ADVERTISEMENT

ಹಗರಿಬೊಮ್ಮನಹಳ್ಳಿ | ಮಠಗಳಿಂದ ಸಂಸ್ಕಾರ, ಕಲೆ, ಸಂಸ್ಕೃತಿ ಉಳಿವು: ಎಂ.ಎಸ್.ದಿವಾಕರ್

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2025, 13:26 IST
Last Updated 9 ಫೆಬ್ರುವರಿ 2025, 13:26 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ನಂದಿಪುರದಲ್ಲಿ ಚಲನಚಿತ್ರ ನಟ ಶ್ರೀಧರ್ ಅವರಿಗೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಚರಂತಾರ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಮಠಾಧೀಶರು, ಮುಖಂಡರು ಭಾಗವಹಿಸಿದ್ದರು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ನಂದಿಪುರದಲ್ಲಿ ಚಲನಚಿತ್ರ ನಟ ಶ್ರೀಧರ್ ಅವರಿಗೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಚರಂತಾರ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಮಠಾಧೀಶರು, ಮುಖಂಡರು ಭಾಗವಹಿಸಿದ್ದರು   

ಹಗರಿಬೊಮ್ಮನಹಳ್ಳಿ: ಚಲನಚಿತ್ರ ನಟ ಶ್ರೀಧರ್ ಸೇರಿದಂತೆ 6 ಮಂದಿಗೆ 2025ನೇ ಸಾಲಿನ ‘ಚರಂತಾರ್ಯ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತಾಲ್ಲೂಕಿನ ನಂದಿಪುರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಪ್ರಶಸ್ತಿ ಪ್ರದಾನ ಮಾಡಿದರು.

ಇವರೊಂದಿಗೆ ಹರಿಹರದ ಸಾಹಿತಿ ಎಚ್.ಎ.ಭಿಕ್ಷಾವರ್ತಿಮಠ, ಕಲಬುರಗಿಯ ಸಾಹಿತಿ ಸಂಗೀತಾ ಪಾಟೀಲ್ ಹಿರೇಮಠ್, ಗಂಗಾವತಿಯ ಶರಣಪ್ಪ ಎನ್.ಮೆಟ್ರಿ, ಆಯುರ್ವೇದ ವೈದ್ಯ ಸುನಿಲ್ ಅರಳಿ, ಹಂಪಿ ಕನ್ನಡ ವಿವಿಯ ಸಹಾಯಕ ಕುಲಸಚಿವ ಎಂ.ಎಂ.ಶಿವಪ್ರಕಾಶ್  ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀಧರ್, ‘ಚರಂತೇಶ್ವರರು ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಕೃಷಿ ಲೋಕವನ್ನು ಕಟ್ಟಿದ್ದಾರೆ. ಅದನ್ನು ಮಹೇಶ್ವರ ಸ್ವಾಮೀಜಿ ನೀರೆರೆದು ಪೋಷಿಸುತ್ತಿದ್ದಾರೆ. ಇದುವರೆಗೂ ಸರ್ಕಾರದಿಂದ ಮತ್ತು ದೇಶ ವಿದೇಶಗಳಿಂದ ಹತ್ತಾರು ಪ್ರಶಸ್ತಿ ಬಂದಿದ್ದರೂ ಕೇವಲ ಅವು ಪ್ರಮಾಣಪತ್ರಗಳಾಗಿವೆ. ಇಲ್ಲಿ ದೊರೆತ ಪ್ರಶಸ್ತಿ ಮಾತ್ರ ಆತ್ಮಕ್ಕೆ ಸಂಬಂಧಿಸಿದ ಪ್ರಶಸ್ತಿಯಾಗಿದೆ’ ಎಂದರು.

ADVERTISEMENT

ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ‘ಮಠಗಳಿಂದ ಸಂಸ್ಕಾರದ ಜತೆಯಲ್ಲಿ ಕಲೆ ಮತ್ತು ಸಂಸ್ಕೃತಿ ಉಳಿದಿದೆ. ಪ್ರತಿಭೆ ಪ್ರಸ್ತುತಪಡಿಸಲು ಜನಸಂದಣಿ ಅಗತ್ಯ ಇಲ್ಲ. ಆಸಕ್ತಿ ಇರುವ 100 ಜನ ಪ್ರೇಕ್ಷಕರು ಸಾಕು. ಪ್ರಶಸ್ತಿ ಪಡೆದ ಎಲ್ಲರೂ ಸಾಹಿತ್ಯ ಮತ್ತು ಸಂಸ್ಕೃತಿ ಸೇವೆಯಲ್ಲಿ ತೊಡಗಿದವರಾಗಿದ್ದಾರೆ. ಮಠ ಅವರನ್ನು ಗುರುತಿಸಿರುವುದು ಶ್ಲಾಘನೀಯ’ ಎಂದರು.

‘ಹಂಪಿ ಉತ್ಸವದಲ್ಲಿ ಭಾಗವಹಿಸಲು ಕಲಾವಿದರ ಅರ್ಜಿ ಬಂದಿರುವುದನ್ನು ಗಮನಿಸಿದರೆ ಇಡೀ ಒಂದು ತಿಂಗಳು ಉತ್ಸವ ಮಾಡಬೇಕಾಗುತ್ತದೆ. ಸಾವಿರಾರು ಅರ್ಜಿಗಳು ಬಂದಿವೆ. ಎಲ್ಲರೂ ಅರ್ಹರೆ. ಕೆಲವರಿಗೆ ಮಾತ್ರ ಉತ್ಸವಗಳಲ್ಲಿ ಅವಕಾಶ ದೊರೆಯುತ್ತದೆ’ ಎಂದರು.

ತಾಲ್ಲೂಕಿನ ತಂಬ್ರಹಳ್ಳಿಯಲ್ಲಿರುವ ಪುಷ್ಕರಣಿಯನ್ನು ಜೀರ್ಣೋದ್ಧಾರಗೊಳಿಸಲು ಸಂಬಂಧಿಸಿದ ಇಲಾಖೆಗೆ ಸೂಚಿಸುವುದಾಗಿ ತಿಳಿಸಿದರು.

ಕೊಟ್ಟೂರು-ಉಜ್ಜಿಯಿನಿ ಪೀಠದ ಸೋಮಶಂಕರ ಸ್ವಾಮೀಜಿ, ಬೆಣ್ಣಿಹಳ್ಳಿಯ ಪಂಚಾಕ್ಷರ ಸ್ವಾಮೀಜಿ, ಗದ್ದಿಕೇರಿಯ ಚರಂತೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರೊ.ಎಚ್.ಎ.ಭಿಕ್ಷಾವರ್ತಿಮಠ, ಎಸ್.ವಿ.ಪಾಟೀಲ್, ಎಚ್.ಎಂ.ಗುರುಬಸವರಾಜ ಮಾತನಾಡಿದರು. ತಹಶೀಲ್ದಾರ್ ಆರ್.ಕವಿತಾ, ಕೆ.ಎಂ.ಕುಸುಮಾ, ಸುಗುಣ, ಕೆ.ಶಾರದಾ ಮಂಜುನಾಥ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.