ADVERTISEMENT

ಗುರುಪೂರ್ಣಿಮೆ: ಹೊಸಪೇಟೆಯಲ್ಲಿ ದೇವಸ್ಥಾನಗಳಿಗೆ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 15:49 IST
Last Updated 13 ಜುಲೈ 2022, 15:49 IST
ಗುರುಪೂರ್ಣಿಮೆ: ಹೊಸಪೇಟೆಯಲ್ಲಿ ದೇವಸ್ಥಾನಗಳಿಗೆ ಭಕ್ತರ ದಂಡು
ಗುರುಪೂರ್ಣಿಮೆ: ಹೊಸಪೇಟೆಯಲ್ಲಿ ದೇವಸ್ಥಾನಗಳಿಗೆ ಭಕ್ತರ ದಂಡು   

ಹೊಸಪೇಟೆ (ವಿಜಯನಗರ): ಗುರುಪೂರ್ಣಿಮೆ ಅಂಗವಾಗಿ ನಗರದ ವಿವಿಧ ದೇವಸ್ಥಾನಗಳಲ್ಲಿ ಬುಧವಾರ ದಿನವಿಡೀ ಭಕ್ತರ ದಂಡು ಕಂಡು ಬಂತು.

ಬೆಳಿಗ್ಗೆ ನಗರದ ಸಾಯಿಬಾಬಾ ಮಂದಿರ, ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನ, ವಡಕರಾಯ ದೇವಸ್ಥಾನ, ತಾಲ್ಲೂಕಿನ ಕೊಂಡನಾಯಕನಹಳ್ಳಿ ಸಮೀಪದ ಸಾಯಿಬಾಬಾ ದೇವಸ್ಥಾನ, ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ವಿವಿಧ ಭಾಗಗಳಿಂದ ಭಕ್ತರು ಬಂದು ದೇವರ ದರ್ಶನ ಪಡೆದರು. ಎಲ್ಲ ದೇವಸ್ಥಾನಗಳನ್ನು ಬಾಳೆದಿಂಡು, ಹೂಗಳಿಂದ ಅಲಂಕರಿಸಲಾಗಿತ್ತು. ಬೆಳಿಗ್ಗೆ ದೇವರಿಗೆ ವಿಶೇಷ ಪೂಜೆ ನೆರವೇರಿಸಿ, ಅಭಿಷೇಕ, ನೈವೇದ್ಯ ಸಮರ್ಪಿಸಲಾಯಿತು.

ಸಾಯಿಬಾಬಾ ಮಂದಿರದಲ್ಲಿ ದಿನವಿಡೀ ಜನಜಾತ್ರೆ ಇತ್ತು. ಸಾಯಿಬಾಬಾ ವೃತ್ತದಲ್ಲಿ ಹೆಚ್ಚಿನ ವಾಹನಗಳು ನಿಂತಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಜಿಟಿಜಿಟಿ ಮಳೆಯನ್ನೂ ಲೆಕ್ಕಿಸದೇ ಜನ ದೇಗುಲಕ್ಕೆ ತೆರಳಿ, ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಹಂಪಿ ಶ್ರೀ ವ್ರತ ಆರಂಭ:

ಹಂಪಿ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರು ಬುಧವಾರ ಚಾತುರ್ಮಾಸ್ಯ ವ್ರತ ಆರಂಭಿಸಿದರು. ಬರುವ ನಾಲ್ಕು ತಿಂಗಳ ವರೆಗೆ ಸ್ವಾಮೀಜಿ ಅವರು ಮಠದಲ್ಲೇ ಇರುವರು. ಬೆಳಿಗ್ಗೆ ತುಂಗಭದ್ರಾ ನದಿಯಲ್ಲಿ ಮಿಂದೆದ್ದ ಸ್ವಾಮೀಜಿ, ಅನಂತರ ಶಂಕರಾಚಾರ್ಯರು, ತಾಯಿ ಭುವನೇಶ್ವರಿ ಹಾಗೂ ಸಾಲಿಗ್ರಾಮಗಳಿಗೆ ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.