ADVERTISEMENT

ವಿಜಯನಗರ: 93ರಲ್ಲೂ ಗಾಂಧಿ ಬದುಕು

13ನೇ ವಯಸ್ಸಿನಲ್ಲೇ ಆರು ತಿಂಗಳು ಸೆರೆಮನೆವಾಸ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 14 ಆಗಸ್ಟ್ 2022, 19:30 IST
Last Updated 14 ಆಗಸ್ಟ್ 2022, 19:30 IST
ಗುಂಡೂರಾವ್‌ ದೇಸಾಯಿ
ಗುಂಡೂರಾವ್‌ ದೇಸಾಯಿ   

ಹೊಸಪೇಟೆ (ವಿಜಯನಗರ): ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶಕ್ಕಾಗಿ ಹೋರಾಡಿ ಈಗಲೂ ನಮ್ಮ ಮಧ್ಯೆ ಬದುಕುಳಿದವರು ಬೆರಳೆಣಿಕೆಯ ಜನ. ಅಂಥವರಲ್ಲಿ ತಾಲ್ಲೂಕಿನ ಕಮಲಾಪುರದ ದೇಸಾಯಿ ಕಾಲೊನಿಯ ಗುಂಡೂರಾವ್‌ ದೇಸಾಯಿ ಕೂಡ ಒಬ್ಬರು.

ದೇಸಾಯಿ ಅವರು ಅವರ ಮಾವ ಎನ್‌.ವಿ. ದೇಸಾಯಿ ಅವರಿಂದ ಪ್ರಭಾವಿತರಾಗಿ 13ನೇ ವಯಸ್ಸಿನಲ್ಲೇ ಸ್ವಾತಂತ್ರ್ಯ ಚಳವಳಿಗೆ ದುಮುಕಿದ್ದರು. 1942ರಲ್ಲಿ ‘ಕ್ವಿಟ್‌ ಇಂಡಿಯಾ ಚಳವಳಿ’, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಅಭಿಯಾನ ತೀವ್ರ ಸ್ವರೂಪ ಪಡೆದಿತ್ತು. ಅದರಲ್ಲಿ ಮಾವನೊಂದಿಗೆ ಸಕ್ರಿಯವಾಗಿ ಪಾಲ್ಗೊಂಡಿದ್ದರು. ದೇಸಾಯಿ ಅವರು ಬೆಳೆದು ದೊಡ್ಡವರಾಗಿದ್ದು ಕಮಲಾಪುರದಲ್ಲಿ.

ಆದರೆ, ಹುಟ್ಟಿ, ಬೆಳೆದದ್ದು ತಾಯಿಯ ಹುಟ್ಟೂರಾದ ಹಾನಗಲ್‌ ನಲ್ಲಿ. ಅಲ್ಲೇ ಹೋರಾಟ ನಡೆಸುತ್ತಿರುವಾಗ ಬ್ರಿಟಿಷರು ಇವರು ಹಾಗೂ ಇವರ ಮಾವನನ್ನು ಬಂಧಿಸಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಕೊಂಡೊಯ್ದರು. ಆಗ ದೇಸಾಯಿ ಅವರಿಗೆ 13 ವರ್ಷ ವಯಸ್ಸು. ಇನ್ನೂ, ಚಿಗುರು ಮೀಸೆಯೂ ಬಂದಿರಲಿಲ್ಲ. ಆದರೆ, ಆರು ತಿಂಗಳು ಜೈಲಲ್ಲಿ ಇದ್ದರು. ಅದರ ಬಗ್ಗೆ ಕೇಳಿದರೆ, ‘ನನ್ನ ಮಾವ ಹಾಗೂ ನನ್ನ ವಯಸ್ಸಿನ ಹಲವರು ಜೈಲಿನಲ್ಲಿದ್ದರು. ಸಮಯಕ್ಕೆ ಸರಿಯಾಗಿ ಊಟ ಕೊಡುತ್ತಿದ್ದರು. ಓದಿಕೊಂಡು ಕಾಲ ಕಳೆಯುತ್ತಿದ್ದೆ. ಆರು ತಿಂಗಳು ಕಳೆದದ್ದೇ ಗೊತ್ತಾಗಲಿಲ್ಲ’ ಎಂದು ಹೇಳಿದರು.

ADVERTISEMENT

ಜೈಲಿನಿಂದ ಬಂದ ನಂತರವೂ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಆದರೆ, ಗಾಂಧೀಜಿಯವರನ್ನು ಖುದ್ದು ನೋಡಬೇಕೆಂಬ ಅವರ ಆಸೆ ಈಡೇರಲಿಲ್ಲ. ಆದರೆ, ಬೆಂಗಳೂರಿನಿಂದ ಗಾಂಧೀಜಿ ಅವರ ಚಿತಾಭಸ್ಮ ತಂದು, ಖುದ್ದು ಅವರ ಕೈಗಳಿಂದಲೇ ಹಂಪಿ ಬಳಿ ತುಂಗಭದ್ರಾ ನದಿಯಲ್ಲಿ ವಿಸರ್ಜಿಸಿದ್ದರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ ಅನೇಕ ಶಾಲೆಗಳು, ಓಣಿಗಳಿಗೆ ಹೋಗಿ ಜನರಿಗೆ ಧ್ವಜ ಕೊಟ್ಟು ಬಂದಿದ್ದರು. ಅಂದಹಾಗೆ, ದೇಸಾಯಿ ಅವರ ಪೋಷಕರ ಏಳು ಮಕ್ಕಳಲ್ಲಿ ಇವರು ನಾಲ್ಕನೆಯವರು.

ಕಮಲಾಪುರದ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ, ಸದಸ್ಯರಾಗಿ ಕೆಲಸ ನಿರ್ವಹಿಸಿದ್ದಾರೆ. ಕೋ ಆಪರೇಟಿವ್‌ ಸೊಸೈಟಿ ನಿರ್ದೇಶಕರಾಗಿಯೂ ಸೇವೆ ಮಾಡಿದ್ದಾರೆ. ಆರಂಭದಿಂದಲೂ ಖಾದಿ ಬಿಳಿ ವಸ್ತ್ರವನ್ನೇ ಧರಿಸಿಕೊಂಡು, ಗಾಂಧೀಜಿಯವರಂತೆ ಸರಳ ಬದುಕು ನಡೆಸುತ್ತಿದ್ದಾರೆ. ಇವರಿಗೆ ಮೂವರು ಹೆಣ್ಣು, ಇಬ್ಬರು ಗಂಡು ಮಕ್ಕಳು.

ಪಾಲಿಸ್ಟರ್‌ ಧ್ವಜಕ್ಕೆ ವಿರೋಧ
‘ಖಾದಿ ಈ ದೇಶದ ಹೆಮ್ಮೆ. ಅದಕ್ಕಾಗಿಯೇ ಮಹಾತ್ಮ ಗಾಂಧೀಜಿಯವರು ಅರ್ಧ ದೇಹ ಮಾತ್ರ ಖಾದಿ ಧರಿಸಿಕೊಂಡು ದೇಶ ಓಡಾಡಿದ್ದರು. ಈಗಿನ ಸರ್ಕಾರ ಖಾದಿ ಬದಲು ಪಾಲಿಸ್ಟರ್‌ ಧ್ವಜ ಬಳಸುವುದಕ್ಕೆ ಅವಕಾಶ ಕಲ್ಪಿಸಿರುವ ಕ್ರಮ ಸರಿಯಲ್ಲ’ ಎಂದು ಗುಂಡೂರಾವ್‌ ದೇಸಾಯಿ ಅವರು ಖಡಕ್‌ ಮಾತುಗಳಲ್ಲಿ ಹೇಳಿದರು.

‘ಸರ್ಕಾರದ ನಿರ್ಧಾರದ ವಿರುದ್ಧ ಇತ್ತೀಚೆಗೆ ಖಾದಿ ಧ್ವಜ ತಯಾರಿಸುವ ಹುಬ್ಬಳಿಯ ಬೆಂಗೇರಿಗೆ ಹೋಗಿದ್ದೆ. ಸರ್ಕಾರದ ತೀರ್ಮಾನ ಖಂಡಿಸಲಾಯಿತು. ಇದರ ವಿರುದ್ಧ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಬರುವ ದಿನಗಳಲ್ಲಿ ಎಲ್ಲೆಡೆ ಧ್ವನಿ ಎತ್ತಲಾಗುವುದು’ ಎಂದರು.

‘ನಾನು ಕಾಂಗ್ರೆಸ್ಸಿನಾಗಿದ್ದಕ್ಕೆ ಹೆಮ್ಮೆ’

‘ನಾನು ಸ್ವಾತಂತ್ರ್ಯ ಹೋರಾಟಕ್ಕೆ ದುಮುಕುವುದಕ್ಕೆ ಕಾಂಗ್ರೆಸ್‌ ಕಾರಣ. ಹಾಗಾಗಿ ನಾನು ಕಾಂಗ್ರೆಸ್ಸಿನಾಗಿದ್ದಕ್ಕೆ ಹೆಮ್ಮೆ ಇದೆ. ಸಾಯುವವರೆಗೂ ಕಾಂಗ್ರೆಸ್ಸಿಗನಾಗಿಯೇ ಇರುತ್ತೇನೆ. ಎಲ್ಲರೂ ಕಾಂಗ್ರೆಸ್‌ಗೆ ಮತ ಹಾಕಬೇಕೆಂದೂ ಈಗಲೂ ಹೇಳುತ್ತೇನೆ. ಯಾರು, ಏನೂ ಬೇಕಾದರೂ ಅಂದುಕೊಳ್ಳಲಿ’ ಎಂದು ಗುಂಡೂರಾವ್‌ ದೇಸಾಯಿ ಹೇಳಿದರು.

‘ಈ ದೇಶದಲ್ಲಿ ಮೊದಲು ಹುಟ್ಟಿದ್ದು ಕಾಂಗ್ರೆಸ್‌. ಅನಂತರ ಬೇರೆ ಬೇರೆ ಪಕ್ಷಗಳು ಬಂದವು. ಆದರೆ, ದೇಶಕ್ಕೆ ಕಾಂಗ್ರೆಸ್‌ ಕೊಡುಗೆ ಯಾರೂ ಮರೆಯುವಂತಿಲ್ಲ. ಹಿಂದಿನ ಆಡಳಿತಕ್ಕೂ ಈಗಿನ ಆಡಳಿತಕ್ಕೂ ಭಾರಿ ವ್ಯತ್ಯಾಸವಿದೆ. ಅದರ ಬಗ್ಗೆ ಮಾತನಾಡದಿರುವುದೇ ಲೇಸು’ ಎಂದು ಸುಮ್ಮನಾದರು.

ಗುಂಡೂರಾವ್‌ ದೇಸಾಯಿ ಅವರ ವಿವರ

* 1929 ನವೆಂಬರ್‌ 29ರಂದು ಜನನ
* 13ನೇ ವಯಸ್ಸಿನಲ್ಲೇ ಜೈಲು ವಾಸ
* ಆರು ತಿಂಗಳು ಸೆರೆಮನೆವಾಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.