ADVERTISEMENT

ಯೋಜನೆಗಳ ಪರಿಣಾಮಕಾರಿ ಅನುಷ್ಠಾನ: ರಾಷ್ಟ್ರೀಯ ಮೇಲ್ವಿಚಾರಣಾ ತಂಡಕ್ಕೆ ತೃಪ್ತಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 6:14 IST
Last Updated 21 ಸೆಪ್ಟೆಂಬರ್ 2025, 6:14 IST
ವಿಜಯನಗರ ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶಗಳಿಗೆ ಕೇಂದ್ರದ ತಂಡದ ಸದಸ್ಯರು ಭೇಟಿ ನೀಡಿದರು
ವಿಜಯನಗರ ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶಗಳಿಗೆ ಕೇಂದ್ರದ ತಂಡದ ಸದಸ್ಯರು ಭೇಟಿ ನೀಡಿದರು   

ಹೊಸಪೇಟೆ (ವಿಜಯನಗರ): ಗ್ರಾಮೀಣಾಭಿವೃದ್ಧಿ ಸಚಿವಾಲಯದ ವಿವಿಧ ಯೋಜನೆಗಳಾದ ನರೇಗಾ, ಎನ್‌ಆರ್‌ಎಲ್‌ಎಂ, ಪಿಎಂಜಿಎಸ್‌ವೈ, ಪಿಎಂಎವೈ, ಎನ್‌ಎಸ್ಇಪಿ ಯೋಜನೆಗಳ ಪರಿಣಾಮಕಾರಿ ಜಾರಿ ಕುರಿತಂತೆ ಪರಿಶೀಲನೆ ನಡೆಸಿದ ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ತಂಡ ತೃಪ್ತಿ ವ್ಯಕ್ತಪಡಿಸಿದೆ.

ಭಾರತೀಯ ಅಂಕಿಸಂಖ್ಯೆ ಸೇವಾ ಅಧಿಕಾರಿ (ಐಎಸ್‌ಎಸ್‌) ರೀನಾ ನಗರ್‌ ಮತ್ತು ಅವನಿಶ್ ಕುಮಾರ್ ಅವರಿದ್ದ ತಂಡ ಸೆ.15ರಿಂದ 19ರ ವರೆಗೆ ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಹೊಸಪೇಟೆ ತಾಲ್ಲೂಕಿನ ಮಲಪನಗುಡಿ, ಹಂಪಿ, ಬುಕ್ಕಸಾಗರ ಹಾಗೂ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ವಲ್ಲಭಾಪುರ, ಬ್ಯಾಸಿಗಿದೇರಿ ಮತ್ತು ಗದ್ದಿಕೇರಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಜಿಲ್ಲೆಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್‌ಆರ್‌ಎಲ್‌ಎಂ) ಯೋಜನೆಯಡಿ ಮಹಿಳೆಯರ ಸಬಲೀಕರಣಕ್ಕೆ ಕೈಗೊಂಡಿರುವ ಕ್ರಮಗಳನ್ನು, ಇತರ ಯೋಜನೆಗಳ ಕಾಮಗಾರಿ, ಫಲಾನುಭವಿಗಳ ಆಯ್ಕೆ ಗಮನಿಸಿದರು. ಕೇಂದ್ರ ಪುರಸ್ಕೃತ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಭೇಟಿ ಮಾಡಿದ್ದಲ್ಲದೇ, ಅವರೊಂದಿಗೆ ಸಂವಾದ ನಡೆಸಿದರು.

ADVERTISEMENT

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ಜನರಿಗೆ, ಸ್ವ-ಉದ್ಯೋಗ ಸೃಜನೆ,  ವಸತಿ, ಸಿಐಎಫ್‌ ಸಾಲ, ಎಸ್‌ಬಿಎಂಜಿ ಯೋಜನೆಯಡಿ ವೈಯಕ್ತಿಕ ಹಾಗೂ ಸಮುದಾಯ ಆಧಾರಿತ ಶೌಚಾಲಯ ನಿರ್ಮಾಣ ಕುರಿತು ಪರಿಶೀಲನೆ ನಡೆಸಿದ ಅಧಿಕಾರಿಗಳು, ಸಂತಸ ವ್ಯಕ್ತಪಡಿಸಿದರು. ಇದೇ ರೀತಿ ಮುಂದಿನ ದಿನಗಳಲ್ಲಿ ನಿರಂತರ ಪ್ರಗತಿಯನ್ನು ಕಾಯ್ದುಕೊಳ್ಳವಂತೆ ಸಲಹೆ ನೀಡಿದರು.

ಕೂಸಿನ ಮನೆ ಕೇಂದ್ರಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸಿಇಒ ನೊಂಗ್ಜಾಯ್‌ ಮೊಹಮದ್‌ ಅಲಿ ಅಕ್ರಂ ಷಾ, ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು.,

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ತಿಮ್ಮಪ್ಪ ಕೆ., ಸಹಾಯಕ ಯೋಜನಾ ಅಧಿಕಾರಿ ಎಂ.ಉಮೇಶ, ಇಒಗಳು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.