ADVERTISEMENT

ಹಂಪಿ ಉತ್ಸವ: ಗುರುಕಿರಣ್ ಸಂಗೀತಕ್ಕೆ ಹುಚ್ಚೆದ್ದು ಕುಣಿದ ಪ್ರೇಕ್ಷಕರು

ಮಾರ್ಚ್‌ 6ರವರೆಗೆ ನಡೆಯಲಿರುವ ‘ವಿಜಯನಗರ ವೈಭವ’ ಧ್ವನಿಬೆಳಕು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2025, 8:08 IST
Last Updated 3 ಮಾರ್ಚ್ 2025, 8:08 IST
<div class="paragraphs"><p>ಗುರುಕಿರಣ್‌ ತಂಡದ ರಸಮಂಜರಿ</p></div>

ಗುರುಕಿರಣ್‌ ತಂಡದ ರಸಮಂಜರಿ

   

ಹಂಪಿ (ಹೊಸಪೇಟೆ): ಹಂಪಿ ಉತ್ಸವದ ಕೊನೆಯ ದಿನ ಭಾನುವಾರ ಮಧ್ಯರಾತ್ರಿ ಹಂಪಿಯ ಬೃಹತ್‌ ಬಂಡೆಗಳೂ ಒಡೆದುಬಿಡುತ್ತವೆಯೇನೋ ಎಂಬಂತೆ ಮೂಡಿಬಂದ ಗುರುಕಿರಣ್‌ ತಂಡದ ರಸಮಂಜರಿ, ಸೇರಿದ್ದ ಲಕ್ಷಾಂತರ ಪ್ರೇಕ್ಷಕರನ್ನು ಕುರ್ಚಿಯಲ್ಲಿ ಕುಳ್ಳಿರಿಸದಂತೆ ಮಾಡಿಬಿಟ್ಟಿತು.

ಗುರುಕಿರಣ್‌ ಅಂದರೆ ರಾಕ್‌ ಹಾಡುಗಳಿಗೆ ಖ್ಯಾತ. ಹಂಪಿಯ ‘ರಾಕ್‌’ಗಳ ನಡುವೆ ಇಂತಹ ಸಂಗೀತ ಸೇರಿಕೊಂಡರೆ ಹೇಗಿರುತ್ತದೆ ಎಂಬುದಕ್ಕೆ ಹಂಪಿ ಉತ್ಸವ ಮತ್ತೊಮ್ಮೆ ಸಾಕ್ಷಿಯಾಯಿತು. ಹಂಪಿಯಲ್ಲಿ ಈ ಹಿಂದೆ ಯುವ ಉತ್ಸವ ನಡೆದಿದ್ದಾಗ ಇದೇ ಗುರುಕಿರಣ್‌ ಇಲ್ಲಿ ಕಾರ್ಯಕ್ರಮ ನೀಡಿದ್ದನ್ನು ನೆನಪಿಸುತ್ತಲೇ ತಮ್ಮ ಮತ್ತು ತಂಡದ ಅದ್ಭುತ ರಾಕ್‌ ಮಿಶ್ರಿತ ಸಿನಿಮಾ ಗೀತೆಗಳ ಹಾಡುಗಳಿಗೆ ನಾಂದಿ ಹಾಡಿದರು.

ADVERTISEMENT

‘ಎಲ್ಲೋ ಜೋಗಪ್ಪ ನಿನ್ನ ಅರಮನೆ, ಹಂಪಿಯಲ್ಲೇ ನನ್ನ ಅರಮನೆ’ ಎಂದು ವೇದಿಕೆ ಪ್ರವೇಶಿಸುತ್ತಿದ್ದಂತೆಯೇ ನೆರೆದಿದ್ದ ಸಾವಿರಾರು ಜನ ಶಿಳ್ಳೆ ಮತ್ತು ಕೇಕೆ ಹಾಕಿ ಸ್ವಾಗಿಸಿದರು, ಸಹಕಲಾವಿದರೊಂದಿಗೆ ಹೆಜ್ಜೆ ಹಾಕುತ್ತಿದ್ದರೆ ಇತ್ತ ಪ್ರೇಕ್ಷಕರು ಅವರೊಂದಿಗೆ ನಿಂತಲ್ಲೇ ಸಾಥ್ ನೀಡಿದರು. ರಾತ್ರಿ 11ರ ಸುಮಾರಿಗೆ ಪ್ರೇಕ್ಷಕರನ್ನು ಕುರ್ಚಿಯಲ್ಲಿ ಕುಳ್ಳಿರಿಸದಂತೆ ಮಾಡಿಬಿಟ್ಟಿದ್ದ ಗುರುಕಿರಣ್‌ ಮಧ್ಯರಾತ್ರಿ 1.30ರವರೆಗೂ ಇದೇ ಜೋಷ್‌ ಉಳಿಸಿಕೊಂಡರು. ನಡುವೆ ಅರ್ಧ ಗಂಟೆ ಬೇರೆ ಕಾರ್ಯಕ್ರಮಗಳಿದ್ದವು. ಯುವಕರು, ಯುವತಿಯರು ಪ್ರತಿಯೊಂದು ಹಾಡಿಗೂ ಹೆಜ್ಜೆ ಹಾಕಿದರು, ವಯಸ್ಕರು ಕುಳಿತಲ್ಲಿಯೇ ಕಾಲಲ್ಲಿ ತಾಳ ಹಾಕುತ್ತಿದ್ದರು.

‘ಏಳು ಮಲೆ ಮ್ಯಾಲೇರಿ ಕುಂತ ನಮ್ಮ ಮಹಾದೇವ, ಹಂಗೆ ಕುಣಿರೋ, ಹಿಂಗೆ ಕುಣಿರೋ’ ಎನ್ನುತ್ತಿದ್ದಂತೆಯೇ ಯುವಕ, ಯುವತಿಯರಿಗೆ ಕುರ್ಚಿ ಇದೆ ಎಂಬುದೇ ಮರೆತು ಹೋಗಿತ್ತು. ವೇದಿಕೆಯಲ್ಲಿ ಬಹುತೇಕ ಪ್ರತಿಯೊಂದು ಹಾಡಿನಲ್ಲೂ ಹತ್ತಾರು ಬಾರಿ ಬೆಂಕಿಯ ಉಂಡೆಗಳು ಆಗಸಕ್ಕೆ ನೆಗೆಯುತ್ತಲೇ ಇದ್ದವು, ಕೆಲವೊಮ್ಮೆ ಬಾಣ ಬಿರುಸುಗಳೂ ಆಗಸಕ್ಕೆ ಚಿಮ್ಮಿದವು. ಒಂದು ಅರ್ಥದಲ್ಲಿ ಸಂಗೀತದ ಅಬ್ಬರ ಅಂದರೆ ಹೀಗಿರುತ್ತದೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ ಎಂಬಂತಿತ್ತು. 75 ಸಾವಿರಕ್ಕೂ ಅಧಿಕ ಪ್ರೇಕ್ಷಕರಿದ್ದರೂ, ಎಂ.ಪಿ.ಪ್ರಕಾಶ್ ವೇದಿಕೆ ಒಂದು ಸಿನಿಮಾ ಸೆಟ್‌ನಂತೆ, ರಿಯಾಲಿಟಿ ಷೋ ಶೂಟಿಂಗ್ ಸ್ಥಳದಂತೆ ಭಾಸವಾಯಿತು.

ಗುರುಕಿರಣ್‌ ಅವರು ಬಳಿಕ ಗಾಯಕಿ ಚೈತ್ರ ಮತ್ತು ಇತರ ಹಲವು ಸಹ ಕಲಾವಿದರ ಜತೆಗೆ ಸೇರಿಕೊಂಡು ಚಿಕುಬುಕು ರೈಲು, ಜೋಗಯ್ಯ, ಎಲ್ಲೋ ಜೋಗಪ್ಪ ನಿನ್ನ ಅರಮನೆ, ಗರತಿಯಾಂಗೆ ಸೆರಗಾಕೊಂಡು, ಬಿನ್ ಲ್ಯಾಡೆನ್ ನನ್ನ ಮಾಮ, ಮಾರಿಕಣ್ಣು ಹೋರಿಮ್ಯಾಲೆ, ಅವ್ವ ಕಣೋ ಕನ್ನಡ, ಮೈಲಾಪುರ ಮೈಲಾರಿ, ಮಮಾಮ ಮಜಾ ಮಾಡು, ಯಾರೇ ನೀನು ರೋಜ ಹೂವೆ, ಬಂಡಲ್ ಬಡಾಯಿ ಮಹಾದೇವ, ಕೆಂಚಾಲೋ ಮಂಚಾಲೋ, ಮಸ್ತು, ಮಸ್ತು ಹುಡುಗಿ ಬಂದ್ಳು ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿಬಿಟ್ಟರು. ನಡುವೆ ಶಂಕರ್‌ಗುರು ಚಲನಚಿತ್ರದ ಲವ್‍ಮಿ ಆರ್ ಕಿಸ್ ಮಿ ಗೀತೆಯನ್ನು ರಾಕ್ ಮೂಲಕ ಹಾಡಿ ರಂಜಿಸಿದರು.

ಗಾಯಕಿ ಮಾಲ್ಗುಡಿ ಶುಭಾ ‘ಎಲೋ ಚಂದಮಾಮ, ಲವ್ವೇ ಖುಷಿ’ ಹಾಡಿ ಎಲ್ಲ ವಯಸ್ಸಿನ ಪ್ರೇಕ್ಷಕರನ್ನು ಕುಣಿಯುವಂತೆ ಮಾಡಿದರು. ಗಾಯಕಿ ದಿವ್ಯಾ ರಾಮಚಂದ್ರ, ಗಾಯಕ ಗಣೇಶ್ ಕಾರಂತ್ ಅವರೂ ಪ್ರೇಕ್ಷಕರನ್ನು ಎಲ್ಲೂ ಕದಲದಂತೆ ಮಾಡಿದರು.

ಮಧ್ಯರಾತ್ರಿ 1.30 ಆಗಿದ್ದರೂ, ನೆರೆದಿದ್ದ ಜನರ ಉತ್ಸಾಹ ಕುಂದಿರಲಿಲ್ಲ, ಅಂತಿಮವಾಗಿ ಅಪ್ಪು ಡ್ಯಾನ್ಸ್, ‘ಹೊಸ ಗಾನ ಬಜಾನಾ‘ ಮೂಲಕ ಕಾರ್ಯಕ್ರಮವನ್ನು ಮುಗಿಸಿದರು. 10 ನಿಮಿಷಗಳ ಕಾಲ ಬಾಣ ಬಿರುಸಿನ ಪ್ರದರ್ಶನವೂ ಇತ್ತು. ಆ ಮೂಲಕ ಹಂಪಿ ಉತ್ಸವಕ್ಕೆ ವಿಧ್ಯುಕ್ತ ತೆರೆ ಬಿತ್ತು.

ದಿಗಂತ್‌–ಐಂದ್ರಿತಾ ರೈ ನೃತ್ಯ: ಇದಕ್ಕೆ ಮೊದಲು ನಟ ದಿಗಂತ್, ನಟಿ ಐಂದ್ರಿತಾ ರೈ ದಂಪತಿ ‘ಜಿಯಾಥೇರಿ ಜಿಯಾಮೇರಿ’, ‘ನಾ ನಗುವ ಮೊದಲೇನೆ’ ಗೀತೆಗೆ ಹೆಜ್ಜೆ ಹಾಕಿದರು. ದಿಗಂತ್ ಅವರು ತಮ್ಮ ಟ್ರೇಡ್‌ಮಾರ್ಕ್‌ ಲೈಫ್ ಇಷ್ಟೇನೆ, ಪಂಚರಂಗಿ ಪಂವ್, ಪಂವ್ ಹೇಳಲು ಮರೆಯಲಿಲ್ಲ.

ಮಾಳು ನಿಪನಾಳ: ಉತ್ತರ ಕರ್ನಾಟಕದ ಖ್ಯಾತ ಜಾನಪದ ಗಾಯಕ ಮಾಳು ನಿಪನಾಳ ಅವರು ಹಾಡಿದ ‘ನಾ ಡ್ರೈವರಾ’ ಗೀತೆ ಹಂಪಿಯ ಉದ್ದಗಲಕ್ಕೆ ಮಾರ್ದನಿಸಿತು.

ಮೈನವಿರೇಳಿಸಿದ ಹುಲಿ ಕುಣಿತ: ಮಂಗಳೂರಿನ ತರುಣ್ ಡ್ಯಾನ್ಸ್ ಯೂನಿಟ್‍ನಿಂದ ಹುಲಿ ಕುಣಿತ ಮೈನವಿರೇಳಿಸಿತು.

4 ಲಕ್ಷ ಮಂದಿ ಭಾಗಿ: ಮೂರು ದಿನಗಳ ಹಂಪಿ ಉತ್ಸವದಲ್ಲಿ ಸುಮಾರು 4 ಲಕ್ಷ ಪ್ರೇಕ್ಷಕರು ಆರು ವೇದಿಕೆಗಳಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಗೂ ವಸ್ತುಪ್ರದರ್ಶನಗಳ ಮೆರುಗನ್ನು ಸವಿದರು. ಮೊದಲ ದಿನ ಸುಮಾರು 1 ಲಕ್ಷ, 2ನೇ ಮತ್ತು 3ನೇ ದಿನ ತಲಾ 1.50 ಲಕ್ಷ ಮಂದಿ ಹಂಪಿ ಉತ್ಸವಕ್ಕೆ ಬಂದಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಳೆದ ವರ್ಷ 5 ಲಕ್ಷದಷ್ಟು ಮಂದಿ ಬಂದಿದ್ದರು.

ಧ್ವನಿ ಬೆಳಕು ಕಾರ್ಯಕ್ರಮ ಮುಂದುವರಿದಿದ್ದು, ಮಾರ್ಚ್‌ 6ರವರೆಗೆ ಅದು ರಾತ್ರಿ 7ರಿಂದ 9.30ರವರೆಗೆ ಆನೆಲಾಯ ಪ್ರದೇಶದಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.