ADVERTISEMENT

ವಿಜಯನಗರ | ಪತಂಜಲಿ ಯೋಗ ಸಮಿತಿಯಿಂದ ಪ್ರಥಮ ‘ವಿಶ್ವ ಧ್ಯಾನ ದಿನ’

‘ಧ್ಯಾನದಿಂದ ಸಾಧ್ಯ ಮನೋವ್ಯಾಧಿ ನಿವಾರಣೆ’

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2024, 10:55 IST
Last Updated 21 ಡಿಸೆಂಬರ್ 2024, 10:55 IST
   

ಹೊಸಪೇಟೆ (ವಿಜಯನಗರ): ನಮ್ಮ ಮನಸ್ಸನ್ನು ಮತ್ತು ದೇಹವನ್ನು ಕಾಡುವ ಬಹುತೇಕ ತೊಂದರೆಗಳಿಗೆ ನಾವೇ ಪರೋಕ್ಷ ಕಾರಣ ಆಗಿರುತ್ತೇವೆ. ಬಹುತೇಕ ಮಾನಸಿಕ ವ್ಯಾಧಿಗಳು, ತುಮುಲಗಳು, ಖಿನ್ನತೆಯಂತಹ ಆಧುನಿಕ ತೊಂದರೆಗಳನ್ನು ಧ್ಯಾನದಿಂದ ಪರಿಹರಿಸಬಹುದಾಗಿದೆ’ ಎಂದು ಧ್ಯಾನ ಸಾಧಕಿ ಮೀನಾ ಕಾಕುಬಾಳ ಹೇಳಿದರು.

ಇಲ್ಲಿನ ಫ್ರೀಡಂ ಪಾರ್ಕ್‌ನ ಪತಂಜಲಿ ಯೋಗ ಕೇಂದ್ರದಲ್ಲಿ ಶನಿವಾರ ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡ ಪ್ರಥಮ ‘ವಿಶ್ವ ಧ್ಯಾನ ದಿನ’ದ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಧ್ಯಾನವು ನಮಗೆ ಮಾನಸಿಕ ನೆಮ್ಮದಿ ನೀಡುವುದರ ಜತೆಗೆ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುವ ಮತ್ತು ಎದುರಿಸುವ ಸಾಮರ್ಥ್ಯವನ್ನು ತಂದುಕೊಡುತ್ತದೆ. ಮನಸ್ಸಿನ ನಿಗ್ರಹ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ಹಾಗೂ ನಮ್ಮನ್ನು ಆತ್ಮಾವಲೋಕನಕ್ಕೆ ಒಳಪಡುವಂತೆ ಮಾಡಿ ಮಾನಸಿಕ ನೆಮ್ಮದಿಗೆ ಅಣಿಮಾಡುತ್ತದೆ, ಇಂತಹ ನಿಗ್ರಹವನ್ನು ಧ್ಯಾನದಿಂದಷ್ಟೇ ಸಾಧಿಸಲು ಸಾಧ್ಯ’ ಎಂದರು.

ADVERTISEMENT

ಪತಂಜಲಿ ಯೋಗ ಸಮಿತಿಯ ರಾಜ್ಯ ಸಮಿತಿ ಸದಸ್ಯ ಬಾಲಚಂದ್ರ ಶರ್ಮಾ ಮಾತನಾಡಿ, ‘ಯೋಗದ ಮಹತ್ವ ವಿಶ್ವಕ್ಕೆ ಪರಿಚಯಿಸಿರುವ ಬಾಬಾ ರಾಮದೇವ ಪಡುತ್ತಿರುವ ಶ್ರಮದ ಭಾಗವಾಗಿ ಧ್ಯಾನಕ್ಕೂ ಇದೀಗ ವಿಶ್ವಮನ್ನಣೆ ದೊರೆತಿದೆ. ನಾವೆಲ್ಲ ಹೆಚ್ಚು ಹೆಚ್ಚು ಜನರನ್ನು ಈ ಸಾಧನೆಯ ಹಾದಿಗೆ ತರಬೇಕಾಗಿದೆ’ ಎಂದರು.

ವಿಜಯನಗರ ಜಿಲ್ಲಾ ಪ್ರಭಾರಿ ಪ್ರೊ.ಎಫ್.ಟಿ.ಹಳ್ಳಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಯುವ ಪ್ರಭಾರಿ ಕಿರಣ್ ಕುಮಾರ, ಜಿಲ್ಲಾ ಮಹಿಳಾ ಪ್ರಭಾರಿ ಮಂಗಳಕ್ಕ, ಶಿವಮೂರ್ತಿ, ಶ್ರೀಧರ, ಶ್ರೀನಿವಾಸ ಮಂಚಿಕಟ್ಟಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.