
ಹೊಸಪೇಟೆ (ವಿಜಯನಗರ): ಅಖಿಲ ಭಾರತ ಬೇಡಿಕೆ ದಿನವನ್ನು ನಗರದಲ್ಲಿ ಗುರುವಾರ ಆಚರಿಸಲಾಗಿದ್ದು, ಈ ಹಿಂದಿನ ನಿಶ್ಚಿತ ಪಿಂಚಣಿ ಪದ್ಧತಿಯನ್ನು (ಒಪಿಎಸ್) ಮರುಸ್ಥಾಪಿಸಬೇಕು ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಒತ್ತಾಯಿಸಿದೆ.
ಒಕ್ಕೂಟದ ಮುಖಂಡರಾದ ಎಂ.ಜಂಬಯ್ಯ ನಾಯಕ, ತಾಯಪ್ಪ ನಾಯಕ ಹಾಗೂ ಇತರರು ತಾಲ್ಲೂಕು ಕಚೇರಿ ಬಳಿ ಒಗ್ಗೂಡಿ, ನೌಕರರ ಬೇಡಿಕೆಗಳ ಪಟ್ಟಿಯನ್ನು ಮುಂದಿಟ್ಟರು ಹಾಗೂ ಮನವಿಯನ್ನು ಮುಖ್ಯಮಂತ್ರಿ ಅವರಿಗೆ ಕಳುಹಿಸಿಕೊಟ್ಟರು.
ಕೇರಳ ಮತ್ತು ತಮಿಳುನಾಡು ಸರ್ಕಾರಗಳು ತಮ್ಮ ನೌಕರರಿಗೆ ಸುಧಾರಿತ ಪಿಂಚಣಿ ಪದ್ಧತಿ ಜಾರಿಗೊಳಿಸಿವೆ. ಎನ್‌ಪಿಎಸ್, ಯುಪಿಎಸ್ ಬದಲಿಗೆ ಶೇ 50ರಷ್ಟು ನಿಶ್ಚಿತ ಪಿಂಚಣಿ ವ್ಯವಸ್ಥೆ ಇದರಲ್ಲಿದೆ. ಇದೇ ರೀತಿಯಲ್ಲಿ ರಾಜ್ಯದಲ್ಲೂ ಹಿಂದಿನ ನಿಶ್ಚಿತ ಪಿಂಚಣಿ ಪದ್ಧತಿ ಮರುಜಾರಿಗೊಳಿಸಬೇಕು, ವಿವಿಧ ಇಲಾಖೆಗಳಲ್ಲಿರುವ 2.70 ಲಕ್ಷ ಖಾಲಿ ಹುದ್ದೆಗಳನ್ನು (ದೇಶದಲ್ಲಿ 64 ಲಕ್ಷ) ಭರ್ತಿ ಮಾಡಬೇಕು, ಹೊರಗುತ್ತಿಗೆಯ ಶೋಷಣೆಯಿಂದ ಯುವಕರನ್ನು ಪಾರು ಮಾಡಬೇಕು ಎಂದು ಒತ್ತಾಯಿಸಲಾಯಿತು.
ಹಲವಾರು ಇಲಾಖೆಗಳಲ್ಲಿ ವೃಂದ ಮತ್ತು ನೇಮಕಾತಿ ಪರಿಷ್ಕರಣೆ, ಮುಂಬಡ್ತಿ, ಜ್ಯೇಷ್ಠತೆ ಪ್ರಕಟಣೆಗಳು ಕಾಲಕಾಲಕ್ಕೆ ಆಗುತ್ತಿಲ್ಲ. ಸರ್ಕಾರಿ ಉದ್ದಿಮೆಗಳ ಖಾಸಗೀಕರಣ ಕೈಬಿಡಬೇಕು, ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು, 5 ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಆಗಬೇಕು, ಪಿಂಚಣಿದಾರರು, ಗುತ್ತಿಗೆ/ ಹೊರಗುತ್ತಿಗೆ ನೌಕರರಿಗೆ ನಗದು ರಹಿತ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸಬೇಕು ಮೊದಲಾದ ಬೇಡಿಕೆಗಳನ್ನೂ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.