
ಹೊಸಪೇಟೆ (ವಿಜಯನಗರ): ಹಂಪಿ ಉತ್ಸವದ ಪ್ರಚಾರ ಸಲುವಾಗಿ ಮಂಗಳವಾರ ಬೆಳಿಗ್ಗೆ 8ಕ್ಕೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಿಂದ ಹಂಪಿ ವಿರೂಪಾಕ್ಷ ದೇವಸ್ಥಾನದವರೆಗೆ ಬೈಕ್ ರ‍್ಯಾಲಿ ನಡೆಯಿತು. ಎಲ್ಲೆಡೆ ಉತ್ಸಾಹ ಕಾಣಿಸಿತು.
ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಎಸ್‌ಪಿ ಎಸ್.ಜಾಹ್ನವಿ, ಜಿಲ್ಲಾ ಪಂಚಾಯಿತಿ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಷಾ ಅವರು ಸ್ವತಃ ದ್ವಿಚಕ್ರ ವಾಹನಗಳನ್ನು ಚಲಾಯಿಸಿ ಬೈಕ್ ರ‍್ಯಾಲಿಗೆ ಚಾಲನೆ ನೀಡಿದರು. ಡಿ.ಸಿ, ಎಸ್‌ಪಿ ಅವರು ಪುನೀತ್ ರಾಜ್‌ಕುಮಾರ್ ವೃತ್ತದವರೆಗೆ ವಾಹನ ಚಲಾಯಿಸಿಕೊಂಡು ಬಂದರೆ, ಉಳಿದ ಅಧಿಕಾರಿಗಳು ಹಂಪಿಯವರೆಗೂ ಚಲಾಯಿಸಿಕೊಂಡು ಹೋದರು. ಬಳಿಕ ಡಿಸಿ ಅವರು ಸಹ ಕಾರಿನಲ್ಲಿ ಹಂಪಿಗೆ ತೆರಳಿದರು.
ವಿಶ್ವ ಪಾರಂಪರಿಕ ತಾಣ ಹಂಪಿ ನಿಜವಾದ ರಾಯಭಾರಿಗಳೆಂದರೆ ಪ್ರವಾಸಿ ಮಾರ್ಗದರ್ಶಿಗಳಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅವರೇ ಬೈಕ್ ರ್‍ಯಾಲಿಯಲ್ಲಿ ಪಾಲ್ಗೊಂಡರು.
ಈ ಮಧ್ಯೆ ಜಿಲ್ಲಾಧಿಕಾರಿ ಅವರು ಮಂಗಳವಾರ ಶಾಸಕ ಎಚ್.ಆರ್. ಗವಿಯಪ್ಪ ಅವರ ನಿವಾಸಕ್ಕೆ ತೆರಳಿ ಹಂಪಿ ಉತ್ಸವದ ಆಹ್ವಾನ ಪತ್ರಿಕೆ ನೀಡಿದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್, ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ತಹಶೀಲ್ದಾರ್ ಶ್ರುತಿ ಎಂ.ಎಂ.ಇದ್ದರು.
ಜಿಲ್ಲಾಧಿಕಾರಿ ಅವರು ಕಮಲಾಪುರದ ಅಂಬೇಡ್ಕರ್ ನಗರದ ಜನತೆಗೆ ವಿಐಪಿ ಪಾಸ್‌ಗಳನ್ನು ನೀಡಿ ಹಂಪಿ ಉತ್ಸವಕ್ಕೆ ಆಹ್ವಾನ ನೀಡಿದರು.
ಸಚಿವರಿಂದ ಪರಿಶೀಲನೆ: ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಬುಧವಾರ ಹಂಪಿಗೆ ಬಂದು ಸಿದ್ಧತೆಗಳನ್ನು ಪರಿಶೀಲಿಸಲಿದ್ದಾರೆ. ಸಂಜೆ ತುಂಗಭದ್ರಾ ನದಿಯ ದಡದಲ್ಲಿ ನಡೆಯುವ ತುಂಗಾರತಿಯಲ್ಲೂ ಪಾಲ್ಗೊಳ್ಳುವರು.
ದಾಸೋಹದ ಇತಿಹಾಸ: ಹಂಪಿ ಉತ್ಸವದಲ್ಲಿ ಕಳೆದ ವರ್ಷ ಮೂರೂ ದಿನ 40 ಸಾವಿರಕ್ಕೂ ಅಧಿಕ ಮಂದಿ ಊಟ ಮಾಡಿದ್ದರು. ಶಾಸಕ ಎಚ್.ಆರ್.ಗವಿಯಪ್ಪ ಅವರೇ ವೈಯಕ್ತಿಕವಾಗಿ ಆ ವ್ಯವಸ್ಥೆ ಮಾಡಿದ್ದರು.
‘ಹಂಪಿ ಉತ್ಸವದ ರೂವಾರಿ ಎಂ.ಪಿ.ಪ್ರಕಾಶ್ ಅವರೇ ಗವಿಯಪ್ಪ ಅವರ ಅಪ್ಪ ರಂಗನಗೌಡರೊಂದಿಗೆ ಮನೆಯವರಂತೆಯೇ ಬೆರೆಯುತ್ತಿದ್ದರು. ಹಂಪಿ ಉತ್ಸವವನ್ನು ಮನೆ ಉತ್ಸವ, ವಿರೂಪಾಕ್ಷನ ಉತ್ಸವ ಎಂದೇ ರಂಗನಗೌಡರೂ ಭಾವಿಸಿದ್ದರು. ಹೀಗಾಗಿ ಅನ್ನದಾಸೋಹ ಮಾಡುವ ವೇಳೆ ಅವರು ದಂಪತಿ ಸಮೇತ ಸ್ಥಳದಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೂ ಇದ್ದು ಅನ್ನಸಂತರ್ಪಣೆ ಮಾಡುತ್ತಿದ್ದರು. ಅದೇ ವ್ಯವಸ್ಥೆ ಕಳೆದ ವರ್ಷದವರೆಗೂ ಮುಂದುವರಿದಿತ್ತು. ಈ ಬಾರಿಯೂ ಅದೇ ವ್ಯವಸ್ಥೆ ಇರುತ್ತದೆ ಎಂದು ನಾವು ಭಾವಿಸಿದ್ದೆವು’ ಎಂದು ಹಂಪಿಯಲ್ಲಿ ಹಲವು ಸ್ಥಳೀಯರು ಹೇಳಿಕೊಂಡರು.
ಅನ್ನಸಂತರ್ಪಣೆ ಇಲ್ಲ?
ಹಂಪಿ ಉತ್ಸವದಲ್ಲಿ ಹಲವಾರು ವರ್ಷಗಳಿಂದ ಶಾಸಕ ಎಚ್.ಆರ್.ಗವಿಯಪ್ಪ ಅವರ ಕುಟುಂಬದವರು ಅನ್ನಸಂತರ್ಪಣೆ ಮಾಡುತ್ತ ಬಂದಿದ್ದರು. ಆದರೆ ಈ ಬಾರಿ ಅಂತಹ ಅನ್ನಸಂತರ್ಪಣೆ ಅನುಮಾನ ಎಂದೇ ಹೇಳಲಾಗುತ್ತಿದೆ. ‘ಸರ್ಕಾರದ ಬಳಿ ಸಾಕಷ್ಟು ದುಡ್ಡಿದೆ ಉತ್ಸವಕ್ಕೆ ಅನುದಾನ ಕೊರತೆ ಇಲ್ಲ. ಅನ್ನಸಂತರ್ಪಣೆಗೆ ಯಾರಿಗೋ ಅವಲಂಬಿಸುವ ಅಗತ್ಯ ಜಿಲ್ಲಾಡಳಿತಕ್ಕೆ ಇರಲಾರದು. ಹೀಗಾಗಿ ಜಿಲ್ಲಾಡಳಿತವೇ ಆ ವ್ಯವಸ್ಥೆ ಮಾಡಬಹುದು ಅಥವಾ ಜನರು ತಮ್ಮ ಪಾಡಿಗೆ ತಾವು ಊಟದ ವ್ಯವಸ್ಥೆ ಮಾಡಿಕೊಂಡಾರು’ ಎಂದು ಶಾಸಕರು ತಮ್ಮ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಶಾಸಕರು ಅನ್ನದಾಸೋಹದ ವ್ಯವಸ್ಥೆ ಮಾಡುವ ವಿಶ್ವಾಸ ಇದೆ ಎಂದು ಹೇಳಿದ್ದರು.