
ಹೊಪಸೇಟೆ (ವಿಜಯನಗರ): ಮಹಾರಾಷ್ಟ್ರದ ಕೊಲ್ಲಾಪುರದಿಂದ ಹಂಪಿಗೆ ಪ್ರವಾಸ ಬಂದಿದ್ದ ಕುಟುಂಬವೊಂದರ ಸದಸ್ಯ, 20 ವರ್ಷದ ಆದಿತ್ಯ ಕುಮಾರ ಪ್ರಜಾಪತಿ ಅವರು 2 ದಿನದಿಂದ ನಾಪತ್ತೆ ಆಗಿರುವ ಕುರಿತು ಶನಿವಾರ ಹಂಪಿ ಪ್ರವಾಸಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಹಂಪಿಯ ವರಾಹ ದೇವಸ್ಥಾನದ ಹತ್ತಿರ ಮಧ್ಯಾಹ್ನ ಆದಿತ್ಯ ಕುಮಾರ ನಾಪತ್ತೆಯಾಗಿದ್ದಾರೆ ಎಂದು ಯುವಕನ ತಂದೆ ಕ್ಯಾಲಿಕುಮಾರ ಪ್ರಜಾಪತಿ ದೂರಿನಲ್ಲಿ ತಿಳಿಸಿದ್ದಾರೆ.
‘24ರಂದು ಆದಿತ್ಯ ತುಂಗಭದ್ರಾ ನದಿ ನೀರಿಗೆ ಇಳಿದಿದ್ದ. ಈಜು ಬಾರದ ಅವನಿಗೆ ಬುದ್ಧಿವಾದ ಹೇಳಿ ಕರೆತರಲಾಗಿತ್ತು. ದೇವಸ್ಥಾನದ ಹತ್ತಿರ ನಾವು ವಿಶ್ರಾಂತಿ ಪಡೆಯುವಾಗ ಕುಡಿಯುವ ನೀರು ತರಲು ಮೊಬೈಲ್ ಅನ್ನು ಅಮ್ಮನಿಗೆ ಕೊಟ್ಟು ಹೋಗಿದ್ದ. ಮತ್ತೆ ಬರಲಿಲ್ಲ’ ಎಂದು ದೂರಿನಲ್ಲಿ ವಿವರಿಸಲಾಗಿದೆ.
‘ಯುವಕನಿಗಾಗಿ ಶೋಧ ನಡೆಯುತ್ತಿದೆ. ಭಾನುವಾರ ಸಂಜೆಯವರೆಗೆ ಸುಳಿವು ಸಿಕ್ಕಿಲ್ಲ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.