು) ವಿಶೇಷ ಸ್ಥಾನ ಪಡೆಯುತ್ತದೆ. ಕಾರಣ ಹೆಣ್ಣನ್ನು ಮನೆಯ ದೀಪ ಎಂಬ ಪೂಜ್ಯ ಭಾವದಿಂದ ನೋಡಲಾಗುತ್ತದೆ. ಅದಕ್ಕಾಗಿ ಯುವತಿಯರು ಅಮಾವಾಸ್ಯೆ ರಾತ್ರಿ ದೀಪ ಹಿಡಿದು ತಂದೆಗೆ ‘ಬಾಪೂ ತೋನ ಮೇರಾ’ ತಾಯಿಗೆ ‘ಯಾಡಿ ತೋನ ಮೇರಾ’ ಅಣ್ಣನಿಗೆ ‘ಭೀಯಾ ತೋನ ಮೇರಾ’ ಅತ್ತೆಗೆ ‘ಫೂಫಿ ತೋನ ಮೇರಾ’ ಹೀಗೆ ಮನೆಯ ಪ್ರತಿಯೊಬ್ಬರಿಗೂ ಹಾಗೂ ಹಿತೈಷಿಗಳ ಮನೆಯ ಸದಸ್ಯರಿಗೂ ಮೇರಾ ಮಾಡುತ್ತಾರೆ. ಇದರಿಂದ ಆ ಮನೆಯಲ್ಲಿನ ಅಂಧಕಾರ ದುಷ್ಟಶಕ್ತಿಗಳು ತೊಲಗಿ ಸಮೃದ್ಧಿಯ ಬೆಳಕು ಮೂಡುತ್ತದೆ ಎನ್ನುವ ನಂಬಿಕೆ ಬಂಜಾರ ಸಮುದಾಯದಲ್ಲಿದೆ.

ಸಾಂಪ್ರದಾಯಿಕ ಗಾಯನ

‘ಅಮಾವಾಸ್ಯೆ ದಿನ ಸಂಜೆ ಮನೆಗೊಬ್ಬ ಯುವತಿಯರು ದೀಪ ಹಿಡಿದುಕೊಂಡು ಗ್ರಾಮದ ದೇವಾಲಯ ಬಳಿಯಿಟ್ಟು ಸಾಮೂಹಿಕ ಪೂಜೆ ಸಲ್ಲಿಸುತ್ತಾರೆ. ಪ್ರತಿ ಮನೆಗೆ ತೆರಳಿ ಮನೆ ಮಂದಿ ಹೆಸರು ಸೇರಿಸಿ ಹಾಡು ಹೇಳುವ ಮೂಲಕ ಹಬ್ಬದ ಶುಭಾಶಯ ಕೋರುತ್ತಾರೆ' ಎಂದು ನಾಗತಿತಾಂಡದ ಶಶಿ ನಾಯ್ಕ ಹಬ್ಬದ ಕುರಿತು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.