ಹೊಸಪೇಟೆ (ವಿಜಯನಗರ): ಮೈಸೂರು ದಸರಾದ ಬೇರುಗಳು ಹರಡಿರುವುದು ಹಂಪಿಯಲ್ಲಿ. ಗತಕಾಲದ ಆಚರಣೆ ಹೇಗಿದ್ದಿರಬಹುದು ಎಂಬುದನ್ನು ಮತ್ತೆ ನೆನಪಿಸುವಂತಹ ದೇವರೇ ಬನ್ನಿ ಮುಡಿಯುವ ಆಚರಣೆ ಹಂಪಿ ಸಮೀಪದ ನಾಗೇನಹಳ್ಳಿಯ ಧರ್ಮದಗುಡ್ಡದಲ್ಲಿ ಸಂಭ್ರಮದಿಂದ ನಡೆಯಿತು.
ಧರ್ಮದಗುಡ್ಡದ ಚನ್ನಬಸವೇಶ್ವರ ದೇವಸ್ಥಾನ ವಿಜಯನಗರ ಕಾಲದಲ್ಲೇ ಸ್ಥಾಪನೆಯಾದ ದೇವಾಲಯವಾಗಿದ್ದು, ಮಹಾನವಮಿಯ ದಿನದಂದೇ ದೇವಸ್ಥಾನದ ಜಾತ್ರೆ ನಡೆಯುತ್ತದೆ. ಅದೇ ವೇಳೆಗೆ ಹೊಸಪೇಟೆ ಮತ್ತು ಕಮಲಾಪುರ ಭಾಗದಿಂದ ಪಲ್ಲಕ್ಕಿಗಳಲ್ಲಿ ಬರುವ ದೇವತೆಗಳು ಚನ್ನಬಸವೇಶ್ವರನ ಜತೆಯಲ್ಲಿ ಶಮೀವೃಕ್ಷಕ್ಕೆ ಐದು ಬಾರಿ ಸುತ್ತು ಹಾಕಿ ಬನ್ನಿ ಮುಡಿಯುವುದು ಇಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದ್ದು, 20 ಸಾವಿರಕ್ಕೂ ಅಧಿಕ ಭಕ್ತರ ಸಮ್ಮುಖದಲ್ಲಿ ಈ ಆಚರಣೆ ವೈಭವದಿಂದ ನೆರವೇರಿತು.
ಸಂಜೆಯಿಂದ ಸಂಭ್ರಮ: ಹೊಸಪೇಟೆಯ ಏಳು ಕೇರಿಗಳಿಂದ ಪಲ್ಲಕ್ಕಿಗಳು ಮಧ್ಯಾಹ್ನದ ನಂತರ ಸುಮಾರು 5 ಕಿ.ಮೀ.ದೂರದ ನಾಗೇನಹಳ್ಳಿಯ ಧರ್ಮದಗುಡ್ಡದತ್ತ ಧಾವಿಸಿದವು. ಪಲ್ಲಕ್ಕಿಗಳನ್ನು ಹೊತ್ತ ಯುವಕರು ಬಹುತೇಕ ಓಡುತ್ತಲೇ ಧರ್ಮಗುಡ್ಡದತ್ತ ಸಾಗುವುದು ಇಲ್ಲಿ ವಿಶೇಷವಾಗಿ ಕಾಣಿಸುತ್ತದೆ. ಚನ್ನಬಸವೇಶ್ವರನ ಉತ್ಸವ ಮೂರ್ತಿಯನ್ನು ದೇವಸ್ಥಾನದಲ್ಲಿ ಸಜ್ಜುಗೊಳಿಸಿದ ಪಲ್ಲಕ್ಕಿಯಲ್ಲಿ ಇರಿಸಲಾಗಿದ್ದರೆ, ಅದರ ಪಕ್ಕದಲ್ಲಿ ಬಾಣದಕೇರಿಯ ನಿಜಲಿಂಗಮ್ಮ, ಅದರ ಪಕ್ಕದಲ್ಲಿ ಮ್ಯಾಸಕೇರಿಯ ಹುಲಿಗೆಮ್ಮ, ಕೊಂಗಮ್ಮ ಪಲ್ಲಕ್ಕಿ ಇರಿಸಲಾಯಿತು. ಇನ್ನೊಂದು ಬದಿಯಲ್ಲಿ ತಳವಾರಕೇರಿಯ ರಾಂಪುರ ದುರ್ಗಮ್ಮ ದೇವಿಯ ಪಲ್ಲಕ್ಕಿ ಇರಿಸಲಾಯಿತು.
ಚನ್ನಬಸವೇಶ್ವರ ಗರ್ಭಗುಡಿಯ ಸಮೀಪ ಇಷ್ಟೇ ಪಲ್ಲಕ್ಕಿಗಳನ್ನು ಇಡಲು ಸ್ಥಳ ಇರುವ ಕಾರಣ, ಉಳಿದ ಕೇರಿಗಳ ಪಲ್ಲಕ್ಕಿಗಳನ್ನು ಸಮೀಪದ ನಿಜಲಿಂಗಮ್ಮ ಗುಡಿಯ ಮುಂದೆ ಸಾಲಾಗಿ ಇರಿಸಲಾಯಿತು. ಬಳಿಕ ಚನ್ನಬಸವೇಶ್ವರನ ಪಲ್ಲಕ್ಕಿ ಸಮೀಪದ ಶಮೀವೃಕ್ಷದತ್ತ ತೆರಳಿದಂತೆ ಉಳಿದ ಪಲ್ಲಕ್ಕಿಗಳೂ ಅದನ್ನು ಹಿಂಬಾಲಿಸಿದವು.
ಶಮೀವೃಕ್ಷಕ್ಕೆ ಎಲ್ಲಾ ಪಲ್ಲಕ್ಕಿಗಳೂ ಐದು ಸುತ್ತ ಬರುತ್ತವೆ. ಬನ್ನಿಯನ್ನು ಆಗ ಪಲ್ಲಕ್ಕಿಗಳಿಗೆ ಇಡಲಾಗುತ್ತದೆ. ಇದನ್ನೇ ಸ್ವತಃ ದೇವತೆಗಳೇ ಬನ್ನಿ ಮುಡಿಯುವ ಸಂಪ್ರದಾಯ ಎಂದು ಕರೆಯಲಾಗುತ್ತದೆ. ಸಾವಿರಾರು ಜನರು ಶಮೀವೃಕ್ಷದ ಸುತ್ತ ನೆರೆದಿದ್ದಂತೆಯೇ ಪಲ್ಲಕ್ಕಿಗಳ ಮೆರವಣಿಗೆ, ಬನ್ನಿ ಮುಡಿಯುವ ಸಂಭ್ರಮ ಗೋಧೂಳಿ ಸಮಯದಲ್ಲಿ ಸಂಪನ್ನವಾಯಿತು.
ಹೊಸಪೇಟೆಯ ಕೇರಿಗಳಿಂದ ಪಲ್ಲಕ್ಕಿಗಳು ಸಂಭ್ರಮದಿಂದ ಧರ್ಮದಗುಡ್ಡಕ್ಕೆ ಬಂದಿದ್ದವು. ಮತ್ತೊಂದೆಡೆ ಕಮಲಾಪುರ ಭಾಗದಿಂದ ಮನ್ಮಥಕೇರಿಯ ನರೆಗಲ್ಲಮ್ಮ, ಬಂಡೆಕೇರಿಯ ಹುಲಿಗೆಮ್ಮ, ಇನ್ನೊಂದು ಕೇರಿಯ ತಾಯಮ್ಮ ಸಹಿತ ನಾಲ್ಕು ಪಲ್ಲಕ್ಕಿಗಳು ಬಂದಿದ್ದವು. ನರಸಾಪುರದಿಂದ ನಿಜಲಿಂಗಪ್ಪ ದೇವಿಯ ಪಲ್ಲಕ್ಕಿ ಬಂದಿದ್ದರೆ, ಬಸವನದುರ್ಗದಿಂದ ನಿಜಲಿಂಗಮ್ಮ, ಹೊಸಪೇಟೆ ಛಲವಾದಿಕೇರಿಯಿಂದ ಎಲ್ಲಮ್ಮ, ಕೊಂಡನಾಯಕಹಳ್ಳಿಯ ಪಲ್ಲಕ್ಕಿ, ಅನಂತಶಯನಗುಡಿಗಳ ಹುಲಿಗೆಮ್ಮ ಪಲ್ಲಕ್ಕಿಗಳೂ ಬಂದಿದ್ದವು. ಬನ್ನಿ ಮುಡಿದ ಬಳಿಕ ದೇವತೆಗಳು ಅಲ್ಲಿ ಒಂದು ಕ್ಷಣವೂ ನಿಲ್ಲದೆ ತಮ್ಮ ಕೇರಿಗಳತ್ತ ತೆರಳುತ್ತವೆ. ಹೀಗೆ ರಾತ್ರಿ 8ರ ಮೊದಲು ಎಲ್ಲಾ ದೇವತೆಗಳೂ ತಮ್ಮ ಕೇರಿಗಳು ಮತ್ತು ನೆಲೆಗಳತ್ತ ತೆರಳಿದವು.
ಹೊಸಪೇಟೆಯ ಏಳು ಕೇರಿಗಳು ಯಜಮಾನರು (ಮುಖಂಡರು), ಕಮಲಾಪುರ ಇತರ ಭಾಗಗಳ ಯಜಮಾನರು ಈ ಪಲ್ಲಕ್ಕಿಗಳ ನೇತೃತ್ವ ವಹಿಸಿದ್ದರು. ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಅಧ್ಯಕ್ಷ ಎಚ್.ಎನ್.ಎಫ್. ಮೊಹಮ್ಮದ್ ಇಮಾಂ ನಿಯಾಜಿ, ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಉಪಾಧ್ಯಕ್ಷ ರಮೇಶ್ ಗುಪ್ತ, ಎಸ್‌ಪಿ ಎಸ್.ಜಾಹ್ನವಿ, ಕೊಪ್ಪಳದ ಸಮಾಜ ಸೇವಕಿ ರಶ್ಮಿ ಹಿಟ್ನಾಳ್ ಇತರರು ಬಂದಿದ್ದರು. ಡಿವೈಎಸ್‌ಪಿ ಟಿ.ಮಂಜುನಾಥ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಬಿಡುವು ನೀಡಿದ ಮಳೆ, ಸಂಭ್ರಮ ಇಮ್ಮಡಿ | ಸಾವಿರಾರು ಮಂದಿ ಭಾಗಿ | ಪೊಲೀಸರಿಂದ ಬಿಗಿ ಬಂದೋಬಸ್ತ್
‘ಗುಡ್ಡದ ಅಪಾಯಕಾರಿ ಬಂಡೆ ಏರಲು ಬಿಡಬೇಡಿ’
ಧರ್ಮದಗುಡ್ಡದ ಚನ್ನಬಸವೇಶ್ವರ ದೇವಸ್ಥಾನದ ಮೇಲ್ಭಾಗದಲ್ಲಿ ಬಂಡೆಗಲ್ಲುಗಳಿದ್ದು ಅದರ ತುತ್ತು ತುದಿಯಲ್ಲಿ ನಾಲ್ಕಾರು ಯುವಕರು ಹತ್ತಿ ಜಾತ್ರೆಯ ವೀಕ್ಷಣೆ ಮಾಡುತ್ತಿರುವುದು ಕಾಣಿಸಿತು. ಅದು ಅತ್ಯಂತ ಅಪಾಯಕಾರಿ ಸ್ಥಳ ಒಂದು ವೇಳೆ ಆ ಯುವಕರು ಕಾಲುಜಾರಿ ಬಿದ್ದರೆ ಅವರು ಮಾತ್ರವಲ್ಲದೆ ಕೆಳಗಿರುವ ಹತ್ತಾರು ಮಂದಿ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ. ಮುಂದಿನ ವರ್ಷದಿಂದ ಇದಕ್ಕೆ ಅವಕಾಶ ಕೊಡಬಾರದು ಎಂದು ಸ್ಥಳೀಯ ಹಲವು ಮುಖಂಡರು ಮನವಿ ಮಾಡಿದರು.
ರಾತ್ರಿಯಿಡೀ ಸಂಭ್ರಮ
ನಗರದ ಕೇರಿಗಳಿಗೆ ದೇವತೆಗಳು ಧರ್ಮದಗುಡ್ಡದಿಂದ ಮರಳಿದ ಬಳಿಕ ಕೇರಿಗಳಲ್ಲಿ ಡೊಳ್ಳುಕುಣಿತ ಭಜನೆ ಕೋಲಾಟದಂತಹ ಸಾಂಸ್ಕೃತಿಕ ಸಾಹಸ ಪ್ರದರ್ಶನಗಳು ಬೆಳಿಗ್ಗೆಯವರೆಗೂ ನಡೆದವು. ಈ ಮೂಲಕ ಕೇರಿಗಳು ಅಮ್ಮಂದಿರ ಜತೆಗೆ ಜಾಗರಣೆ ಆಚರಿಸಿದವು. ದೇವಿಯರ ಅಲಂಕಾರ ಗುಡಿ ಪಲ್ಲಕ್ಕಿಗಳ ಅಲಂಕಾರ ವಿಶೇಷವಾಗಿ ಗಮನ ಸೆಳೆಯಿತು. ಕೃಷ್ಣದೇವರಾಯ ಮದಕರಿನಾಯಕ ಮೊದಲಾದ ಐತಿಹಾಸಿಕ ಪುರುಷರ ಪೋಷಾಕು ತೊಟ್ಟವರು ಕೋಲಾಟವನ್ನು ನಿರ್ದೇಶಿಸುತ್ತಿದ್ದ ದೃಶ್ಯವೂ ಹೃದಯಂಗಮವಾಗಿತ್ರು. ಗುರುವಾರ ಕೇರಿಗಳಲ್ಲಿ 'ಊರಬನ್ನಿ' ಆಚರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.