ADVERTISEMENT

ತುಂಗಭದ್ರಾ ನದಿಗೆ ಲಕ್ಷ ಕ್ಯುಸೆಕ್‌ ನೀರು: ಹಂಪಿ ಸ್ಮಾರಕಗಳು ಮುಳುಗಡೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 15:42 IST
Last Updated 13 ಜುಲೈ 2022, 15:42 IST
ತುಂಗಭದ್ರಾ ನದಿಗೆ ಲಕ್ಷ ಕ್ಯುಸೆಕ್‌ ನೀರು: ಹಂಪಿ ಸ್ಮಾರಕಗಳು ಮುಳುಗಡೆ
ತುಂಗಭದ್ರಾ ನದಿಗೆ ಲಕ್ಷ ಕ್ಯುಸೆಕ್‌ ನೀರು: ಹಂಪಿ ಸ್ಮಾರಕಗಳು ಮುಳುಗಡೆ   

ಹೊಸಪೇಟೆ (ವಿಜಯನಗರ): ಇಲ್ಲಿನ ತುಂಗಭದ್ರಾ ಜಲಾಶಯದಿಂದ ನದಿಗೆ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ ವಿಶ್ವಪ್ರಸಿದ್ಧ ಹಂಪಿಯ ಕೆಲವು ಸ್ಮಾರಕಗಳು ಬುಧವಾರ ಮುಳುಗಡೆಯಾಗಿವೆ.

ಹಂಪಿ ಪುರಂದರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆ, ಚಕ್ರತೀರ್ಥ, ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾದರೆ, ರಾಮ–ಲಕ್ಷ್ಮಣ ದೇವಸ್ಥಾನದ ಅಂಗಳಕ್ಕೆ ನೀರು ನುಗ್ಗಿದೆ. ನದಿ ತೀರದಲ್ಲಿ ಪ್ರವಾಸಿಗರು ಓಡಾಡದಂತೆ ತಡೆಯಲು ಪೊಲೀಸರನ್ನು ನಿಯೋಜಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ಸಮೀಪದ ಗಂಗಾವತಿ–ಕಂಪ್ಲಿ ಸೇತುವೆಗೆ ಸಮನಾಗಿ ನೀರು ಹರಿಯುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಹೊಸಪೇಟೆ ತಾಲ್ಲೂಕಿನ ಬುಕ್ಕಸಾಗರ–ಕಡೇಬಾಗಿಲು ಹೊಸ ಸೇತುವೆಯ ಮೂಲಕ ವಾಹನಗಳು ಸಂಚರಿಸುತ್ತಿವೆ.

ತುಂಗಭದ್ರಾ ಜಲಾಶಯದ ಒಟ್ಟು 33 ಕ್ರಸ್ಟ್ ಗೇಟ್ ಗಳ ಪೈಕಿ 31 ಗೇಟ್ ಗಳಿಂದ ನದಿಗೆ 1,15,344 ಕ್ಯುಸೆಕ್ ನೀರು ಹರಿಸಲಾಗುತ್ತಿದೆ. 1,04,494 ಕ್ಯುಸೆಕ್‌ ಒಳಹರಿವು ಇದ್ದು, 105.788 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ದ ಜಲಾಶಯದಲ್ಲಿ 99.898 ಟಿಎಂಸಿ ಅಡಿ ನೀರಿನ ಸಂಗ್ರಹವಿದ್ದು, ಹೆಚ್ಚುವರಿ ನೀರು ನದಿಗೆ ಬಿಡಲಾಗುತ್ತಿದೆ. ಒಂದೂವರೆ ಲಕ್ಷ ಕ್ಯುಸೆಕ್ ನೀರು ಯಾವುದೇ ಕ್ಷಣದಲ್ಲೂ ನದಿಗೆ ಹರಿಸಲಾಗುವುದು. ಜನ ಮುನ್ನೆಚ್ಚರಿಕೆ ವಹಿಸಬೇಕೆಂದು ಜಲಾಶಯ ಆಡಳಿತ ಮಂಡಳಿ ತಿಳಿಸಿದೆ. ಜಿಲ್ಲೆಯಲ್ಲಿ ಜಿಟಿಜಿಟಿ ಮಳೆ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.