
ಹೊಸಪೇಟೆ (ವಿಜಯನಗರ): ಹಂಪಿಯಲ್ಲಿ ಶೌಚಾಲಯದಂತಹ ಮೂಲಸೌಲಭ್ಯಗಳ ಕೊರತೆ ನಿವಾರಿಸುವ ನಿಟ್ಟಿನಲ್ಲಿ ‘ಟ್ರಾವೆಲರ್ಸ್ ನೂಕ್’ ಸ್ಥಾಪನೆಗೆ ಸಿದ್ಧತೆ ನಡೆದಿದ್ದು, ಹಂಪಿ ಉತ್ಸವದ ವೇಳೆ ಕನಿಷ್ಠ ಎರಡು ಇಂತಹ ಆಧುನಿಕ ಶೌಚಾಲಯ ಸಿದ್ಧವಾಗುವ ಲಕ್ಷಣ ಕಾಣಿಸಿದೆ.
ಕೋಟೆ ಅಂಜನೇಯ ಗುಡಿ ಸಮೀಪ ಚಂದ್ರಶೇಖರ ದೇವಸ್ಥಾನದ ಬಳಿ ಇಂತಹ ಒಂದು ಆಧುನಿಕ ಶೌಚಾಲಯ ಸ್ಥಾಪನೆಗೊಳ್ಳಲಿದ್ದು, ಪಂಚಾಂಗ ನಿರ್ಮಾಣವಾಗಿದೆ. ಶೌಚ ಗುಂಡಿಯನ್ನೂ ತೆಗೆಯಲಾಗಿದೆ. ಕೆಲವೇ ದಿನಗಳಲ್ಲಿ ಪೂರ್ಣ ತಯಾರಾದ ಶೌಚಾಲಯ ಕಟ್ಟಡವೇ ಕಂಟೇನರ್ ರೂಪದಲ್ಲಿ ಅದರ ಮೇಲೆ ಬಂದು ಕೂಡಲಿದೆ. ಹುಬ್ಬಳ್ಳಿಯಲ್ಲಿ ಇದರ ನಿರ್ಮಾಣ ಆಗುತ್ತಿದೆ.
‘ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಹಲವು ಸಮೀಕ್ಷೆಗಳು, ಪರೀಕ್ಷೆಗಳ ಬಳಿಕವಷ್ಟೇ ಟ್ರಾವೆಲರ್ಸ್ ನೂಕ್ ನಿರ್ಮಾಣಕ್ಕೆ ಅನುಮತಿ ದೊರೆತಿದೆ. ಸ್ಥಳವನ್ನು ಗುರುತಿಸಿರುವುದು ಸಹ ಅವರೇ. ಹೀಗಾಗಿ ಶೌಚಾಲಯ ನಿರ್ಮಾಣದಲ್ಲಿ ಯಾವ ನಿಯಮ ಉಲ್ಲಂಘನೆಯೂ ಆಗಿಲ್ಲ. ಸ್ಮಾರಕಗಳಿಗಿಂತ ಕನಿಷ್ಠ 200 ಮೀಟರ್ ದೂರದಲ್ಲೇ ಇಂತಹ ಶೌಚಾಲಯಗಳು ಇರುತ್ತವೆ’ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೆಶಕ ಪ್ರಭುಲಿಂಗ ತಳಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಹಂಪಿಯ ಪಾರಂಪರಿಕ ಸೌಂದರ್ಯಕ್ಕೆ ಒಂದಿಷ್ಟು ಕುಂದುಂಟಾಗದ ರೀತಿಯಲ್ಲಿ ಈ ಶೌಚಾಲಯಗಳು ನಿರ್ಮಾಣಗೊಳ್ಳಲಿವೆ. ಶೌಚಾಲಯಗಳ ಮೇಲೆ ಬಿದಿರಿನ ಚಾವಣಿ ಅಳವಡಿಸಲಾಗುತ್ತದೆ, ಆಧುನಿಕ ಸ್ಪರ್ಶದೊಂದಿಗೆ ಸಾಂಪ್ರದಾಯಿಕ ನೋಟದಿಂದ ಇದು ಗಮನ ಸೆಳೆಯಲಿದೆ’ ಎಂದು ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆದಾರರು ತಿಳಿಸಿದರು
ಮಾರ್ಚ್ 30ರೊಳಗೆ ಎಲ್ಲಾ ಕೆಲಸ ಮುಗಿಸಲು ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಡೆದಿದೆ ಎಂದು ಅವರು ತಿಳಿಸಿದರು.
7 ಕಡೆ ಇಂಪೀರಿಯಲ್ ಶೌಚಾಲಯ
ಇಂಪೀರಿಯಲ್ ಶೌಚಾಲಯ ಟ್ರಾವೆಲರ್ಸ್ ನೂಕ್‌ನಲ್ಲಿ ಐಷಾರಾಮಿ ವ್ಯವಸ್ಥೆ ಆಗಿರುತ್ತದೆ. ಇದರಲ್ಲಿ ಪುರುಷ ಮತ್ತು ಮಹಿಳೆಯರಿಗೆ ತಲಾ ಎರಡು ಶೌಚಾಲಯ ಅಂಗವಿಕಲರಿಗೆ ಒಂದು ಶೌಚಾಲಯ ವೈಫೈ ಎಟಿಎಂ ವಿಶ್ರಾಂತಿ ಕೊಠಡಿ ಕೆಫೆ ರೆಸ್ಟೋರೆಂಟ್‌ಗಳೆಲ್ಲವೂ ಇರುತ್ತದೆ. ರಾಯಲ್‌ನಲ್ಲಿ ತಲಾ ಎರಡು ಶೌಚಾಲಯ ಕುಡಿಯುವ ನೀರು ವೈಫೈ ಎಟಿಎಂ ಶಾಪ್ ಇರುತ್ತದೆ. ನೋಬಲ್‌ನಲ್ಲಿ ತಲಾ ಒಂದು ಶೌಚಾಲಯ ಕುಡಿಯುವ ನೀರು ವೈಫೈ ಚಿಕ್ಕ ಶಾಪ್ ಇರುತ್ತದೆ. ಹಂಪಿಯ ಸ್ಮಾರಕಗಳ ಸಮೀಪ ಇಂಪೀರಿಯಲ್ ಇರುವುದಿಲ್ಲ ಹಂಪಿ ಪರಿಸರದಲ್ಲಿ ರಾಯಲ್ ಮತ್ತು ನೋಬಲ್ ಗಳಷ್ಟೇ ಇರುತ್ತವೆ ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.