ADVERTISEMENT

ಬೆದರಿಕೆಗೆ ಹೆದರುವುದಿಲ್ಲ–ಡಿಎಸ್‌ಎಸ್‌ ಸಂಚಾಲಕ ಮಾವಳ್ಳಿ ಶಂಕರ್‌

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 13:48 IST
Last Updated 9 ಏಪ್ರಿಲ್ 2022, 13:48 IST
ಸುದ್ದಿಗೋಷ್ಠಿ
ಸುದ್ದಿಗೋಷ್ಠಿ   

ಹೊಸಪೇಟೆ (ವಿಜಯನಗರ): ‘ನೈತಿಕವಾಗಿ ಬದುಕಲಾರದವರು ಹೇಡಿಗಳಂತೆ ಬೆದರಿಕೆ ಪತ್ರ ಬರೆಯುತ್ತಾರೆ. ನೈತಿಕವಾಗಿ ಸರಿಯಿದ್ದವರು ನೇರ ಮಾತುಕತೆಗೆ ಬರುತ್ತಾರೆ. ಏನೇ ಇರಲಿ ಇಂತಹ ಬೆದರಿಕೆಗೆ ಹೆದರುವುದಿಲ್ಲ. ಇವುಗಳನ್ನು ಬಹಳ ನೋಡಿರುವೆ’ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್‌ ಹೇಳಿದರು.

‘ಸರ್ಕಾರಕ್ಕೆ ಬರೆದ ಪತ್ರದಲ್ಲಿ 61 ಜನರೊಂದಿಗೆ ನಾನು ಕೂಡ ಸಹಿ ಹಾಕಿರುವೆ. ಸಾಹಿತಿ ಕುಂ. ವೀರಭದ್ರಪ್ಪ ಯಾವುದೇ ತಪ್ಪು ಹೇಳಿಕೆ ಕೊಟ್ಟಿಲ್ಲ. ‘ನಾನೊಬ್ಬ ಲಿಂಗಾಯತ, ಹಿಂದೂ ಅಲ್ಲ’ ಎಂದಿದ್ದಾರೆ. ಅದು ಅವರ ಸ್ವಾತಂತ್ರ್ಯ. ಅದಕ್ಕಾಗಿ ಬೆದರಿಕೆ ಹಾಕುವುದು ಎಷ್ಟರಮಟ್ಟಿಗೆ ಸರಿ?’ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಸಮಾಜದಲ್ಲಿ ಅಶಾಂತಿ ಇರಬಾರದು. ಸಂತರು, ಸೂಫಿಗಳು ಕಟ್ಟಿರುವ ನಾಡಿದು. ಒಂದು ಮತದ ಓಟುಗಳನ್ನು ಭದ್ರಪಡಿಸಿಕೊಳ್ಳಲು ದ್ವೇಷ ಸೃಷ್ಟಿಸುತ್ತಿರುವುದು ಸರಿಯಲ್ಲ. ದೇಶದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿವೆ. ಅವುಗಳಿಗೆ ಪರಿಹಾರ ಸಿಗಬೇಕಿದೆ’ ಎಂದರು.

ADVERTISEMENT

14ರಂದು ಕಪ್ಪು ಬಾವುಟ ಪ್ರದರ್ಶನ

ರಾಜ್ಯ ಸರ್ಕಾರದ ಪರಿಶಿಷ್ಟ ವಿರೋಧಿ ನೀತಿ ಖಂಡಿಸಿ ಏ. 14ರಂದು ಬೆಂಗಳೂರಿನ ವಿಧಾನಸೌಧದ ಎದುರು ಹಾಗೂ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ರಾಯಚೂರಿನಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ.ಅಂಬೇಡ್ಕರ್‌ ಅವರ ಭಾವಚಿತ್ರ ತೆಗೆಸಿದ ನ್ಯಾಯಾಧೀಶರ ವಿರುದ್ಧ ಇದುವರೆಗೆ ಸರ್ಕಾರ ಕ್ರಮ ಕೈಗೊಂಡಿಲ್ಲ. ನೆಪಮಾತ್ರಕ್ಕೆ ವರ್ಗಾವಣೆ ಮಾಡಿದೆ. ಎಲ್ಲ ಅಧೀನ ನ್ಯಾಯಾಲಯಗಳಲ್ಲಿ ಅಂಬೇಡ್ಕರ್‌ ಅವರ ಭಾವಚಿತ್ರ ಹಾಕಿಸಿಲ್ಲ. ಈ ಕುರಿತು ಸಿ.ಎಂ. ಕನಿಷ್ಠ ಸಭೆಯೂ ನಡೆಸಿಲ್ಲ. ಎಸ್‌ಸಿಪಿ/ಟಿಎಸ್‌ಪಿ ಹಣ ಬೇರೆ ಉದ್ದೇಶಕ್ಕೆ ಬಳಸಲಾಗುತ್ತಿದೆ. ಗೋಮಾಳ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ಪರಿಶಿಷ್ಟರಿಗೆ ಪಟ್ಟಾ ಕೊಟ್ಟಿಲ್ಲ. ಈ ಎಲ್ಲ ವಿಚಾರಗಳನ್ನು ಇಟ್ಟುಕೊಂಡು ಪ್ರತಿಭಟನೆಗೆ ತೀರ್ಮಾನಿಸಲಾಗಿದೆ ಎಂದರು.

ಪರಿಶಿಷ್ಟ ಪಂಗಡದವರ ಮೀಸಲಾತಿಯನ್ನು ಶೇ 3ರಿಂದ ಶೇ 7.5ಕ್ಕೆ ಹೆಚ್ಚಿಸುವಂತೆ ಬೆಂಗಳೂರಿನಲ್ಲಿ ಹರಿಹರದ ಮಹರ್ಷಿ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ನಡೆಸುತ್ತಿರುವ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.
ಮುಖಂಡರಾದ ಎಚ್‌. ಹುಸೇನಪ್ಪ, ಉದಯಕುಮಾರ್‌, ರಾಮಾಲಿ, ದುರುಗಪ್ಪ ತಳವಾರ, ಎ.ಕೆ. ಗಂಗಾಧರ್‌, ರಾಮಣ್ಣ, ಸಾಬಣ್ಣ ಬಡಿಗೇರ್‌, ಹುಲುಗಣ್ಣ, ಸಣ್ಣ ವೀರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.