ADVERTISEMENT

ಜಾಗತಿಕ ಹೂಡಿಕೆದಾರರ ಸಭೆವಿರೋಧಿಸಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2022, 12:41 IST
Last Updated 2 ನವೆಂಬರ್ 2022, 12:41 IST
ಕರ್ನಾಟಕ ಪ್ರಾಂತ ರೈತ ಸಂಘದವರು ಬುಧವಾರ ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಕರ್ನಾಟಕ ಪ್ರಾಂತ ರೈತ ಸಂಘದವರು ಬುಧವಾರ ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಹೊಸಪೇಟೆ (ವಿಜಯನಗರ): ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘದವರು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರಿಗೆ ಬರೆದ ಮನವಿ ಪತ್ರ ಜಿಲ್ಲಾಧಿಕಾರಿಗೆ ಸಲ್ಲಿಸಿದರು. ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು. ರೈತರ ಭೂಮಿ, ಆಹಾರ, ಉದ್ಯೋಗದ ಹಕ್ಕು ರಕ್ಷಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಅತಿವೃಷ್ಟಿಯಿಂದ ರಾಜ್ಯದಲ್ಲಿ ನೂರಾರು ಕೋಟಿ ರೂಪಾಯಿ ಬೆಳೆ ನಷ್ಟವಾಗಿದ್ದು ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಮುದಾಯದ ನೋವು ಆಲಿಸಬೇಕಾದ ರಾಜ್ಯ ಸರ್ಕಾರ ಬಂಡವಾಳ ಹೂಡಿಕೆದಾರರ ಸಭೆ ನಡೆಸುತ್ತಿರುವುದು ದುರದೃಷ್ಟಕರ. ಕಷ್ಟದಲ್ಲಿರುವ ರೈತರ ಜಮೀನು ಕಸಿದುಕೊಂಡು ಬಂಡವಾಳಷಾಹಿಗಳ ಕೈಗಳಿಗೆ ಕೊಡುವ ದೊಡ್ಡ ಹುನ್ನಾರ ಇದರಲ್ಲಿ ಅಡಗಿದೆ ಎಂದು ಆರೋಪಿಸಿದರು.

ADVERTISEMENT

ವಿದ್ಯುತ್‌ ತಿದ್ದುಪಡಿ ಮಸೂದೆ ಹಿಂಪಡೆಯಬೇಕು. ಅತಿವೃಷ್ಟಿಗೆ ಕೂಡಲೇ ಪರಿಹಾರ ಒದಗಿಸಬೇಕು. ಎಲ್ಲ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಬಲವಂತದ ಭೂಸ್ವಾಧೀನ ನಿಲ್ಲಿಸಬೇಕು. ಕೃಷಿ ಬೆಳೆಗಳಿಗೆ ಬೆರಂಬಲ ಬೆಲೆ ಘೋಷಿಸಬೇಕು. ಮಹಿಳೆಯರು, ಮಕ್ಕಳು, ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆಯಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಜಿಲ್ಲಾ ಸಂಚಾಲಕ ಎನ್‌. ಯಲ್ಲಾಲಿಂಗ, ಸಹ ಸಂಚಾಲಕ ಸಿ. ರುದ್ರಪ್ಪ, ನಿಜಲಿಂಗಪ್ಪ, ಕೆ. ಶ್ರೀಕಾಂತ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.