
ಹೊಸಪೇಟೆ (ವಿಜಯನಗರ): ಸುಮಾರು 600 ವರ್ಷಗಳ ಹಿಂದೆ ಸಂಪತ್ತಿನಲ್ಲಿ, ಕಲೆ, ಸಂಸ್ಕೃತಿಯಲ್ಲಿ ಜಗತ್ತಿನ ಕಣ್ಣು ಕುಕ್ಕಿದ್ದ ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಮತ್ತೆ ನೆನಪಿಸುವ ನಿಟ್ಟಿನಲ್ಲಿ ಹಂಪಿ ಉತ್ಸವ–26 ಶುಕ್ರವಾರದಿಂದ ವಿಧ್ಯುಕ್ತವಾಗಿ ಆರಂಭವಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಜೆ 6ಕ್ಕೆ ಚಾಲನೆ ನೀಡಲಿದ್ದಾರೆ.
ಇದಕ್ಕೆ ಪೂರ್ವಭಾವಿಯಾಗಿ ಗುರುವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಹೆಲಿಕಾಪ್ಟರ್ ಮೂಲಕ ವಿಶ್ವ ಪಾರಂಪರಿಕ ತಾಣವನ್ನು ವೀಕ್ಷಿಸುವ ‘ಹಂಪಿ ಬೈ ಸ್ಕೈ’ ಆರಂಭವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಸಂಜೆ ಅಧಿಕೃತವಾಗಿ ಉದ್ಘಾಟಿಸಿದರು. ಸಂಜೆ ಹೊಸಪೇಟೆಯಲ್ಲಿ ವಸಂತ ವೈಭವದಲ್ಲಿ ಆನೆ ಮೇಲೆ ವಿರಾಜಮಾನವಾಗಿದ್ದ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಿದರು. ಈ ಮೂಲಕ ಹಂಪಿ ಉತ್ಸವಕ್ಕೆ ಭರ್ಜರಿ ಪ್ರಚಾರದ ಜತೆಗೆ ಸಡಗರದ ಬುನಾದಿಯೂ ದೊರೆಯಿತು.
ಬೆಳಿಗ್ಗೆ ಕಮಲಾಪುರದ ತಾತ್ಕಾಲಿಕ ಹೆಲಿಪ್ಯಾಡ್‌ನಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಷಾ ಪೂಜೆ ನೆರವೇರಿಸುವ ಮೂಲಕ ಹಂಪಿ ಬೈ ಸ್ಕೈಗೆ ಚಾಲನೆ ನೀಡಿದರು. ಫೆ.16ರಂದು ಆಸಕ್ತ 100 ಪೌರಕಾರ್ಮಿಕರಿಗೆ ವಿಶೇಷ ರಿಯಾಯಿತಿ ದರದಲ್ಲಿ ಹಂಪಿ ದರ್ಶನ ಮಾಡಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ವಿವೇಕಾನಂದ್, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ ಸೇರಿದಂತೆ ಇತರರು ಇದ್ದರು.
ಅದ್ಭುತ ಅನುಭವ: ‘ಹಂಪಿಯನ್ನು ಆಗಸದಿಂದ ನೋಡುವುದು ಅದ್ಭುತ ಅನುಭವ. ಜಗತ್ತಿನ ಅತಿ ದೊಡ್ಡ ಬಯಲು ವಸ್ತುಸಂಗ್ರಹಾಲಯ ಎಂದೇ ಹಂಪಿ ಖ್ಯಾತವಾಗಿರುವುದರಿಂದ ಇಲ್ಲಿಯ ಸ್ಮಾರಕಗಳನ್ನು, ದೇವಾಲಯಗಳನ್ನು ಅವುಗಳ ನೆತ್ತಿಯ ಮೇಲಿನಿಂದ ನೋಡಲು ಇದೊಂದು ಉತ್ತಮ ಅವಕಾಶ. ಎಲ್ಲಿ ನೋಡಿದರಲ್ಲಿ ಬಂಡೆಗಲ್ಲುಗಳು, ಎಳೆಬಿಸಿಲು, ಬಿರುಬಿಸಿಲಲ್ಲಿ ಅವುಗಳು ನೀಡುವ ಬಣ್ಣದ ಚಿತ್ತಾರ ವರ್ಣಿಸಲಸದಳ’ ಎಂದು ಹೆಲಿಕಾಪ್ಟರ್‌ನಲ್ಲಿ ಯಾನ ಮುಗಿಸಿ ಬಂದ ಕೆಲವು ಪ್ರಯಾಣಿಕರು ಅನುಭವ ಹಂಚಿಕೊಂಡರು.
ಹೆಲಿಕಾಪ್ಟರ್‌ನಲ್ಲಿ ಒಮ್ಮೆಗೆ 6 ಮಂದಿ ಪ್ರಯಾಣಿಸಬಹುದಾಗಿದ್ದು, ಸುಮಾರು 6 ನಿಮಿಷ ಸುತ್ತಾಟ ನಡೆಸಿ ತಂದು ಇಳಿಸುತ್ತದೆ. ವಿಜಯ ವಿಠ್ಠಲ ದೇವಸ್ಥಾನ, ಅಲ್ಲಿರುವ ಕಲ್ಲಿನ ರಥ, ತುಂಗಭದ್ರಾ ನದಿ, ಪಕ್ಕದ ಆನೆಗುಂದಿ, ಅಂಜನಾದ್ರಿ, ವಿರೂಪಾಕ್ಷ ದೇವಸ್ಥಾನ, ಆನೆಲಾಯ ಸಹಿತ ಹಲವಾರು ಸ್ಮಾರಕಗಳು, ದೇವಾಲಯಗಳನ್ನು ನೋಡಲು ಅವಕಾಶ ಸಿಗುತ್ತದೆ. ಸದ್ಯ ಒಬ್ಬರಿಗೆ ₹3,800 ದರ ನಿಗದಿಪಡಿಸಲಾಗಿದೆ.
ಈಚೆಗೆ ಪತ್ರಿಕಾಗೋಷ್ಠಿ ನಡೆಸಿದ್ದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ₹3,500 ದರ ನಿಗದಿಯಾಗಿದೆ ಎಂದಿದ್ದರು. ಬೆಳಿಗ್ಗೆ 9ರಿಂದ 11ರವರೆಗೆ ₹3,000 ಎಂದು ತಿಳಿಸಿದ್ದರು. ಆದರೆ ಹೆಲಿಕಾಪ್ಟರ್ ಸೇವೆ ನೀಡುತ್ತಿರುವ ಬೆಂಗಳೂರಿನ ಅವರೋಸ್ ಎಲ್‌ಎಲ್‌ಪಿ ಏವಿಯೇಶನ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಕಂಪನಿಯವರು ಇದಕ್ಕೆ ಒಪ್ಪಿಕೊಂಡಿಲ್ಲ ಎಂಬುದು ಗುರುವಾರ ಗೊತ್ತಾಯಿತು.
ಏರ್‌ಬಸ್ ಕಂಪನಿಯ ವಿಟಿ–ಆರ್‌ಪಿಬಿ ಗುರುವಾರ ಇಲ್ಲಿ ಹಾರಾಟ ಆರಂಭಿಸಿದ್ದು, ಏರ್‌ಬಸ್ ವಿಟಿ–ಯುಡಿವೈ ಹೆಲಿಕಾಪ್ಟರ್ ಶುಕ್ರವಾರ ಇಲ್ಲಿಗೆ ಬರಲಿದೆ.
ಉತ್ಸವ–ಶಾಸಕರಿಂದ ಸಿಎಂಗೆ ದೂರು?
ಹಂಪಿ ಉತ್ಸವದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಉತ್ಸವದ ಸಮಯದಲ್ಲೇ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ವರ್ಗಾಯಿಸಲು ಪ್ರಯತ್ನಿಸಿ ತಮ್ಮನ್ನು ಹಣಿಯಲು ಯತ್ನಿಸಲಾಗಿದೆ ಎಂದು ಸ್ಥಳೀಯ ಶಾಸಕ ಎಚ್.ಆರ್.ಗವಿಯಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಅಳಲು ತೋಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಾಸಕರನ್ನು ಸಮಾಧಾನಪಡಿಸುವ ಸಲುವಾಗಿ ಪೊಲೀಸ್ ಅಧಿಕಾರಿಯ ವರ್ಗಾವಣೆ ಆದೇಶವನ್ನು ಸಿಎಂ ಹಿಂಪಡೆದರು ಎಂದು ತಿಳಿದುಬಂದಿದೆ. ‘ಸಿಎಂ ಇರುವ ವೇದಿಕೆಯಲ್ಲಿ ನಾನಿರುತ್ತೇನೆ ಉಳಿದಂತೆ ನಾನು ಹಂಪಿ ಉತ್ಸವದ ವೇದಿಕೆ ಏರುವುದಿಲ್ಲ’ ಎಂದು ಶಾಸಕರು ತಮ್ಮ ಆಪ್ತ ವಲಯದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.