ADVERTISEMENT

ವಿಜಯನಗರ: ಮೈಲಾರ ಶುಗರ್ಸ್‌ ಬಂದ್ ಮಾಡಿಸಿ ರೈತರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 12:59 IST
Last Updated 7 ನವೆಂಬರ್ 2025, 12:59 IST
   

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ಕಬ್ಬಿಗೆ ಟನ್‌ಗೆ ₹3,500 ದರ ನಿಗದಿಪಡಿಸಲು ಆಗ್ರಹಿಸಿ ಶುಕ್ರವಾರ ರೈತರು ತಾಲ್ಲೂಕಿನ ಬೀರಬ್ಬಿಯ ಮೈಲಾರ ಶುಗರ್ಸ್ ಕಾರ್ಖಾನೆಯನ್ನು ಬಂದ್ ಮಾಡಿಸಿ ಪ್ರತಿಭಟನೆ ನಡೆಸಿದರು.

ಸಕ್ಕರೆ ಕಾರ್ಖಾನೆಗಳು ಕಟಾವು, ಸಾಗಣೆಗೆ ಹೆಚ್ಚುವರಿ ಹಣ ವಸೂಲಿ ಮಾಡಬಾರದು ಎಂಬ ಬೇಡಿಕೆಯನ್ನೂ ಮುಂದಿಟ್ಟು ಕಬ್ಬು ಬೆಳೆಗಾರರು ಹಾಗೂ ವಿವಿಧ ರೈತ ಸಂಘಟನೆಗಳು ಈ ಪ್ರತಿಭಟನೆ ನಡೆಸಿದವು. ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೀರನಗೌಡ ಪಾಟೀಲ್‌ ನೇತೃತ್ವ ವಹಿಸಿದ್ದರು.

ಬೆಳಿಗ್ಗೆ ರೈತರು ಕಾರ್ಖಾನೆಯ ಪ್ರವೇಶ ದ್ವಾರ ಬಂದ್ ಮಾಡಿ ರಸ್ತೆ ತಡೆ ನಡೆಸಲು ಮುಂದಾದಾಗ ಪೊಲೀಸರು ಅದಕ್ಕೆ ಅವಕಾಶ ನೀಡದೇ ಪಕ್ಕದ ಜಾಗದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿ ಎಂದು ತಿಳಿಸಿದರು. ‘ನೀವು ಕಾರ್ಖಾನೆಯನ್ನು ಬಂದ್ ಮಾಡಿಸಿದರೆ ಮಾತ್ರ ಪಕ್ಕದ ಜಾಗದಲ್ಲಿ ಪ್ರತಿಭಟನೆ ನಡೆಸುತ್ತೇವೆ’ ಎಂದು ರೈತರು ಹೇಳಿದರು. ಅದರಂತೆ ಸ್ಥಳದಲ್ಲಿದ್ದ ತಹಶೀಲ್ದಾರ್ ಜಿ.ಸಂತೋಷಕುಮಾರ್ ಅವರು ಕಾರ್ಖಾನೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರಿಂದ ಮಧ್ಯಾಹ್ನದ ನಂತರ ಕಬ್ಬು ಅರೆಯುವುದನ್ನು ಸ್ಥಗಿತಗೊಳಿಸಲಾಯಿತು.

ADVERTISEMENT

ಮುಖ್ಯಮಂತ್ರಿ ಅವರು ಕರೆದಿರುವ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯ ತೀರ್ಮಾನ ನೋಡಿಕೊಂಡು ಪ್ರತಿಭಟನೆಯ ಸ್ವರೂಪ ನಿರ್ಧರಿಸುತ್ತೇವೆ ಎಂದು ಮುಖಂಡರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.