ADVERTISEMENT

ಟಿಸಿ ತರಲು ರೈತರಿಂದ ವಾಹನ ತರಿಸುವಂತಿಲ್ಲ–ಸಚಿವ ಕೆ.ಜೆ.ಜಾರ್ಜ್‌ ತಾಕೀತು

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 4:57 IST
Last Updated 26 ನವೆಂಬರ್ 2025, 4:57 IST
ಕೆ.ಜೆ. ಜಾರ್ಜ್‌
ಕೆ.ಜೆ. ಜಾರ್ಜ್‌   

ಹೊಸಪೇಟೆ (ವಿಜಯನಗರ): ರೈತರ ಕೃಷಿ ಪಂಪ್‌ಸೆಟ್‌ಗಳಿಗಾಗಿ ವಿದ್ಯುತ್ ಪರಿವರ್ತಕ (ಟಿಸಿ) ಬ್ಯಾಂಕ್ ಮತ್ತು ದುರಸ್ತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ವಿಫಲವಾದ ಟಿಸಿಗಳನ್ನು  ದುರಸ್ತಿ ಕೇಂದ್ರಗಳಿಗೆ ತರುವಾಗ ‘ಎಸ್ಕಾಂ’ಗಳೇ ವಾಹನ ವ್ಯವಸ್ಥೆ ಮಾಡಬೇಕೇ ಹೊರತು ರೈತರಿಂದ ತರಿಸಬಾರದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ತಾಕೀತು ಮಾಡಿದ್ದಾರೆ.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜನಪ್ರತಿನಿಧಿಗಳು, ಜೆಸ್ಕಾಂ, ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳೊಂದಿಗೆ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಕೈಗೊಂಡ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ರೈತರಿಗೆ ಹೊರೆ ಮಾಡುವ ಇಂತಹ ವ್ಯವಸ್ಥೆ ಕಂಡುಬಂದಲ್ಲಿ ಅಂತಹ ಸಿಬ್ಬಂದಿ ಮತ್ತು ಎಂಜಿನಿಯರ್‌ಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ. ಸಕಾಲದಲ್ಲಿ ಟಿಸಿ ಅಳವಡಿಕೆಗೆ ಕ್ರಮ ವಹಿಸಬೇಕು. ಸಾಮಾನ್ಯವಾಗಿ ಒಂದೇ ವಿದ್ಯುತ್ ಪರಿವರ್ತಕಕ್ಕೆ ಹಲವು ಪಂಪ್ ಸೆಟ್‌ಗಳ ಸಾಮರ್ಥ್ಯ ಮೀರಿ ಸಂಪರ್ಕ ಕಲ್ಪಿಸಿದಾಗ ವಿಫಲವಾಗುತ್ತವೆ. ಪವರ್ ಮ್ಯಾನ್‌ಗಳು ಮತ್ತು ಎಂಜಿನಿಯರ್‌ಗಳು ಓವರ್ ಲೋಡ್ ಆಗದಂತೆ ನೋಡಿಕೊಳ್ಳುವುದು ಅವರ ಕರ್ತವ್ಯವಾಗಿದೆ ಎಂದರು.

ADVERTISEMENT

ವಿದ್ಯುತ್ ಸಂಪರ್ಕ ದುರಸ್ತಿಗೆ ಬರುವ ಯಾರಿಗೂ ಯಾವುದೇ ರೀತಿಯಲ್ಲಿ ದುಡ್ಡು ಕೊಡಬಾರದು ಎಂದು ಸಚಿವರು ತಾಕೀತು ಮಾಡಿದರು. ಒಂದು ವೇಳೆ ಹೀಗೆ ಹಣ ವಸೂಲಿ ವಿವರ ನೀಡಿದರೆ ಕ್ರಮ ನಿಶ್ಚಿತ ಎಂದರು.

4.5 ಲಕ್ಷ ಅಕ್ರಮ ಪಂಪಸೆಟ್‌ಗಳ ಸಕ್ರಮಕ್ಕೆ ಕ್ರಮ: ರೈತರು ಕೃಷಿ ಪಂಪ್‌ಸೆಟ್‌ಗಳಿಗೆ ಅಕ್ರಮವಾಗಿ ಪಡೆದಿರುವ ವಿದ್ಯುತ್ ಸಂಪರ್ಕವನ್ನು ಸಕ್ರಮ ಮಾಡಲು ರಾಜ್ಯದಲ್ಲಿ 4.5 ಲಕ್ಷ ಪಂಪ್ ಸೆಟ್‌ಗಳನ್ನು ಗುರುತಿಸಿ ಸಕ್ರಮಕ್ಕೆ ಕ್ರಮ ಕೈಗೊಳ್ಳಲಾಗಿದೆ ಆದರೆ ಇದನ್ನು ಇದೇ ರೀತಿ ಮುಂದುವರೆಸಲು ಸಾಧ್ಯವಿಲ್ಲ. ಈ ಬಗ್ಗೆ ಕ್ಯಾಬಿನೆಟ್ ಮುಂದೆ ತಂದು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದರು.

ಅಕ್ರಮ ಸಕ್ರಮಕ್ಕಾಗಿ ಪಾವತಿಸಿದ ನೋಂದಾಣಿ ಶುಲ್ಕ 50 ರೂಗಳಿಂದ 25000 ದವರೆಗೆ ಶುಲ್ಕ ಪಾವತಿಸಿದ ಎಲ್ಲಾ ರೈತರ ಪಂಪ್‌ಸೆಟ್‌ಗಳಿಗೆ ಮೂಲಭೂತ ಸೌಕರ್ಯಗಳೊಂದಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ತೀರ್ಮಾನಿಸಲಾಗಿದೆ. ಇದರಲ್ಲಿ ವಿದ್ಯುತ್ ಕಂಬಂದಿಂದ 500 ಮೀಟರ್ ಒಳಗಿನ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ 500 ಮೀಟರ್‌ಗಿಂತ ಹೆಚ್ಚು ದೂರವಿರುವ ಪಂಪ್‌ಸೆಟ್‌ಗಳಿಗೆ ಕುಸುಮ್ ಬಿ ಯೋಜನೆಯಡಿ ಕೇಂದ್ರ ಸರ್ಕಾರದ ಶೇ 30 ಮತ್ತು ರಾಜ್ಯ ಸರ್ಕಾರದ ಶೇ 50ರಷ್ಟು ಸಬ್ಸಿಡಿಯೊಂದಿಗೆ ಸೋಲಾರ್ ವಿದ್ಯುತ್ ಕಲ್ಪಿಸಲಾಗುತ್ತದೆ. ಸೋಲಾರ್ ಪಂಪ್‌ನಿಂದ ಸಾವಿರ ಅಡಿವರೆಗೆ ಪಂಪ್ ಮಾಡುವ ಸಾಮಾರ್ಥ್ಯವಿರುತ್ತದೆ. ಈ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದರು.

ವಿದ್ಯುತ್ ಜಾಗೃತ ದಳದಿಂದ ವರದಿ ನೀಡಲು ಸೂಚನೆ : ವಿದ್ಯುತ್ ಜಾಗೃತ ದಳದವರು ಅಕ್ರಮವಾಗಿ ವಾಸದ ಮನೆಗಳಿಗೆ ಪಡೆದ ವಿದ್ಯುತ್ ಸಂಪರ್ಕಕ್ಕೆ ದಂಡ ವಿಧಿಸಿ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಸಂಸದ ಇ.ತುಕಾರಾಂ ಮತ್ತು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಪ್ರಸ್ತಾಪಿಸಿದಾಗ ಕಾಲೋನಿ, ತಾಂಡಾ, ಅಲ್ಪಸಂಖ್ಯಾತರ ಗಲ್ಲಿಯಲ್ಲಿನ ವಾಸದ ಮನೆಗಳಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಲ್ಲಿ, ಸಂಪರ್ಕ ಕಡಿತಗೊಳಿಸದೇ ಹಾಗೂ ಪ್ರಕರಣ ದಾಖಲಿಸದೇ ‘ಎಸ್ಕಾಂ’ಗಳಿಗೆ ಅಂತಹ ಮನೆಗಳ ಅಂಕಿಸಂಖ್ಯೆ ಬಗ್ಗೆ ನಿಖರವಾದ ವರದಿಯನ್ನು ನೀಡಬೇಕು. ಇದನ್ನು ಇಂಧನ ಇಲಾಖೆ ಅವಲೋಕಿಸಿ ಅಂತಹ ಕಡುಬಡತನದ ಜನರಿಗೆ ವಿದ್ಯುತ್ ಸಂಪರ್ಕ ಒದಗಿಸಲು ಡಿಎಂಎಫ್, ಕಲ್ಯಾಣ ಕರ್ನಾಟಕ ಪ್ರಾದೇಶಾಭಿವೃದ್ಧಿ ಯೋಜನೆ, ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಠೇವಣಿ ಭರಿಸಿ ವಿದ್ಯುತ್ ಸಂಪರ್ಕ ನೀಡಲು ಸ್ಥಳೀಯ ಮಟ್ಟದಲ್ಲಿ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ತೀರ್ಮಾನಿಸುತ್ತಾರೆ. ಅಲ್ಲಿಯವರೆಗೆ ಜಾಗೃತ ದಳದವರು ಸಂಪರ್ಕ ಕಡಿತಗೊಳಿಸದೇ ವರದಿಯನ್ನು ಮಾತ್ರ ಹೆಸ್ಕಾಂಗಳಿಗೆ ನೀಡಬೇಕು ಎಂದು ಸೂಚನೆ ನೀಡಿದರು.

ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್, ಹೂವಿನಹಡಗಲಿ ಶಾಸಕ ಕೃಷ್ಣನಾಯ್ಕ್, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಕುಮಾರ್ ಹರವಾಳ, ಕೆಪಿಟಿಸಿಎಲ್‌ ಎಂಡಿ ಪಂಕಜ್ ಕುಮಾರ ಪಾಂಡೆ, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಭಾಜಪೇಯಿ ಇತರರು ಇದ್ದರು.

ಹಂಪಿ ವಿವಿ ವ್ಯಾಪ್ತಿಯಲ್ಲಿ ಸೋಲಾರ್ ಉತ್ಪಾದನೆ ಹಂಪಿ ಕನ್ನಡ ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿ 750 ಎಕರೆ ಜಮೀನು ಇದೆ. ಇಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆಗೆ ಸಾಕಷ್ಟು ಅವಕಾಶವಿದೆ. ಇದರಿಂದ ವಿಶ್ವವಿದ್ಯಾಲಯಕ್ಕೆ ಆದಾಯ ಬರಲಿದೆ. ಇಲ್ಲಿ ಸೋಲಾರ್ ಅಳವಡಿಕೆ ಬಗ್ಗೆ ಕುಲಪತಿಗಳು ಚರ್ಚಿಸಿದ್ದಾರೆಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು. ಈ ಬಗ್ಗೆ ಕೆಪಿಟಿಸಿಎಲ್ ತಾಂತ್ರಿಕ ತಂಡದವರು ಪರಿಶೀಲನೆ ನಡೆಸುವರು. 25 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ 100 ಎಕರೆಯಷ್ಟು ಜಾಗ ಬೇಕಾಗುತ್ತದೆ. ಬಾಡಿಗೆಯಾಗಿ ಪ್ರತಿ ಎಕರೆಗೆ ₹30 ಸಾವಿರ ನೀಡಲು ಅವಕಾಶವಿದೆ ಎಂದು ಸಚಿವರು ಹೇಳಿದರು. ಕುಸುಮ್ ಸಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ‘ಕುಸುಮ್ ಸಿ’ ಯೋಜನೆಯಡಿ ಸೋಲಾರ್ ವಿದ್ಯುತ್ ಉತ್ಪಾದನೆಗೆ ವಿಪುಲ ಅವಕಾಶಗಳಿವೆ. ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಮತ್ತು ಕಂದಾಯ ಭೂಮಿಯಲ್ಲಿ ಸೋಲಾರ್ ಪ್ಯಾನೆಲ್‌ಗಳನ್ನು ಅಳವಡಿಸುವುದರಿಂದ ಹೆಚ್ಚುವರಿ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.