ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಗಾದಿಗನೂರಿನಲ್ಲಿ ಸೆ.27ರಂದು ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ 11 ಮಂದಿಯ ಪೈಕಿ ಮತ್ತಿಬ್ಬರು ಶುಕ್ರವಾರ ರಾತ್ರಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಮೂಲಕ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿದಂತಾಗಿದೆ.
ಕವಿತಾ (30) ಮತ್ತು ಮೈಲಾರಪ್ಪ (45) ಮೃತರು. ಶುಕ್ರವಾರ ಬೆಳಿಗ್ಗೆಯಷ್ಟೇ ವಕೀಲ ಹಾಲಪ್ಪ ಮತ್ತು ಅವರ ತಾಯಿ ಗಂಗಮ್ಮ ಮೃತಪಟ್ಟಿದ್ದರು.
ಹಾಲಪ್ಪ ಮತ್ತು ಗಂಗಮ್ಮ ಅವರ ಮೃತದೇಹ ಶುಕ್ರವಾರ ಸಂಜೆ ಗಾದಿಗನೂರಿಗೆ ತಲುಪಿತ್ತು. ರಾತ್ರಿಯೇ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಈ ಶೋಕದಲ್ಲಿ ಊರ ಮಂದಿ ಇದ್ದಾಗಲೇ ಹಾಲಪ್ಪ ಅವರ ಪತ್ನಿ ಕವಿತಾ ಮತ್ತು ಮೈಲಾರಪ್ಪ ಅವರ ನಿಧನದ ಸುದ್ದಿ ಊರಿಗೆ ಬಂದು ಅಪ್ಪಳಿಸಿದೆ. ಈ ಇಬ್ಬರ ಮೃತದೇಹಗಳು ಶನಿವಾರ ಸಂಜೆ ವೇಳೆಗೆ ಇಲ್ಲಿಗೆ ತಲುಪುವ ನಿರೀಕ್ಷೆ ಇದೆ.
ಸೆ.27ರ ಬೆಳಿಗ್ಗೆ 5.15ರ ವೇಳೆಗೆ ಕವಿತಾ ಅವರು ಸ್ಟವ್ ಹಚ್ಚುವಾಗ ಗ್ಯಾಸ್ ಸೋರಿಕೆಯಾಗಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಮೊದಲಿಗೆ ತೋರಣಗಲ್‌ನ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.