ಹೊಸಪೇಟೆ (ವಿಜಯನಗರ): ‘ಹಿಂದೂಗಳಲ್ಲಿ ಜಾತಿಗಳಿರಲಿ, ಅವು ಮನೆಯೊಳಗೆಯೇ ಇರಬೇಕು, ಹೊರಗೆ ಬಂದಾಗ ನಾವೆಲ್ಲ ಒಂದು ಎಂಬ ಭಾವನೆ ಮೂಡಿರಬೇಕು. ಅಂತಹ ಭಾವನೆ ಸೃಷ್ಟಿಸಲು ನಾವು ವಿಫಲರಾಗಿರುವುದರಿಂದಲೇ ಮತಾಂತರ ಜಾಸ್ತಿಯಾಗುತ್ತಿದೆ’ ಎಂದು ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ಭಾನುವಾರ ಇಲ್ಲಿ ನಡೆದ ಸಾಮಾಜಿಕ ಸಾಮರಸ್ಯ ವೇದಿಕೆಯ ಕರ್ನಾಟಕ ಉತ್ತರಪ್ರಾಂತ ಕಾರ್ಯಕರ್ತರ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಜಾತಿ ತಾರತಮ್ಯ, ಮತಾಂತರ ಬಗ್ಗೆ ಎಷ್ಟೇ ಹೇಳಿದರೂ ಮಠಗಳಿಗೆ ಅರ್ಥವಾಗುತ್ತಿಲ್ಲ, ಇಂತಹ ನಿರ್ಲಕ್ಷ್ಯ ಮುಂದುವರಿದರೆ ಹಸಿರು ಬಾವುಟ ಹಾರುವುದು ಮೊದಲು ಮಠಗಳ ಮೇಲೆಯೇ ಎಂಬುದನ್ನು ಮರೆಯಬಾರದು’ ಎಂದು ಎಚ್ಚರಿಸಿದರು.
‘ಮತಾಂತರ ಸಮಾಜಕ್ಕೆ ದೊಡ್ಡ ಪಿಡುಗಾಗಿದೆ. ಅಸ್ಪೃಶ್ಯರು, ತೀರ ಹಿಂದುಳಿದವರು, ದಲಿತರು ಮತಾಂತರ ಆಗುತ್ತಿದ್ದಾರೆಂದು ಹೇಳುವ ಸ್ಥಿತಿ ಈಗ ಇಲ್ಲ. ಸಮಾಜದ ಮುಖ್ಯ ವಾಹಿನಿಯಲ್ಲಿರುವ, ಮೇಲ್ಜಾತಿ ಎನಿಸಿಕೊಂಡವರು ಸಹ ಈಗ ಮತಾಂತರಕ್ಕೆ ಒಳಗಾಗುತ್ತಿದ್ದಾರೆ. ಏಕೆ ಹೀಗಾಗುತ್ತಿದೆ? ಇದಕ್ಕೆ ಕಾರಣವೇನು? ಯಾರ ಮೇಲೆ ಇದರ ಹೊಣೆ ಹಾಕಬೇಕು ಎಂಬುದೇ ಅರ್ಥವಾಗುತ್ತಿಲ್ಲ. ಈಗಲೂ ಅಲ್ಲಲ್ಲಿ ಜಾತ್ರೆಗಳಲ್ಲಿ ಗಲಾಟೆಯಾಗುತ್ತವೆ. ದೇವಸ್ಥಾನ ಪ್ರವೇಶಕ್ಕೆ ಮುಕ್ತ ಅವಕಾಶಗಳಿಲ್ಲ. ಸಾಮಾಜಿಕ ಬಹಿಷ್ಕಾರಗಳು ನಡೆಯುತ್ತಿವೆ. ಮೇಲು-ಕೀಳು ಕಾಣಲಾಗುತ್ತಿದೆ. ನಮಗೆ ಅರಿವು ಇಲ್ಲದಂತೆ ಇವೆಲ್ಲ ತಾರತಮ್ಯ ಆಗಿರಬಹುದು. ಇನ್ನಾದರೂ ಇದನ್ನೆಲ್ಲ ಸರಿಪಡಿಸಿ ವೇಗವಾಗಿ ಹೆಜ್ಜೆ ಇಡಬೇಕಿದೆ’ ಎಂದು ಸ್ವಾಮೀಜಿ ಹೇಳಿದರು.
‘ಸಾಮರಸ್ಯ ನಡಿಗೆಯನ್ನು ನಾನು ನಡೆಸುತ್ತಲೇ ಇದ್ದೇನೆ, ಎಷ್ಟೇ ಟೀಕೆ ಬಂದರೂ ನಾನು ಅದನ್ನು ನಿಲ್ಲಿಸುವುದಿಲ್ಲ. ನನಗೆ ಈ ವಿಚಾರದಲ್ಲಿ ಉಡುಪಿ ಪೇಜಾವರ ಮಠಾಧೀಶರಾಗಿದ್ದ ವಿಶ್ವೇಶ ತೀರ್ಥ ಶ್ರೀಗಳೇ ಪ್ರೇರಣೆ. ರಾಷ್ಟ್ರೀಯತೆ, ಧರ್ಮ, ಮಠ, ಪೀಠ ವಿಚಾರ ಬಂದಾಗ ರಾಷ್ಟ್ರೀಯತೆಯೇ ನನಗೆ ಮುಖ್ಯವಾಗುತ್ತದೆ’ ಎಂಬುದನ್ನು ಅವರು ಪುನರುಚ್ಚರಿಸಿದರು.
‘ಹಿಂದೂಗಳಲ್ಲಿ ಜಾತಿಗಳ ನಡುವೆ ಅಂತರ ಕಾಯ್ದುಕೊಳ್ಳುವ ಪರಿಪಾಠ ಬಂದುದರಿಂದಲೇ ಒಂದೊಂದು ಮಠ ಹುಟ್ಟಿಕೊಳ್ಳುವಂತಾಯಿತು. ಸ್ವಲ್ಪ ಸುಧಾರಿಸಿಕೊಂಡು ಹೋಗುವ ಪ್ರವೃತ್ತಿ ಇರುತ್ತಿದ್ದರೆ ಈಗ ಒಂದು ಮಠವಷ್ಟೇ ಇರುತ್ತಿತ್ತು. ಈಗಾಗಲೇ ಹಿಂದೂಗಳ ಮೇಲೆ ದಾಳಿ ಆಗಿದೆ, ಮತ್ತೊಮ್ಮೆ ಇಂತಹದೇ ದಾಳಿ ನಡೆಯುವುದು ನಿಶ್ಚಿತ ಎಂಬಂತಹ ಸ್ಥಿತಿ ಇದೆ. ಹೀಗಿದ್ದರೂ ಹಿಂದೂಗಳಿಗೆ ಬುದ್ಧಿ ಬರುತ್ತಿಲ್ಲ ಎಂಬುದೇ ವಿಷಾದಕರ’ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಸಹ ಕಾರ್ಯವಾಹ ಟಿ.ಪ್ರಸನ್ನ ದಿಕ್ಸೂಚಿ ಭಾಷಣ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.